ನವದೆಹಲಿ: ಜನರ ಗಮನ ಸೆಳೆದಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ (Vande Bharat Express Train) ಬೋಗಿಯೊಂದರಲ್ಲಿ ತುಂಬಿದ್ದ ಕಸದ ರಾಶಿಯ ಫೋಟೋವೊಂದು (Garbage photo) ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ವಂದೇ ಭಾರತ್ ರೈಲನ್ನು ಭಾರತದ ಪ್ರಗತಿಯ ಸಂಕೇತವೆಂದೇ ಗುರುತಿಸುವ ಜನರಿಗೆ ಈ ಫೋಟೋ ಇರಿಸುಮುರಿಸು ತಂದಿದೆ.
ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan) ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ರೈಲಿನ ಬೋಗಿಗಳಲ್ಲಿ ಬಾಟಲಿಗಳು, ಪ್ಲಾಸ್ಟಿಕ್ ಬ್ಯಾಗು ಇತ್ಯಾದಿ ತ್ಯಾಜ್ಯಗಳು ಬಿದ್ದಿರುವುದು ಮತ್ತು ಕಾರ್ಮಿಕರೊಬ್ಬರು ಪೊರಕೆ ಹಿಡಿದು ಇವುಗಳನ್ನು ಗುಡಿಸಲು ನಿಂತಿರುವುದನ್ನು ಈ ಫೋಟೋದಲ್ಲಿ ಕಾಣಬಹುದು. ಐಎಎಸ್ ಅಧಿಕಾರಿ ಈ ಫೋಟೋ ಹಾಕಿ ವೀ ದಿ ಪೀಪಲ್ (ನಾವು ಜನರು) ಎಂದು ಕ್ಯಾಪ್ಚನ್ ಕೊಟ್ಟು ಮಾರ್ಮಿಕವಾಗಿ ಜನರ ಬೇಜಾವ್ದಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವನೀಶ್ ಶರಣ್ ಅವರ ಈ ಪೋಸ್ಟ್ಗೆ ಹಲವು ಟ್ವೀಟಿಗರು ಸ್ಪಂದಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಜನರ ನಡವಳಿಕೆಯನ್ನು ಬಹಳ ಮಂದಿ ಖಂಡಿಸಿದ್ದಾರೆ. ಅಂಥ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.
ಸರ್, ಜನರಿಗೆ ತಮ್ಮ ಹಕ್ಕು ಏನೆಂದು ಗೊತ್ತಿದೆಯೇ ಹೊರತು ತಮ್ಮ ಕರ್ತವ್ಯ ಏನೆಂದು ತಿಳಿದಿಲ್ಲ ಎಂದು ಒಬ್ಬರು ಬರೆದರೆ, ನಾವು ಉತ್ತಮ ಸೌಲಭ್ಯ, ಸೌಕರ್ಯ ಬೇಕೆಂದು ಕೇಳುತ್ತೇವೆ. ಆದರೆ, ಅದನ್ನು ಹೇಗೆ ಪಾಲಿಸಬೇಕು, ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಗೊತ್ತಿಲ್ಲ ಎಂದು ಮಗದೊಬ್ಬರು ಹತಾಶೆ ಪಟ್ಟಿದ್ದಾರೆ.
ಯಾವುದೇ ರೈಲಿನಲ್ಲೂ ಇದು ಸಾಮಾನ್ಯ ಎಂದು ಇನ್ನೊಬ್ಬರು ಇನ್ನಷ್ಟು ಹತಾಶೆಯಿಂದ ಬರೆದಿದ್ದಾರೆ. ನಮ್ಮ ಜವಾಬ್ದಾರಿ ಅರಿಕೊಳ್ಳದಿದ್ದರೆ ಏನೂ ಬದಲಾಗದು. ದೇಶವನ್ನು ಆರೋಗ್ಯಯುತವಾಗಿ ಹೇಗೆ ಇಟ್ಟುಕೊಳ್ಳಬೇಕೆಂಬುದು ಜನರಿಗೆ ಗೊತ್ತಿರಬೇಕು ಎಂದೊಬ್ಬರು ಕಾಮೆಂಟಿಸಿದ್ದಾರೆ.
“We The People.”
Pic: Vande Bharat Express pic.twitter.com/r1K6Yv0XIa
— Awanish Sharan (@AwanishSharan) January 28, 2023
Unless we understand responsibility nothing will change. People have to understand how to keep nation healthy.
— abhi (@abhi4al) January 28, 2023
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಸದ ರಾಶಿ ಕಾಣಿಸುವ ವಿಚಾರ ಈಗ ಹೊಸದಾಗಿ ಉಳಿದಿಲ್ಲ. ಕೆಲ ದಿನಗಳ ಹಿಂದೆ ಸಿಕಂದರಾಬಾದ್ ವಿಶಾಖಪಟ್ಟಣಂ ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಬೋಗಿಗಳಲ್ಲಿ ಕಸಗಳ ರಾಶಿಯೇ ತುಂಬಿರುವುದು ಬೆಳಕಿಗೆ ಬಂದಿತ್ತು. ಸಿಬ್ಬಂದಿ ದಿನವೂ ಬೋಗಿಗಳನ್ನು ಸ್ವಚ್ಛಗೊಳಿಸುತ್ತಿದ್ದರೂ ಕಸ ತುಂಬುತ್ತಲೇ ಹೋಗುತ್ತಿದೆ. ರೈಲ್ವೆ ಇಲಾಖೆ ನಿರಂತರವಾಗಿ ಸ್ವಚ್ಛತಾ ಜಾಗೃತಿ ಮೂಡಿಸುವ ಕೆಲಸವನ್ನಂತೂ ಮಾಡುತ್ತಿದೆ. ಆದರೆ, ಎಲ್ಲೆಂದರಲ್ಲಿ ಕಸ ಬಿಸಾಡುವ ಕೆಲ ಜನರ ಚಾಳಿ ಮಾತ್ರ ಬದಲಾದಂತೆ ಕಾಣುತ್ತಿಲ್ಲ.