ನವದೆಹಲಿ: ಜರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಸ್ (German Chancellor Olaf Scholz) ಇಂದು (ಫೆಬ್ರವರಿ 25) ಭಾರತಕ್ಕೆ ಭೇಟಿ ನೀಡಲಿದ್ದು, ನಾಳೆ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಚಾನ್ಸಲರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತಕ್ಕೆ ಬರುತ್ತಿರುವ ಅವರು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಶೋಲ್ಸ್ ಮತ್ತು ಮೋದಿ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಬಳಿಕ ಭಾರತ ಮತ್ತು ಜರ್ಮನ್ ಸಿಇಒಗಳು ಮತ್ತು ವ್ಯಾಪಾರ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ದ್ವಿಪಕ್ಷೀಯ ಮಾತುಕತೆ ವೇಳೆ ಉಕ್ರೇನ್ ಯುದ್ಧ, ಚೀನಾ ವಿಚಾರಗಳ ಬಗ್ಗೆ ಹೆಚ್ಚಿನ ಚರ್ಚೆಯಾಗುವ ನಿರೀಕ್ಷೆ ಇದೆ ಎಂದು ಜರ್ಮನಿಯ ರಾಯಭಾರಿ ಫಿಲಿಪ್ ಆಕರ್ಮನ್ ತಿಳಿಸಿದ್ದಾರೆ. ಓಲಾಫ್ ಶೋಲ್ಸ್ ಜತೆ ಉನ್ನತ ಮಟ್ಟದ ಅಧಿಕಾರಿಗಳು, ವಿವಿಧ ಕಂಪನಿಗಳ 12 ಮಂದಿ ಸಿಇಒಗಳನ್ನೊಳಗಂಡ ಉದ್ಯಮಿಗಳ ನಿಯೋಗ ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಶ್ವಸಂಸ್ಥೆಯ ಮಹಾ ಅಧಿವೇಶನ ಮತ್ತು ಭದ್ರತಾ ಮಂಡಳಿಯಂತಹ ಸಂಸ್ಥೆಗಳಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ವಿರುದ್ಧ ಮತ ಚಲಾಯಿಸಬೇಕೆಂದು ಜರ್ಮನಿಯು ಭಾರತಕ್ಕೆ ಹೇಳಿದ್ದರೂ, ಅಂತಹ ವಿಷಯಗಳಲ್ಲಿ ಮತ ಚಲಾಯಿಸುವುದು ಅಥವಾ ದೂರವಿರುವುದು ಯಾವುದೇ ದೇಶದ ಸಾರ್ವಭೌಮ ನಿರ್ಧಾರವಾಗಿದೆ. ಇಂಥ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಭಾರತ ಮತ್ತು ಜರ್ಮನಿ ಜತೆಯಾಗಿ ಮುಂದೆ ಸಾಗಲಿವೆ ಎಂದು ಅವರು ಹೇಳಿದ್ದಾರೆ.
ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳು ಮೋದಿ ಮತ್ತು ಶೋಲ್ಸ್ ಮಾತುಕತೆಯ ಪ್ರಮುಖ ವಿಚಾರಗಳಾಗಿರಲಿವೆ. ಉಳಿದಂತೆ ಉದ್ಯಮ, ಹವಾಮಾಣ ಬದಲಾವಣೆ, ಕೌಶಲಯುಕ್ತ ಭಾರತದ ಕಾರ್ಮಿಕರ ಬಗ್ಗೆಯೂ ಮಾತುಕತೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ