ಚೆನ್ನೈ: ಮೊಸರು ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ದಹಿ (Dahi) ಎಂದು ನಮೂದಿಸುವಂತೆ ಭಾರತದ ಆಹಾರ ಸುರಕ್ಷತಾ ಪ್ರಾಧಿಕಾರ ಸೂಚಿಸಿದ್ದು ಇದಕ್ಕೆ ತಮಿಳುನಾಡಿನಲ್ಲಿ (Tamilnadu) ಭಾರೀ ಆಕ್ರೋಶ ವ್ಯಕ್ತವಾಗಿದೆ.ಇದು ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರುವ (Hindi imposition) ಪ್ರಯತ್ನವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಮತ್ತು ತಮಿಳುನಾಡಿನ ಹಾಲು ಉತ್ಪಾದಕರು ಹೇಳಿದ್ದಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತಮಿಳುನಾಡಿನ ಹಾಲು ಉತ್ಪಾದಕರ ಒಕ್ಕೂಟಕ್ಕೆ ಈ ನಿರ್ದೇಶನವನ್ನು ನೀಡಿದ್ದು ಮೊಸರು ಪ್ಯಾಕೆಟ್‌ಗಳ ಲೇಬಲ್‌ಗಳನ್ನು ಇಂಗ್ಲಿಷ್‌ನಲ್ಲಿ ” Curd ” ಮತ್ತು ತಮಿಳಿನಲ್ಲಿ “ತೈರ್” ಎಂದು ಬರೆದಿರುವುದನ್ನು ಹಿಂದಿಯಲ್ಲಿ “ದಹಿ” ಎಂದು ಬದಲಾಯಿಸುವಂತೆ ಸೂಚಿಸಿದೆ. ಈ ನಿರ್ದೇಶನವು ಬೆಣ್ಣೆ ಮತ್ತು ಚೀಸ್‌ನಂತಹ ಇತರ ಡೈರಿ ಉತ್ಪನ್ನಗಳಿಗೂ ಅನ್ವಯಿಸುತ್ತದೆ.
ಈ ಕ್ರಮಕ್ಕೆ ತಮಿಳುನಾಡು ಮತ್ತು ನೆರೆಯ ಕರ್ನಾಟಕದ ಹಾಲು ಉತ್ಪಾದಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೊಸರು ಪ್ಯಾಕೆಟ್ ಗಳಲ್ಲಿ ತಮ್ಮ ಪ್ರಾದೇಶಿಕ ಭಾಷೆಗಳನ್ನು ಬಳಸುವುದನ್ನು ಮುಂದುವರಿಸಲು ಹಾಲು ಉತ್ಪಾದಕರು FSSAI ಗೆ ಪತ್ರ ಬರೆದಿದ್ದಾರೆ. ಮೊಸರು ಎಂಬುದು ಯಾವುದೇ ಭಾಷೆಯಲ್ಲಿ ಬಳಸಬಹುದಾದ ಸಾಮಾನ್ಯ ಪದ.”ದಹಿ” ಎಂಬುದು ಮೊಸರಿನ ರುಚಿ ಮತ್ತು ಸ್ವಭಾವದಲ್ಲಿ ಭಿನ್ನವಾಗಿರುವ ಒಂದು ನಿರ್ದಿಷ್ಟ ಉತ್ಪನ್ನವಾಗಿದೆ ಎಂದು ಅವರು ವಾದಿಸುತ್ತಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಈ ನಿರ್ದೇಶನವನ್ನು ಹಿಂದಿ ಹೇರಿಕೆಯ ಪ್ರಕರಣ ಎಂದು ಟೀಕಿಸಿದ್ದು, ಇದನ್ನು ದಕ್ಷಿಣ ಭಾರತದ ಜನರು ದೂರವಿಡಬೇಕು ಎಂದಿದ್ದಾರೆ. ಹಿಂದಿ ಹೇರಿಕೆಯ ನಿರ್ಲಜ್ಜ ಒತ್ತಾಯಗಳು ಹಿಂದಿಯಲ್ಲಿ ಮೊಸರು ಪ್ಯಾಕೆಟ್ ಮೇಲೂ ಬರೆಯುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ, ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಇದು ದೂರ ಮಾಡುತ್ತದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸಬೇಕು ಎಂದಿದ್ದಾರೆ.
The unabashed insistences of #HindiImposition have come to the extent of directing us to label even a curd packet in Hindi, relegating Tamil & Kannada in our own states.
Such brazen disregard to our mother tongues will make sure those responsible are banished from South forever. https://t.co/6qvARicfUw pic.twitter.com/gw07ypyouV
— M.K.Stalin (@mkstalin) March 29, 2023
ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಕೂಡಾ ದಹಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದು, ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡುವ ನೀತಿಗೆ ಅನುಗುಣವಾಗಿಲ್ಲ. ನಾನು ನಿರ್ದೇಶನವನ್ನು ಹಿಂಪಡೆಯಲು ಒತ್ತಾಯಿಸಿರುವುದಾಗಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ತಮಿಳುನಾಡು ವಿರೋಧಿಸುತ್ತಿರುವುದು ಇದೇ ಮೊದಲಲ್ಲ. ತಮಿಳುನಾಡು 1930 ರ ದಶಕದ ಹಿಂದಿನ ಹಿಂದಿ ವಿರೋಧಿ ಆಂದೋಲನದ ಸುದೀರ್ಘ ಇತಿಹಾಸವನ್ನು ಹೊಂದಿದೆ. 1960 ರ ದಶಕದಲ್ಲಿ ಹಿಂದಿ ಹೇರಿಕೆಯ ವಿರುದ್ಧದ ಬೃಹತ್ ಪ್ರತಿಭಟನೆಗಳು ಸ್ಟಾಲಿನ್ ಅವರ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (DMK) ಅನ್ನು ಅಧಿಕಾರಕ್ಕೆ ತಂದವು. ಹಿಂದಿ ಮಾತನಾಡದ ರಾಜ್ಯಗಳು ಹಿಂದಿಯನ್ನು ಸ್ವೀಕರಿಸುವವರೆಗೆ ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಮುಂದುವರಿಸಲು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಭರವಸೆ ನೀಡಿದ್ದರು.
ಇದನ್ನೂ ಓದಿ:Lalit Modi: ಯುಕೆನಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆಯೊಡ್ಡಿದ ಲಲಿತ್ ಮೋದಿ
ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಹಿಂದಿ ಕಲಿಯಬೇಕು ಎನ್ನುವ ಹೊಸ ಶಿಕ್ಷಣ ನೀತಿಯ ಭಾಗವಾದ ತ್ರಿಭಾಷಾ ಸೂತ್ರವನ್ನು ತಮಿಳುನಾಡು ತೀವ್ರವಾಗಿ ವಿರೋಧಿಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ