Parliament Monsoon Session 2021: ಕೊವಿಡ್ ನಿರ್ವಹಣೆ ಲೋಪಕ್ಕೆ ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್​​ರನ್ನು ಬಲಿಪಶು ಮಾಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ

| Updated By: ರಶ್ಮಿ ಕಲ್ಲಕಟ್ಟ

Updated on: Jul 20, 2021 | 5:35 PM

Mallikarjun Kharge: ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಆದರೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಯ ಸಮಯದಲ್ಲಿ ಅವರು ಏನು ಮಾಡುತ್ತಿದ್ದರು? ನಿಮ್ಮ ಸ್ವಂತ ನಿಯಮಗಳನ್ನು ನೀವು ಉಲ್ಲಂಘಿಸುತ್ತಿದ್ದೀರಿ.

Parliament Monsoon Session 2021: ಕೊವಿಡ್ ನಿರ್ವಹಣೆ ಲೋಪಕ್ಕೆ ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್​​ರನ್ನು ಬಲಿಪಶು ಮಾಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರ ಆರೋಗ್ಯ ಮಾಜಿ ಸಚಿವ ಹರ್ಷವರ್ಧನ್ ಅವರನ್ನು ಕೊರೊನಾವೈರಸ್ ನಿರ್ವಹಣೆ ಲೋಪಕ್ಕೆ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಂಗಳವಾರ ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ, ಪ್ರಧಾನಿ ಜನರಲ್ಲಿ ಪಾತ್ರೆಗಳನ್ನು ಬಡಿಯಲು, ಮೇಣದಬತ್ತಿಗಳನ್ನು ಬೆಳಗಿಸುವಂತೆ ಮನವಿ ಮಾಡಿದರು. ಜನರು ವಿಶ್ವಾಸದಿಂದ ಎಲ್ಲವನ್ನೂ ಮಾಡಿದರು. ಆದರೆ ಅವರು ನೀಡಿದ ಭರವಸೆಯನ್ನು ಈಡೇರಿಸಲಿಲ್ಲ.ಜನರನ್ನು ನಿರಾಶೆಗೊಳಿಸಿದರು. ಅದರ ಆಪಾದನೆಯನ್ನು ತೆಗೆದುಕೊಳ್ಳುವ ಬದಲುಅವರು ಆರೋಗ್ಯ ಮಂತ್ರಿಯನ್ನು ಬಲಿಪಶುವನ್ನಾಗಿ ಮಾಡಿದರು ಎಂದಿದ್ದಾರೆ.

ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಆದರೆ ವಿವಿಧ ರಾಜ್ಯಗಳಲ್ಲಿನ ಚುನಾವಣೆಯ ಸಮಯದಲ್ಲಿ ಅವರು ಏನು ಮಾಡುತ್ತಿದ್ದರು? ನಿಮ್ಮ ಸ್ವಂತ ನಿಯಮಗಳನ್ನು ನೀವು ಉಲ್ಲಂಘಿಸುತ್ತಿದ್ದೀರಿ. ಕೊವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ನಿಮಗೆ ಅದರ ಗೌರವ ಸಲ್ಲಬೇಕು. ಮುನ್ಸೂಚನೆ ನೀಡದೆ ಕೇಂದ್ರವು ರಾತ್ರಿಯಿಡೀ ಲಾಕ್‌ಡೌನ್ ವಿಧಿಸುತ್ತಿದೆ ಎಂದು ಖರ್ಗೆ ಟೀಕಿಸಿದ್ದಾರೆ.


ನೋಟು ಅಮಾನ್ಯೀಕರಣದಂತೆ ರಾತ್ರೋರಾತ್ರಿ ಲಾಕ್‌ಡೌನ್ ಘೋಷಿಸಲಾಯಿತು. ಸರ್ಕಾರ ಅದಕ್ಕೆ ಸಿದ್ಧತೆ ನಡೆಸಲಿಲ್ಲ. ಜನರು ಮನೆಗೆ ಹಿಂತಿರುಗಲು ಯಾವುದೇ ರೈಲುಗಳು ಇರಲಿಲ್ಲ. ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರಿತು. ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದಿದ್ದಾರೆ ಖರ್ಗೆ.


ಕೊವಿಡ್ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಕೊಡುಗೆಯನ್ನು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಶ್ಲಾಘಿಸಿದರು.

ನನಗೆ ನೋವಾಗಿದೆ

“ವೈದ್ಯರು ಮತ್ತು ಅರೆವೈದ್ಯರು ಸೇರಿದಂತೆ ಕೊವಿಡ್ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ. ಕೊವಿಡ್ -19 ರ ಎರಡನೇ ಅಲೆಯ ವೇಳೆ ದೆಹಲಿಯಲ್ಲಿ ‘ಆಕ್ಸಿಜನ್ ಲ್ಯಾಂಗರ್’ ನಡೆಸುವ ಮೂಲಕ ಇತರರಿಗೆ ಸಹಾಯ ಮಾಡಿದ ಜನರಿಗೆ ನಾನು ವಂದಿಸುತ್ತೇನೆ. ಬೆಂಬಲವಾಗಿ ಹೊರಬಂದ ಪ್ಲಾಸ್ಮಾ ದಾನಿಗಳಿಗೆ ನಾನು ವಂದಿಸುತ್ತೇನೆ ಎಂದು ಖರ್ಗೆ ಹೇಳಿದರು.

ಕೊವಿಡ್-19 ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ. ಇವತ್ತು ಕೊವಿಡ್ ಬಗ್ಗೆ ಚರ್ಚೆಯಾಗುವುದಿಲ್ಲವೆಂದು ನಾವು ಅಂದುಕೊಂಡಿದ್ದೆವು.ಬೇರೆ ಬೇರೆ ವಿಷಯಗಳನ್ನು ಚರ್ಚೆ ಮಾಡುವುದಿತ್ತು. ನೀವು ಕೊವಿಡ್ ವಿಷಯವನ್ನು ಚರ್ಚೆಗೆ ತಂದಿದ್ದೀರಿ. ಎಲ್ಲರಿಗೂ ಈ ಬಗ್ಗೆ ಚರ್ಚೆ ನಡೆಯಬೇಕು ಎಂದಿತ್ತು.ಚರ್ಚೆಗೆ ಯಾವ ವಿಷಯ ಬರುತ್ತೋ ಅದರ ಲಾಭ ಸರ್ಕಾರಕ್ಕೂ ಸಿಗುತ್ತದೆ,ಜನರಿಗೂ ಸಮಧಾನವಾಗುತ್ತದೆ. ಹಾಗಾಗಿಯೇ ಇದು ಚರ್ಚೆ ಆಗಬೇಕೆಂದು ನಾವು ಒತ್ತಾಯಿಸಿದ್ದೆವು.  ನೋಟಿಸ್ ಕೂಡಾ ನೀಡಿದ್ದೆವು. ಆದರೆ ಇವತ್ತು ನಾನು ಮಾತನಾಡಲು ನಿಂತಾಗ ನಾಲ್ಕೈದು ಸದಸ್ಯರು ನನ್ನ ಮುಂದೆ ಬಂದು ನಿಂತು ನನ್ನ ಹಕ್ಕನ್ನು ಕಸಿದಾಗ ನೀವು ಸುಮ್ಮನೆ ಕೂತರೆ ಅದು ನೋವಿನ ಸಂಗತಿ. ನಾನು ಅವಮಾನಕ್ಕೊಳಗಾದೆ. ಇದು ಸರಿಯಲ್ಲ. ನನಗೆ 50 ವರ್ಷದ ಅನುಭವವಿದೆ.

ಇತ್ತೀಚಿಗಿನದ್ದು ಹೊರತು ಪಡಿಸಿದರೆ ನಾನು ಈವರೆಗೆ ಒಂದೇ ಒಂದು ಚುನಾವಣೆ ಸೋತಿಲ್ಲ. ಅಲ್ಲಿ ಯಾರ್ಯಾರು ಮಧ್ಯಪ್ರವೇಶಿಸಿದರು ಎಂಬುದು ಗೊತ್ತಿದೆ. ಅವರ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಅದೇನೇ ಇರಲಿ, ನಾವು ಮಾತನಾಡಲು ಸಿದ್ಧವಾದಾಗ ತಾಳ್ಮೆಯಿಂದ ನಾವು ನಮ್ಮ ನಿಲುವು ವ್ಯಕ್ತಪಡಿಸುತ್ತೇವೆ. ಆದರೆ ಎರಡು ಮೂರು ವರ್ಷಗಳ ಹಿಂದೆ ಏನು ಸಮಸ್ಯೆ ಇತ್ತೋ ಅದನ್ನೇ ಅವರು ಹೇಳುತ್ತಾರೆ. ಅದನ್ನು ಸರ್ಕಾರ ಸರಿಪಡಿಸಬೇಕಿತ್ತು ಎಂದು ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ:  Parliament Monsoon Session 2021: ಮುಂಗಾರು ಅಧಿವೇಶನದಲ್ಲಿ ಪೆಗಾಸಸ್ ಬಗ್ಗೆ ವಿಪಕ್ಷಗಳ ಗದ್ದಲ, ಉಭಯ ಸದನಗಳ ಕಲಾಪ ಮುಂದೂಡಿಕೆ

(Former Union Health Minister Harsh Vardhan was made a scapegoat for the mismanagement of coronavirus says Mallikarjun Kharge)

Published On - 4:05 pm, Tue, 20 July 21