ಹರ್ಯಾಣದಲ್ಲಿ ಹಿಂಸಾಚಾರ; ಸಂಘರ್ಷಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಮೋನು ಮಾನೇಸರ್ ಯಾರು?
ಮೋನು ಮಾನೇಸರ್ ಅಥವಾ ಮೋಹಿತ್ ಯಾದವ್, ಮೇವಾತ್‌ನಲ್ಲಿ ಗೋರಕ್ಷಕರ ಗುಂಪನ್ನು ಮುನ್ನಡೆಸುತ್ತಿದ್ದು, ಗೋರಕ್ಷಕರ ದಾಳಿಯ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾನೆ. ಈತ "ಲವ್ ಜಿಹಾದ್" ವಿರುದ್ಧದ ಅಭಿಯಾನಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ.
ದೆಹಲಿ ಆಗಸ್ಟ್ 1: ಹರ್ಯಾಣದ (Haryana) ಗುರುಗ್ರಾಮ್ ಬಳಿಯ ನುಹ್‌ನಲ್ಲಿ ಸೋಮವಾರ ಧಾರ್ಮಿಕ ಮೆರವಣಿಗೆಯ ವೇಳೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂದೆ ಇಬ್ಬರು ಮುಸ್ಲಿಂ ವ್ಯಕ್ತಿಗಳ ಹತ್ಯೆಯ ಆರೋಪಿ, ವಾಟೆಂಡ್ ವ್ಯಕ್ತಿಯಾಗಿರುವ ಬಜರಂಗದಳ ನಾಯಕ (Bajrang Dal) ಮೋನು ಮಾನೇಸರ್ (Monu Manesar) ಮೆರವಣಿಗೆಯಲ್ಲಿ ಭಾಗಿಯಾಗುತ್ತಾನೆ ಎಂಬ ವದಂತಿಯೇ ಈ ಹಿಂಸಾಚಾರಕ್ಕೆ ಕಾರಣ ಎನ್ನಲಾಗಿದೆ. ನುಹ್‌ನಲ್ಲಿ ನಿನ್ನೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಹೋಮ್ ಗಾರ್ಡ್ ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದು, ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರ ಗುರುಗ್ರಾಮ್‌ಗೂ ಹರಡಿದ್ದು ಅಲ್ಲಿ ರಾತ್ರೋರಾತ್ರಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ.
ಮೋನು ಮಾನೇಸರ್ ಅವರು ಕೆಲವು ದಿನಗಳ ಹಿಂದೆ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ತಾನು ನುಹ್ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿಕೊಂಡಿದ್ದ. ಈ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಮನವಿ ಮಾಡಲಾಗಿತ್ತು. ಮೋನು ಮಾನೇಸರ್ ಮೆರವಣಿಗೆಯಲ್ಲಿ ಪಾಲ್ಗೊಂಡರೆ ಸಮಸ್ಯೆ ಆಗಬಹುದು ಎಂದು ವಿಶ್ವ ಹಿಂದೂ ಪರಿಷತ್ತಿನ ಸಲಹೆಯ ಮೇರೆಗೆ ಆತ ರು ಕೂಟದಲ್ಲಿ ಭಾಗವಹಿಸಲಿಲ್ಲ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಭಿವಾನಿಯಲ್ಲಿ ಫೆಬ್ರವರಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಇಬ್ಬರು ಮುಸ್ಲಿಂ ಪುರುಷರನ್ನು ಅಪಹರಿಸಿ ಹತ್ಯೆ ಮಾಡಿದ ಆರೋಪದ ಮೇಲೆ 30 ವರ್ಷದ ಮೋನು ಮಾನೇಸರ್ನ್ನು ಪೊಲೀಸರು ಹುಡುಕುತ್ತಿದ್ದಾರೆ.
ಭಿವಾನಿಯಲ್ಲಿ ಜಾನುವಾರು ವ್ಯಾಪಾರಿಗಳಾದ ಜುನೈದ್ ಮತ್ತು ನಾಸಿರ್ ಎಂಬ ಇಬ್ಬರು ಮುಸ್ಲಿಂ ವ್ಯಕ್ತಿಗಳ ಮೃತದೇಹ ಕಾರೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಾಜಸ್ಥಾನದ ಭರತ್‌ಪುರದಲ್ಲಿರುವ ಅವರ ಕುಟುಂಬಗಳು ಈ ಯುವಕರನ್ನು ಬಜರಂಗದಳದ ಸದಸ್ಯರು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆದಾಗ್ಯೂ ಬಜರಂಗದಳ ಈ ಆರೋಪವನ್ನು ನಿರಾಕರಿಸಿದೆ.
ರಾಜಸ್ಥಾನ ಪೊಲೀಸರು ಮಾನೇಸರ್‌ನನ್ನು ಕೆಲವು ಬಾರಿ ಬಂಧಿಸಲು ಬಂದಿದ್ದರು. ಆದರೆ ಮಾಹಿತಿ ಸೋರಿಕೆಯಾಗಿದ್ದರಿಂದ ಮಾನೇಸರ್ ತಪ್ಪಿಸಿಕೊಂಡಿದ್ದ.
ಇದನ್ನೂ ಓದಿ: ಗುರುಗ್ರಾಮ್ ಮಸೀದಿಗೆ ಬೆಂಕಿ, ರಾತ್ರಿ ನಡೆದ ದಾಳಿಯಲ್ಲಿ ಇಮಾಮ್ ಹತ್ಯೆ: ಕೇಂದ್ರ ಸಚಿವ ರಾವ್ ಇಂದರ್‌ಜಿತ್ ಸಿಂಗ್
ಮೋನು ಮಾನೇಸರ್ ಅಥವಾ ಮೋಹಿತ್ ಯಾದವ್, ಮೇವಾತ್‌ನಲ್ಲಿ ಗೋರಕ್ಷಕರ ಗುಂಪನ್ನು ಮುನ್ನಡೆಸುತ್ತಿದ್ದು, ಗೋರಕ್ಷಕರ ದಾಳಿಯ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾನೆ. ಈತ “ಲವ್ ಜಿಹಾದ್” ವಿರುದ್ಧದ ಅಭಿಯಾನಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ.
2019 ರಲ್ಲಿ ಹಸು ಕಳ್ಳಸಾಗಣೆದಾರರನ್ನು ಹಿಂಬಾಲಿಸುವಾಗ ಗುಂಡು ಹಾರಿಸಿ ಮಾಸೇಸರ್ ಸುದ್ದಿಯಾಗಿದ್ದ. 2015 ರಲ್ಲಿ ಗೋಸಂರಕ್ಷಣಾ ಕಾನೂನನ್ನು ಜಾರಿಗೊಳಿಸಿದ ನಂತರ ಹರ್ಯಾಣ ಸರ್ಕಾರ ಸ್ಥಾಪಿಸಿದ ಜಿಲ್ಲಾ ಗೋಸಂರಕ್ಷಣಾ ಕಾರ್ಯಪಡೆಯ ಸದಸ್ಯನಾಗಿದ್ದಾನೆ ಈತ.
ಯುಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಹತ್ತಾರು ಸಾವಿರ ಅನುಯಾಯಿಗಳನ್ನು ಹೊಂದಿರುವ ಮೋನು ಮಾನೇಸರ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಆಗಾಗ್ಗೆ ಶಸ್ತ್ರಾಸ್ತ್ರಗಳು ಮತ್ತು ಕಾರುಗಳ ಚಿತ್ರವನ್ನು ಪೋಸ್ಟ್ ಮಾಡುತ್ತಿರುತ್ತಾನೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ