ಉತ್ತರ ಪ್ರದೇಶದ ಉನ್ನಾವೋದಲ್ಲಿ ಫ್ಯಾನ್‌ನಿಂದ ವಿದ್ಯುತ್ ಪ್ರವಹಿಸಿ 4 ಮಕ್ಕಳು ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ. ಎಲ್ಲಾ ನಾಲ್ವರು ಮಕ್ಕಳು 9 ವರ್ಷದೊಳಗಿನವರಾಗಿದ್ದು, ಒಂದೇ ಕುಟುಂಬದವರು ಎಂದು ವರದಿಗಳು ತಿಳಿಸಿವೆ. ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ವರದಿಯಾಗಿದೆ.
ವರದಿಗಳ ಪ್ರಕಾರ, ವೀರೇಂದ್ರ ಕುಮಾರ್ ಎಂದು ಗುರುತಿಸಲಾದ ವ್ಯಕ್ತಿಯ 4 ಮಕ್ಕಳು ತಮ್ಮ ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 2 ಗಂಡು ಮತ್ತು 2 ಹೆಣ್ಣುಮಕ್ಕಳು ಸೇರಿದ್ದಾರೆ. ಉನ್ನಾವೋದ ಲಾಲಮಂಖೇಡ ಗ್ರಾಮದಿಂದ ಈ ಘಟನೆ ವರದಿಯಾಗಿದೆ. ಘಟನೆ ನಡೆದಾಗ 4 ಮಕ್ಕಳು ಮಾತ್ರ ಮನೆಯಲ್ಲಿದ್ದರು ಎಂದು ವರದಿಯಾಗಿದೆ. ಅವರ ಪೋಷಕರು ಹೊಲಕ್ಕೆ ಕೆಲಸಕ್ಕೆ ಹೋಗಿದ್ದರು.
ಫ್ಯಾನ್ ಬಳಿ ಆಟವಾಡುತ್ತಿದ್ದ ಮಕ್ಕಳಲ್ಲಿ ಒಬ್ಬರು ಆಕಸ್ಮಿಕವಾಗಿ ಅದನ್ನು ಸ್ಪರ್ಶಿಸಿದಾಗ ವಿದ್ಯುತ್ ಪ್ರವಹಿಸಿದೆ ಅವರು ಸಹಾಯಕ್ಕಾಗಿ ಕೂಗಲು ಪ್ರಾರಂಭಿಸಿದರು. ಆತನ ಕೂಗು ಕೇಳಿದ ಇತರ ಉಳಿದ ಮಕ್ಕಳು ಅಲ್ಲಿಗೆ ಬಂದು ಆತನನ್ನು ರಕ್ಷಿಸಲು ಪ್ರಯತ್ನಿಸಿದರು. ಅವರೂ ಒಂದರ ಹಿಂದೆ ಒಂದರಂತೆ ಫ್ಯಾನ್‌ಗೆ ಸಿಲುಕಿಕೊಂಡರು. ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತಷ್ಟು ಓದಿ: ದೆಹಲಿ: ರೋಹಿಣಿಯಲ್ಲಿ ಡಿಟಿಸಿ ಎಲೆಕ್ಟ್ರಿಕ್ ಬಸ್ ಪಲ್ಟಿ, ಮೂವರಿಗೆ ಗಾಯ
ನೆರೆಹೊರೆಯವರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ದುರಂತದ ಸುದ್ದಿ ತಿಳಿದ ಪೋಷಕರು ರೋದಿಸುತ್ತಾ ಮನೆ ತಲುಪಿದರು. ಅಪಘಾತದಲ್ಲಿ ಸಾವನ್ನಪ್ಪಿದ ಮಕ್ಕಳನ್ನು 9 ವರ್ಷದ ಮಯಾಂಕ್, ಹಿಮಾಂಶಿ (8), ಹಿಮಾಂಕ್ (6) ಮತ್ತು ಮಾನ್ಶಿ (5) ಎಂದು ಗುರುತಿಸಲಾಗಿದೆ.
ಘಟನೆಯ ಬಗ್ಗೆ ಬರಸಗವಾರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅವರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಮಕ್ಕಳ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಮಕ್ಕಳ ಪೋಷಕರು ಎಲ್ಲಾ ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದಾರೆ. ಏತನ್ಮಧ್ಯೆ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ ಮತ್ತು ಎಲ್ಲಾ ವಿಧಿವಿಧಾನಗಳು ಪೂರ್ಣಗೊಂಡ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ