ನುಹ್ ಆಗಸ್ಟ್ 01: ಹರ್ಯಾಣದ (Haryana) ನುಹ್‌ನಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದ ಒಂದು ದಿನದ ನಂತರ ಮಂಗಳವಾರ ಗುರುಗ್ರಾಮ್‌ನ (Gurugram) ಬಾದ್‌ಶಹಪುರದಲ್ಲಿ (Badshahpur) ಸಂಘರ್ಷವುಂಟಾಗಿದೆ. ಮೋಟಾರು ಬೈಕ್‌ಗಳು ಮತ್ತು SUV ಗಳಲ್ಲಿ ಬಂದ ಸುಮಾರು 200 ಪುರುಷರು ಬಿರಿಯಾನಿ ಮತ್ತು ಇತರ ಆಹಾರ ವಸ್ತು ಮಾರಾಟ ಮಾಡುವ ಮಳಿಗೆಗಳನ್ನು ಗುರಿಯಾಗಿಟ್ಟುಕೊಂಡು ಮುಖ್ಯ ಮಾರುಕಟ್ಟೆಯಲ್ಲಿ ಹದಿನಾಲ್ಕು ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಸೆಕ್ಟರ್ 66ರಲ್ಲಿ ಏಳು ಮಳಿಗೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಜನರ ಗುಂಪು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಂಗಡಿಗಳನ್ನು ಧ್ವಂಸ ಮಾಡಿದೆ. ಬಾದ್‌ಶಾಹ್‌ಪುರದ ಮಸೀದಿಯ ಮುಂದೆ ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಾದ್‌ಶಾಹ್‌ಪುರ ಮಾರುಕಟ್ಟೆಯನ್ನು ಸಹ ಮುಚ್ಚಲಾಗಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಸೋಮವಾರ ಸುಮಾರು 45 ಜನರ ಗುಂಪೊಂದು ಗುರುಗ್ರಾಮ್‌ನ ಸೆಕ್ಟರ್ 57 ರ ಮಸೀದಿಯೊಂದರ ಮೇಲೆ ಗುಂಡಿನ ದಾಳಿ ನಡೆಸಿ ನಂತರ ಬೆಂಕಿ ಹಚ್ಚಿತು. ಘಟನೆಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲೀಗ ಪರಿಸ್ಥಿತಿ ಶಾಂತವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿದೆ. ನಿನ್ನೆ ನುಹ್‌ನಲ್ಲಿನ ನಡೆದ ಘರ್ಷಣೆ ನಂತರ ಸೊಹ್ನಾದಲ್ಲಿ ಸಂಘರ್ಷದ ಪರಿಸ್ಥಿತಿ ಇತ್ತು. ಆದಾಗ್ಯೂ, ಸಂಜೆಯ ಹೊತ್ತಿಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಗುರುಗ್ರಾಮ್‌ನಲ್ಲಿ ಸೆಕ್ಟರ್ 57 ಮಸೀದಿಯಲ್ಲಿ ಒಂದು ಸಾವು ವರದಿಯಾಗಿದೆ. ಸೋಹ್ನಾದಲ್ಲಿ 5 ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಮತ್ತು 2-3 ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಗುರುಗ್ರಾಮ್ ಡೆಪ್ಯುಟಿ ಕಮಿಷನರ್ ನಿಶಾಂತ್ ಯಾದವ್ ಹೇಳಿದ್ದಾರೆ.
ಹರ್ಯಾಣ ಸರ್ಕಾರ ಸೋಮವಾರ ಗುರುಗ್ರಾಮ್ ಮತ್ತು ನುಹ್‌ನಲ್ಲಿ ಸೆಕ್ಷನ್ 144 ಸಿಆರ್‌ಪಿಸಿ ವಿಧಿಸಲಾಗಿದೆ. ಗುರುಗ್ರಾಮ್, ಫರಿದಾಬಾದ್ ಮತ್ತು ಪಲ್ವಾಲ್‌ನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮಂಗಳವಾರ ಮುಚ್ಚುವಂತೆ ನಿನ್ನೆ ತಡರಾತ್ರಿ ಆದೇಶಿಸಲಾಗಿದೆ.
ಜಿಲ್ಲೆಯ ಮೂಲಕ ಹಾದು ಹೋಗುತ್ತಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ಮೇಲೆ ದಾಳಿ ನಡೆಸಿದ ನಂತರ ಸೋಮವಾರ ಮಧ್ಯಾಹ್ನ ನುಹ್‌ನಲ್ಲಿ ಘರ್ಷಣೆ ಸಂಭವಿಸಿದೆ. ದಾಳಿಯಲ್ಲಿ ಕನಿಷ್ಠ ಇಬ್ಬರು ಹೋಮ್ ಗಾರ್ಡ್ ಸಾವಿಗೀಡಾಗಿದ್ದು ಪೊಲೀಸರು ಸೇರಿದಂತೆ ಹಲವಾರು ಮಂದಿಗೆ ಗಾಯಗಳಾಗಿವೆ.
ಇದನ್ನೂ ಓದಿ: ಹರ್ಯಾಣದಲ್ಲಿ ಕೋಮು ಘರ್ಷಣೆ: 3 ಮಂದಿ ಸಾವು, ಇಂಟರ್ನೆಟ್ ಸ್ಥಗಿತ
ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆಯನ್ನು ಹದಗೆಡಿಸಲು ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಮಾನೇಸರ್‌ನಲ್ಲಿ ಮಹಾಪಂಚಾಯತ್ ನಡೆಯಲಿದೆ. ಮುಸ್ಲಿಂ ಪುರುಷರ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸುವಂತೆ ಗ್ರಾಮಸ್ಥರು ಮತ್ತು ವಿಶ್ವ ಹಿಂದೂ ಪರಿಷತ್ ಬೆಂಬಲಿಗರು ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ಗುರುಗ್ರಾಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇಂಧನ ಕೇಂದ್ರಗಳು ತಕ್ಷಣವೇ ಜಾರಿಗೆ ಬರುವಂತೆ ಯಾವುದೇ ವ್ಯಕ್ತಿಗೆ ಪೆಟ್ರೋಲ್/ಡೀಸೆಲ್ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಹರಿಯಾಣದ ನುಹ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಆ ಪ್ರದೇಶದಲ್ಲಿನ ಕೋಮು ಅಶಾಂತಿಯ ದೃಷ್ಟಿಯಿಂದ ಗುರುಗ್ರಾಮ್‌ನ ಸೋಹ್ನಾ ಉಪವಿಭಾಗದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಆಗಸ್ಟ್ 2 ರಂದು ಮುಚ್ಚಲಾಗುವುದು. ನೆರೆಯ ಜಿಲ್ಲೆಯ ನುಹ್‌ನಲ್ಲಿನ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಗುರುಗ್ರಾಮ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:32 pm, Tue, 1 August 23