ಪಣಜಿ: ರಾಜ್ಯ ಸರ್ಕಾರ ಗೋವಾ ವಿರೋಧಿ ನೀತಿ ಅನುಸರಿಸುತ್ತಿದ್ದು ಇದು ರಾಜ್ಯದ ವಿಶಿಷ್ಟ ಜೀವನ ವಿಧಾನ, ಪರಂಪರೆ, ಪರಿಸರ ಮತ್ತು ಜನಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಿರುವ ಗೋವಾ ಫಾರ್ವರ್ಡ್ ಪಾರ್ಟಿ(GFP) ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (NDA)ಯಿಂದ ಹೊರನಡೆದಿದೆ. ಮೈತ್ರಿಕೂಟದಿಂದ ಹೊರ ನಡೆದಿರುವ ನಿರ್ಧಾರವನ್ನು ಜಿಎಫ್‌ಪಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಮಂಗಳವಾರ ಘೋಷಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಅಧ್ಯಕ್ಷ , ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಸರ್ದೇಸಾಯಿ,
ಎನ್‌ಡಿಎಯೊಂದಿಗಿನ ನಮ್ಮ ಸಂಬಂಧವು ಜುಲೈ 2019 ರಲ್ಲಿ ಕೊನೆಗೊಂಡಿತು, ಮರುಪರಿಶೀಲನೆಗೆ ಅವಕಾಶವಿಲ್ಲ ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ, ನಮ್ಮ ಪ್ರಜಾಪ್ರಭುತ್ವದ ಬದ್ಧತೆಗಳು ಮತ್ತು ಗೋವಾ ಜನರ ಇಚ್ಛೆಗೆ ಅನುಗುಣವಾಗಿ ನಾವು ಎನ್‌ಡಿಎ ಜತೆಗಿನ ಸಹಭಾಗಿತ್ವವನ್ನು ಮುಕ್ತಾಯಗೊಳಿಸುತ್ತಿದ್ದೇವೆ ಎಂದಿದ್ದಾರೆ.
ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಸಚಿವ ಸಂಪುಟದಲ್ಲಿ ಸರ್ದೇಸಾಯಿ ಸಚಿವರಾಗಿದ್ದರು. ರಾಜ್ಯದ ಐದು ಪುರಸಭೆಗಳಲ್ಲಿ ಮುನ್ಸಿಪಲ್ ಕೌನ್ಸಿಲ್ ಚುನಾವಣೆಗೆ ಮುನ್ನ ಮಾರ್ಗಾವೊ ಮುನ್ಸಿಪಲ್ ಕೌನ್ಸಿಲ್ ಚುನಾವಣೆಗೆ ಸ್ಪರ್ಧಿಸಲು ಜಿಎಫ್‌ಪಿ ಮತ್ತು ಕಾಂಗ್ರೆಸ್ ಕೈಜೋಡಿಸಿರುವ ಸಮಯದಲ್ಲಿ ಜಿಎಫ್‌ಪಿ ಈ ನಿರ್ಧಾರ ಪ್ರಕಟಿಸಿದೆ. ಮಂಗಳವಾರ ಜಿಎಫ್‌ಪಿ ಕಾರ್ಯಕಾರಿ ಸಮಿತಿ ನಿರ್ಣಯಕ್ಕೆ ಅನುಮೋದನೆ ನೀಡಿದ ಬೆನ್ನಲ್ಲೇ ಮೈತ್ರಿಕೂಟದಿಂದ ಹೊರನಡೆಯುವ ನಿರ್ಧಾರವನ್ನು ಪಕ್ಷ ಪ್ರಕಟಿಸಿದೆ.
2022ರ ಗೋವಾ ವಿಧಾನಸಭೆಗೆ ಮುನ್ನ ಜಿಎಫ್‌ಪಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದಿರುವುದರಿಂದ ಪ್ರಸ್ತುತ ರಾಜ್ಯದಲ್ಲಿ ವಿಪಕ್ಷ ಪ್ರಬಲವಾಗಿದೆ.
ನಾವು ಮೊದಲು ಪರ್ಯಾಯ ಮೈತ್ರಿಕೂಟವನ್ನು ರಚಿಸುವ ಯೋಜನೆ ಹೊಂದಿದ್ದೇವೆ. ನಾವೀಗ ಕಾಂಗ್ರೆಸ್ ಪಕ್ಷ, ಮಾರ್ಗಾವೊದಲ್ಲಿನ ದಿಗಂಬರ್ ಕಾಮತ್ ಸಮಿತಿ ಜತೆ ಮೈತ್ರಿ ಹೊಂದಿದ್ದು, ಮಾರ್ಗವೊ ಸಿವಿಲ್ ಅಲಯನ್ಸ್ ಎಂಬುದು ನಮ್ಮ ಮೈತ್ರಿಕೂಟ. ಈ ಮೈತ್ರಿಕೂಟಕ್ಕೆ ನಾಗರಿಕ ಸಾಮಾಜಿಕ ಸಂಘಟನೆಗಳ ಬೆಂಬಲವಿದೆ. ಬಿಜೆಪಿಯ ವಿರುದ್ಧ ಪ್ರಚಾರಕ್ಕೆ ನಾವು ತಡೆಯಾಗುತ್ತಿದ್ದೇವೆ ಎಂದು ಅವರು ಭಾವಿಸುತ್ತಿದ್ದರು. ಅವರ ನಿಲುವುಗಳನ್ನು ಗೌರವಿಸಿ ನಾವು ಬಿಜೆಪಿಯ ಮೈತ್ರಿಕೂಟದಿಂದ ಹೊರಗೆ ಬಂದಿದ್ದೇವೆ. ನಾವು ಟೀಂಗೋವಾ ಎಂಬ ಯೋಜನೆಯೊಂದಿಗೆ ನಾವು ಮೈತ್ರಿಪಕ್ಷಗಳು ಒಂದಾಗಲಿದ್ದು 2022ರಲ್ಲಿ ಬಿಜೆಪಿ ಸರ್ಕಾರವನ್ನು ಕೆಳಗಿಳಿಸುತ್ತೇವೆ ಎಂದು ಸರ್ದೇಸಾಯಿ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
Goa Forward Party walks out of NDA, cites ‘anti-Goan policies’ of BJP-led state govt
— Press Trust of India (@PTI_News) April 13, 2021
ಬಿಜೆಪಿ ಸರ್ಕಾರದ ಪ್ರಬಲ ಟೀಕಾಕಾರರಾಗಿರುವ ಸರ್ದೇಸಾಯಿ ನಾನು ಎನ್‌ಡಿಎ ಸದಸ್ಯ ಅಲ್ಲ ಎಂದು ಹೇಳಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಗೋವಾದ ಜನರು ನಮ್ಮ ಭಗವಾನ್ ಮಹಾವೀರ್ ಅಭಯಾರಣ್ಯವನ್ನು ಹಾಡಹಗಲೇ ನಾಶ ಮಾಡಿದ್ದು ಮತ್ತು ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನ್ನು ಉದ್ಯಮಿಗಳಿಗೆ ಮಾರಿದ್ದನ್ನು ನೋಡಿದ್ದಾರೆ. ಈ ಉದ್ಯಮಿಗಳು ಗೋವಾವನ್ನು ಕಲ್ಲಿದ್ದಲು ಹಬ್ ( Coal Hub) ಮಾಡುವ ಉದ್ದೇಶವನ್ನು ಹೊಂದಿದ್ದರು. ಮಹದಾಯಿ ನದಿ ತಿರುವು ಬಗ್ಗೆ ಮುಖ್ಯಮಂತ್ರಿ ಸಾವಂತ್ ಅವರ ನಿರ್ಲಕ್ಷ್ಯ ಧೋರಣೆಯನ್ನೂ ಇಲ್ಲಿನ ಜನರು ನೋಡಿದ್ದಾರೆ ಎಂದಿದ್ದಾರೆ ಸರ್ದೇಸಾಯಿ.
ಕೊವಿಡ್ ಸಾಂಕ್ರಾಮಿಕದ ಕಾಲದಲ್ಲಿ ಬಿಜೆಪಿ ಸರ್ಕಾರ ಯವ ರೀತಿ ನಡೆದುಕೊಂಡಿತ್ತು, ಆದಾಯ ಹೆಚ್ಚಿಸುವುದಕ್ಕಾಗಿ ಕೊವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೊರೊನಾ ಪ್ರಕರಣಗಳನ್ನು ಹೆಚ್ಚುವಂತೆ ಮಾಡಿತ್ತು ಎಂದು ಸರ್ದೇಸಾಯಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಸೇರಿದ 10 ಶಾಸಕರ ಅನರ್ಹತೆ ಬಗ್ಗೆ ಏಪ್ರಿಲ್ 20ಕ್ಕೆ ಗೋವಾ ಸ್ಪೀಕರ್ ನಿರ್ಣಯ
(Goa Forward Party GFP quits BJP led National Democratic Alliance NDA)
Published On - 5:57 pm, Tue, 13 April 21