‘ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಅತಿಯಾದ ನಂಬಿಕೆಯಿದೆ’; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ಇಂದು ನಡೆದ ವಿಶ್ವದ ಬೃಹತ್ ಯುವ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, "ಜೆನ್-ಜಿ (ಯುವ ಪೀಳಿಗೆ)ಯನ್ನು ನಾನು ಕುರುಡಾಗಿ ನಂಬುತ್ತೇನೆ. ಅವರು ಪ್ರತಿಭಟನೆ ನಡೆಸಿದರು ಎಂಬ ಕಾರಣಕ್ಕೆ ಅವರನ್ನು ದೇಶವಿರೋಧಿಗಳು ಎಂದು ಹೇಳಲು ಸಾಧ್ಯವಿಲ್ಲ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ" ಎಂದು ಹೇಳಿದರು. 'ಭಾರತೀಯ ಮಾರ್ಗದಲ್ಲಿ ವಿಶ್ವವನ್ನು ಒಂದುಗೂಡಿಸುವಲ್ಲಿ ಯುವಜನತೆಯ ಪಾತ್ರ' ಎಂಬ ಕುರಿತು ಸಮ್ಮೇಳನದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಹಲವು ವಿಚಾರಗಳನ್ನು ಹಂಚಿಕೊಂಡರು.

ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಅತಿಯಾದ ನಂಬಿಕೆಯಿದೆ; ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್
Mohan Bhagwat
Image Credit source: TV9

Updated on: Aug 06, 2026 | 8:10 PM

ನವದೆಹಲಿ, ಆಗಸ್ಟ್ 6: ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಇತ್ತೀಚೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಜೆನ್​-ಜಿಗಳು (Gen Z Protest) ಈ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಪೊಲೀಸರ ಲಾಠಿಚಾರ್ಜ್ ರುಚಿಯನ್ನೂ ನೋಡಿದ್ದರು. ಈ ಪ್ರತಿಭಟನೆ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಿತ್ತು. ಇದರ ಬೆನ್ನಲ್ಲೇ ಇಂದು ಬೃಹತ್ ಯುವ ಸಮಾವೇಶವೊಂದರಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂವಾದದಲ್ಲಿ ಮಾತನಾಡಿದ ಅವರು ಜೆನ್​ ಜಿ ಕುರಿತಾಗಿ ಬಹಳ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಪ್ರತಿಭಟನೆ ನಡೆಸಿದವರನ್ನು ‘ದೇಶವಿರೋಧಿಗಳು’ ಎಂದು ಕರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಜೆನ್-ಜಿ ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಅವರು ದೇಶವಿರೋಧಿಗಳಲ್ಲ. ಅವರು ನಮ್ಮದೇ ಜನರು, ನಮ್ಮ ಮುಂದಿನ ಪೀಳಿಗೆ. ಹೊಸ ಪೀಳಿಗೆ ಅಂದರೆ ಜೆನ್ ಜಿ ಮತ್ತು ಜೆನ್ ಆಲ್ಫಾ ನಮ್ಮ ಪ್ರಸ್ತುತ ಪೀಳಿಗೆಗಿಂತ ಹೆಚ್ಚು ಪ್ರಾಮಾಣಿಕವಾಗಿದೆ ಎಂದು ನಾನು ಭಾವಿಸುತ್ತೇನೆ. ದೇಶಭಕ್ತಿ ಮತ್ತು ಸೇವೆಯ ಪ್ರಾಮಾಣಿಕ ಕರೆಗೆ ಅವರು ಸ್ಪಂದಿಸುತ್ತಾರೆ” ಎಂದಿದ್ದಾರೆ.


ವಿದ್ಯಾರ್ಥಿಗಳ ಪ್ರತಿಭಟನೆ ಮತ್ತು ಮಾತುಕತೆಯ ಕುರಿತು ಮಾತನಾಡಿದ ಮೋಹನ್ ಭಾಗವತ್, “ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯು ಸಹ ಸರ್ವಸಮ್ಮತಿಯನ್ನು ತಲುಪುವ ಒಂದು ಮಾರ್ಗವಾಗಿದೆ. ಹಲವು ಅಭಿಪ್ರಾಯಗಳು ಒಂದೆಡೆ ಸೇರಿ ಚರ್ಚೆಯ ನಂತರ ಸರ್ವಸಮ್ಮತಿ ರೂಪುಗೊಳ್ಳುತ್ತದೆ. ಆ ಚರ್ಚೆಯು ಮಾತುಕತೆಯ ಮೂಲಕವೂ ನಡೆಯಬಹುದು. ಆದರೆ, ಪ್ರಜಾಪ್ರಭುತ್ವದಲ್ಲಿ ಎಲ್ಲದಕ್ಕೂ ಒಂದು ನಿಯಮಗಳಿರುತ್ತವೆ. ಆ ನಿಯಮಗಳನ್ನು ನಾವು ಮೀರಬಾರದು. ಯುವಜನರ ಸಂಕಷ್ಟಗಳು ನಿಜವಾದುದು. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯವಿದೆ” ಎಂದು ಅವರು ಹೇಳಿದರು.


ಇದನ್ನೂ ಓದಿ: ಸಮಾಜ ನಿರ್ಮಾಣದ ಅಡಿಪಾಯವೇ ತಾಯ್ತನ; ಮಾತೃತ್ವದ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

ನಮ್ಮ ಪೀಳಿಗೆಯಂತೆ ಜೆನ್​-ಜಿ ಇಲ್ಲ:

ಜೆನ್ ಜಿ ಕುರಿತು ನನಗಿರುವ ಅನುಭವದ ಪ್ರಕಾರ, “ನಾವು ಅವರ ವಯಸ್ಸಿನಲ್ಲಿದ್ದಾಗ ಹಿರಿಯರು ಹೇಳಿದ್ದನ್ನು ಒಪ್ಪಿಕೊಳ್ಳುವ ಅಭ್ಯಾಸ ನಮಗಿತ್ತು, ನಾವು ಹಿರಿಯರನ್ನು ಎಂದಿಗೂ ಪ್ರಶ್ನಿಸುತ್ತಿರಲಿಲ್ಲ. ಈಗಿನ ಜೆನ್ ಜಿ ಮತ್ತು ಜೆನ್ ಆಲ್ಫಾ ದೊಡ್ಡವರನ್ನು ಪ್ರಶ್ನಿಸುತ್ತಾರೆ, ಅವರಿಗೆ ತಾರ್ಕಿಕ ಉತ್ತರಗಳು ಮತ್ತು ಪ್ರೀತಿ ಬೇಕು. ಪ್ರಜಾಪ್ರಭುತ್ವದಲ್ಲಿ ಇದು ತಪ್ಪಲ್ಲ. ಇಂಗ್ಲಿಷ್‌ನಲ್ಲಿ ಇದನ್ನು ‘ಡಿಬೇಟ್’ ಎನ್ನುತ್ತಾರೆ, ನಾವು ಇದನ್ನು ‘ಶಾಸ್ತ್ರಾರ್ಥ’ ಎನ್ನುತ್ತೇವೆ. ಅಲ್ಲಿ ಕೇವಲ ವಾದ-ವಿವಾದಗಳಿರುವುದಿಲ್ಲ, ಅದು ಚರ್ಚೆಯ ಎರಡು ಬದಿಗಳಷ್ಟೇ. ಪ್ರತಿಯೊಬ್ಬರಿಗೂ ಅವರದೇ ಆದ ದೃಷ್ಟಿಕೋನವಿರುತ್ತದೆ, ಹೀಗಾಗಿ ಪ್ರತಿ ವಿಷಯದಲ್ಲೂ ಹೊಸ ಆಯಾಮ ಬೆಳಕಿಗೆ ಬರುತ್ತದೆ. ಇವೆಲ್ಲವೂ ಸೇರಿ ಸತ್ಯದ ಪೂರ್ಣ ದೃಷ್ಟಿಕೋನವನ್ನು ರೂಪಿಸುತ್ತವೆ. ಇದು ಖಂಡಿತವಾಗಿಯೂ ನಡೆಯಬೇಕು” ಎಂದಿದ್ದಾರೆ.


“ಜೆನ್ ಜಿ ಪ್ರತಿಭಟಿಸಬಾರದು ಎಂದು ನಾನು ಹೇಳುವುದಿಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಏನನ್ನು ಹೇಗೆ ಮಾಡಬೇಕು ಎಂಬುದಕ್ಕೆ ಕೆಲವು ಮಾರ್ಗಗಳಿವೆ. ಸಂವಿಧಾನವನ್ನು ರೂಪಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾಷಣಗಳು ಈ ಬಗ್ಗೆ ನಮಗೆ ದಾರಿ ತೋರಿಸುತ್ತವೆ. ಇದನ್ನು ಗಮನಿಸಬೇಕು. ಜೆನ್ ಜಿ ವಿರೋಧಿಸುವುದಕ್ಕಾಗಿಯೇ ಧ್ವನಿ ಎತ್ತುತ್ತಿಲ್ಲ. ಅವರಿಗೆ ಕೆಲವು ಸಮಸ್ಯೆಗಳಿವೆ ಮತ್ತು ಅದನ್ನು ಸರಿಪಡಿಸಬೇಕಾಗಿದೆ ಎಂಬುದನ್ನು ನಾವೂ ಅರ್ಥ ಮಾಡಿಕೊಳ್ಳಬೇಕು. ಹೋರಾಟವು ನನ್ನ ಅಥವಾ ನಿಮ್ಮ ವಿರುದ್ಧವಾಗಿರಬಾರದು, ಬದಲಿಗೆ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಇರಬೇಕು” ಎಂದು ಮೋಹನ್ ಭಾಗವತ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.


ಜುಲೈ 20ರಂದು ಸಂಸತ್ತಿಗೆ ಮೆರವಣಿಗೆ ನಡೆಸಲು ಯತ್ನಿಸಿದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪ್ರತಿಭಟನೆಯ ಕೇಂದ್ರಸ್ಥಳವಾದ ಜಂತರ್ ಮಂತರ್‌ನಲ್ಲಿ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ಕೆಲವರ ಮೇಲೆ ಪೆಲೆಟ್ ಗನ್‌ಗಳಿಂದ ಗುಂಡು ಹಾರಿಸಿದ ದೃಶ್ಯಗಳು ಕಂಡುಬಂದಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:50 pm, Thu, 6 August 26

Loading...
Unable to load recommendations.
Follow Us