ನವದೆಹಲಿ, ಫೆಬ್ರುವರಿ 9: ಭವಿಷ್ಯದ ಅಪರಾಧಗಳ ಬಗ್ಗೆ ವಿಚಾರ ವಿನಿಮಯ ಮತ್ತು ಹೋರಾಟ ರೂಪಿಸಲು ಫ್ಯೂಚರ್ ಕ್ರೈಮ್ ಸಮಿಟ್ (FutureCrime Summit 2024) ರೂಪಿಸಲಾಗಿದೆ. ಇದರ ಮೊದಲ ಆವೃತ್ತಿ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ. ನಿನ್ನೆ ಫೆಬ್ರುವರಿ 8ಕ್ಕೆ ಆರಂಭಗೊಂಡ 2024ರ ಫ್ಯೂಚರ್ಕ್ರೈಮ್ ಸಮಿಟ್ ಇಂದು ಸಂಜೆ ಮುಕ್ತಾಯಗೊಳ್ಳುತ್ತಿದೆ. ಕಾನಪುರ್ ಐಐಟಿಯ ಸಹಯೋಗದೊಂದಿಗೆ ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (FCRF) ಈ ಸಮಾವೇಶವನ್ನು ಆಯೋಜಿಸಿದೆ. ದೇಶದ ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಫೋರೆನ್ಸಿಕ್ಸ್, ಹಣಕಾಸು ಅಪರಾಧ ನಿಯಂತ್ರಣ ಕ್ಷೇತ್ರದ ಸರ್ವೋತ್ಕೃಷ್ಟ ಪರಿಣಿತರು ಈ ಸಮಿಟ್ನಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ, ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ತಂತ್ರಜ್ಞಾನ ಆವಿಷ್ಕರಣೆಗೊಂಡಂತೆಲ್ಲಾ ಅಪರಾಧಗಳ ವಿಸ್ತಾರ ಮತ್ತು ಪರಿಭಾಷೆ ಬದಲಾಗುತ್ತಲೇ ಇರುತ್ತದೆ. ಅಪರಾಧಿಗಳು ಹೊಸ ಹೊಸ ತಂತ್ರಜ್ಞಾನ ಬಳಸಿ ಘಾತುಕ ಕೃತ್ಯ ಎಸಗುತ್ತಾರೆ. ಇವತ್ತು ಆನ್ಲೈನ್ನಲ್ಲಿ ಹಣ ವಂಚನೆ ಮಾಡುವುದು ಇತ್ಯಾದಿ ಸೈಬರ್ ಕ್ರೈಮ್ ಹೆಚ್ಚಾಗಿದೆ. ಭವಿಷ್ಯದಲ್ಲಿ ವೆಬ್3 ತಂತ್ರಜ್ಞಾನದ ಹವಾ ಇರಲಿದ್ದು, ಸೈಬರ್ ಕ್ರಿಮಿನಲ್ಗಳಿಗೆ ಅದೂ ಕೂಡ ಅಸ್ತ್ರವಾಗಬಹುದು. ಹೀಗಾಗಿ, ವೆಬ್ 3.0 ಕಾನೂನು ಜಾರಿ, ಕ್ರಿಪ್ಟೋ ಕ್ರೈಮ್, ಬ್ಲಾಕ್ಚೈನ್ ಫೋರೆನ್ಸಿಂಗ್, ಪ್ರೆಡಿಕ್ಟಿವ್ ಪೋಲಿಸಿಂಗ್ ಇತ್ಯಾದಿ ವಿಷಯಗಳತ್ತ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಫ್ಯೂಚರ್ಕ್ರೈಮ್ ಸಮಿಟ್ ಪರಿಣಾಮಕಾರಿ ವೇದಿಕೆ ಆಗಿದೆ.
ಇದನ್ನೂ ಓದಿ: ಹಲ್ದ್ವಾನಿ ಹಿಂಸಾಚಾರ ಪೂರ್ವ ಯೋಜಿತ: ಜಿಲ್ಲಾ ಮೆಜಿಸ್ಟ್ರೇಟ್
ರಕ್ಷಣಾ ಸಚಿವಾಲಯದ ಮುಖ್ಯ ಸಲಹೆಗಾರ ವಿನೋದ್ ಜಿ ಖಂಡರೆ, ಎಲೆಕ್ಟ್ರಾನಿಕ್ಸ್ ಸಚಿವಾಲಯದಲ್ಲಿ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್ ಆಗಿರುವ ಲೆಫ್ಟಿನೆಂಟ್ ಜನರಲ್ ಎಂ.ಯು. ನಾಯರ್, ಆಂಧ್ರದ ಮಾಜಿ ಡಿಜಿಪಿ ಸಂತೋಷ್ ಮೆಹ್ರಾ, ಐಐಟಿ ಕಾನಪುರ್ನ ಸಿಇಒ ಡಾ. ನಿಖಿಲ್ ಅಗರ್ವಾಲ್, ಉ.ಪ್ರ. ಮಾಜಿ ಡಿಜಿಪಿ ಡಾ. ವಿಕ್ರಮ್ ಸಿಂಗ್ ಮೊದಲಾದ ಪರಿಣಿತರು ಎರಡು ದಿನಗಳ ಈ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಪೇಟಿಎಂ, ಟೆಕ್ ಮಹೀಂದ್ರ ಮೊದಲಾದ ಹಣಕಾಸು ಮತ್ತು ಫಿನ್ಟೆಕ್ ಕಂಪನಿಗಳಿಂದ ಪರಿಣಿತರು ಬಂದು ಮಾತನಾಡಿದ್ದಾರೆ.
ಇದನ್ನೂ ಓದಿ: ಟಿವಿ ಚಾನಲ್ನಲ್ಲಿ ಬರೋ ಬಿಸಿನೆಸ್ ತಜ್ಞರಿಗೆ ದಂಡ ಕಕ್ಕಿಸಿದ ಸೆಬಿ; ಒಳಗೊಳಗೆ ನಡೆದಿರುತ್ತೆ ಡೀಲಿಂಗ್, ಹುಷಾರ್
ಪ್ರೋಡಿಸ್ಕವರ್ ಫೋರೆನ್ಸಿಕ್ಸ್, ಎಕ್ಸ್ಟೆರೋ, ಟ್ರೈನೆಕ್ಸಿಯಾ, ರೀ ಸೆಕ್ಯೂರಿಟಿ, ಇಸೆಕ್ಫೋರ್ಟ್, ಇನ್ನೇಫು ಲ್ಯಾಬ್ಸ್, ಫೋರೆನ್ಸಿಕ್ಸ್ ಕೇರ್, ಎಂಎಸ್ಎಬಿ, ಟೆಕ್ಡಿಫೆನ್ಸ್, ಎಂಫಿಲ್ಟರ್ಐಟಿ, ನ್ಯಾಂಗಿಯಾ ಆಂಡರ್ಸನ್ ಇಂಡಿಯಾ ಮತ್ತು ಆರ್ಮಾನ್ಟೆಕ್ ಸಂಸ್ಥೆಗಳು ಈ ಶೃಂಗಸಭೆಯ ಪ್ರಾಯೋಜಕತ್ವ ವಹಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ