Ganesh Procession Violence: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, 13 ಮಂದಿ ಬಂಧನ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2022 | 4:04 PM

ವಡೋದರಾದ ಸೂಕ್ಷ್ಮ ಪ್ರದೇಶದಲ್ಲಿ ಗಣೇಶನ ಮೂರ್ತಿ ಹಾದು ಹೋಗುತ್ತಿದ್ದಾಗ ಎರಡು ಸಮುದಾಯಗಳ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, 13 ಮಂದಿಯನ್ನು ಬಂಧಿಸಲಾಗಿದೆ.

Ganesh Procession Violence: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, 13 ಮಂದಿ ಬಂಧನ
ಸಾಂದರ್ಭಿಕ ಚಿತ್ರ
Follow us on

ಗುಜರಾತ್‌: ಗುಜರಾತ್‌ನ ವಡೋದರಾದಲ್ಲಿ ಸೋಮವಾರ ರಾತ್ರಿ ಗಣೇಶನ ಮೂರ್ತಿಯನ್ನು ಹೊತ್ತ ಮೆರವಣಿಗೆಯು ಸೂಕ್ಷ್ಮ ಪ್ರದೇಶದಲ್ಲಿ ಸಾಗುತ್ತಿದ್ದಾಗ ಎರಡು ಸಮುದಾಯಗಳ ಸದಸ್ಯರು ಪರಸ್ಪರ ಘರ್ಷಣೆ ಮತ್ತು ಕಲ್ಲುಗಳನ್ನು ಎಸೆದಿದ್ದಾರೆ ಇದೀಗ ಅಲ್ಲಿ ಉದ್ವಿಗ್ನತೆ ಉಂಟಾಗಿದೆ. ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೂರ್ತಿಯನ್ನು ಶಾಂತಿಯುತವಾಗಿ ಕೊಂಡೊಯ್ಯಲಾಯಿತು.

ಗಲಭೆ ಮತ್ತು ಕಾನೂನುಬಾಹಿರ ಸಭೆ ಆರೋಪದ ಮೇಲೆ ಎರಡೂ ಕಡೆಯ ಸದಸ್ಯರ ವಿರುದ್ಧ ವಡೋದರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 13 ಜನರನ್ನು ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಕಲ್ಲು ತೂರಾಟದಲ್ಲಿ ಯಾರಿಗೂ ಗಾಯಗಳಾಗಿಲ್ಲ.

ಎಫ್‌ಐಆರ್ 143 (ಕಾನೂನುಬಾಹಿರ ಸಭೆ), 147 (ಗಲಭೆ), 336 (ಮಾನವ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ದುಡುಕಿನ ಕೃತ್ಯ), 295 (ಆರಾಧನಾ ಸ್ಥಳವನ್ನು ಅಪವಿತ್ರಗೊಳಿಸುವುದು) ಸೇರಿದಂತೆ ವಿವಿಧ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ.

ರಾತ್ರಿ 11.15ರ ಸುಮಾರಿಗೆ ಕೋಮು ಸೂಕ್ಷ್ಮ ಮಾಂಡವಿ ಪ್ರದೇಶದ ಪಾಣಿಗೇಟ್ ದರ್ವಾಜಾ ಮೂಲಕ ಗಣೇಶ ಮೆರವಣಿಗೆ ಸಾಗುತ್ತಿದ್ದಾಗ ಚಿಕ್ಕ ವಿಷಯಕ್ಕೆ ಎರಡು ಗುಂಪುಗಳ ನಡುವೇ ವಾಗ್ವಾದ ನಡೆದು ಎರಡು ಸಮುದಾಯಗಳ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ನಗರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ಸಮುದಾಯಗಳ ಜನರು ಪರಸ್ಪರ ಜಗಳವಾಡಲು ಪ್ರಾರಂಭಿಸಿದರು. ಎರಡೂ ಗುಂಪಿನ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸುವುದರೊಂದಿಗೆ ವಿಷಯ ವಿಕೋಪಕ್ಕೆ ಹೋಗಿತ್ತು. ಈ ಘಟನೆಯಿಂದ ಮಸೀದಿಯೊಂದರ ಮುಖ್ಯ ದ್ವಾರದ ಗಾಜಿಗೆ ಹಾನಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಪೊಲೀಸ್ ಉಪಸ್ಥಿತಿಯನ್ನು ಹೆಚ್ಚಿಸಲಾಗಿದೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಗಸ್ತು ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಶಾಂತಿಯುತವಾಗಿದೆ ಮತ್ತು ಘಟನೆಯ ಬಗ್ಗೆ ಅಪರಾಧ ವಿಭಾಗದ ತನಿಖೆ ನಡೆಸುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಚಿರಾಗ್ ಕೊರಾಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಯಾವುದೇ ರೀತಿಯ ವದಂತಿಗಳಿಗೆ ಗಮನ ಕೊಡಬೇಡಿ ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.