ಬಿಜೆಪಿಗೆ ಸೇರಿದ 10 ಶಾಸಕರ ಅನರ್ಹತೆ ಬಗ್ಗೆ ಏಪ್ರಿಲ್ 20ಕ್ಕೆ ಗೋವಾ ಸ್ಪೀಕರ್ ನಿರ್ಣಯ
Goa Politics: ಏಪ್ರಿಲ್ 20ಕ್ಕೆ ಸ್ಪೀಕರ್ ಆದೇಶ ನೀಡುತ್ತಾರೆ, ಏಪ್ರಿಲ್ 21ಕ್ಕೆ ನಾವು ವಿಚಾರಣೆ ನಡೆಸುತ್ತೇವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ರ ಒಳಗೆ ತೀರ್ಪು ನಿರೀಕ್ಷಿಸಬಹುದು ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು.
ದೆಹಲಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ 10 ಶಾಸಕರ ಬಗ್ಗೆ ನಡೆಯುತ್ತಿರುವ ಅನರ್ಹತೆ ವಿಚಾರಣೆಯ ಅಂತಿಮ ಆದೇಶವನ್ನು ಏಪ್ರಿಲ್ 20ಕ್ಕೆ ನೀಡುತ್ತೇನೆ ಎಂದು ಗೋವಾ ವಿಧಾನಸಭೆಯ ಸ್ಪೀಕರ್ ರಾಜೇಶ್ ಪಟ್ನೇಕರ್ ಸುಪ್ರೀಂಕೋರ್ಟ್ಗೆ ತಿಳಿಸಿದ್ದಾರೆ. ಇದಕ್ಕೂ ಮೊದಲು ಗೋವಾ ಸ್ಪೀಕರ್ ನೀಡಿದ ಅಂತಿಮ ದಿನಾಂಕದ ಮಾಹಿತಿಯನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಎರಡು ಬಾರಿ ತಳ್ಳಿಹಾಕಿದ್ದರು.
ವಿಚಾರಣೆ ಆರಂಭವಾದಾಗ ಗೋವಾ ಸ್ಪೀಕರ್ ಪರವಾಗಿ ನ್ಯಾಯಾಲಯ ಸಭಾಂಗಣದಲ್ಲಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಶಾಸಕರ ವಿಚಾರಣೆ ಕುರಿತು ಸ್ಪೀಕರ್ ಏಪ್ರಿಲ್ 29ರಂದು ಅಂತಿಮ ಆದೇಶ ಹೊರಡಿಸಲಿದ್ದಾರೆ ಎಂದರು. ಆದರೆ ಈ ದಿನಾಂಕವನ್ನು ಮುಖ್ಯನ್ಯಾಯಮೂರ್ತಿ ಒಪ್ಪಿಕೊಳ್ಳಲಿಲ್ಲ. ಅಷ್ಟು ತಡ ಏಕೆ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.
‘ಎರಡು ವಾರಗಳ ಒಳಗೆ ತೀರ್ಪು ನೀಡಲು ಸಾಧ್ಯವೇ ಎಂದು ಸ್ಪೀಕರ್ ಅವರನ್ನು ಕೇಳಿನೋಡಿ’ ಎಂದು ತುಷಾರ್ ಮೆಹ್ತಾರಿಗೆ ಮುಖ್ಯ ನ್ಯಾಯಮೂರ್ತಿ ಬೊಬಡೆ ಸೂಚಿಸಿದರು. ‘ಏಪ್ರಿಲ್ 22ಕ್ಕೆ ಸ್ಪೀಕರ್ ನೀಡುತ್ತಾರೆ’ ಎಂದು ತುಷಾರ್ ಮೆಹ್ತಾ ಉತ್ತರಿಸಿದರು. ಆದರೆ ಈ ದಿನಾಂಕಕ್ಕೂ ನ್ಯಾಯಮೂರ್ತಿ ಒಪ್ಪಿಕೊಳ್ಳಲಿಲ್ಲ. ಏಪ್ರಿಲ್ 20ರ ಒಳಗೆ ತೀರ್ಪು ನೀಡಲು ಸ್ಪೀಕರ್ಗೆ ಸಾಧ್ಯವೇ ಎಂದು ಕೇಳಿನೋಡಲು ಸೂಚಿಸಿದರು. ಇದಕ್ಕೆ ತುಷಾರ್ ಮೆಹ್ತಾ ಒಪ್ಪಿಕೊಂಡರು.
‘ಏಪ್ರಿಲ್ 20ಕ್ಕೆ ಸ್ಪೀಕರ್ ಆದೇಶ ನೀಡುತ್ತಾರೆ, ಏಪ್ರಿಲ್ 21ಕ್ಕೆ ನಾವು ವಿಚಾರಣೆ ನಡೆಸುತ್ತೇವೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 22ರ ಒಳಗೆ ತೀರ್ಪು ನಿರೀಕ್ಷಿಸಬಹುದು’ ಎಂದು ಮುಖ್ಯನ್ಯಾಯಮೂರ್ತಿ ಹೇಳಿದರು. ಜುಲೈ 2019ರಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ 10 ಶಾಸಕರನ್ನು ಅನರ್ಹಗೊಳಿಸುವಂತೆ ನೀಡಿದ್ದ ಮನವಿಯ ಬಗ್ಗೆ ಶೀಘ್ರ ವಿಚಾರಣೆ ನಡೆಸಲು ಗೋವಾ ವಿಧಾನಸಭೆಯ ಸ್ಪೀಕರ್ಗೆ ಸೂಚಿಸಬೇಕು ಎಂದು ಕೋರಿ ಕಾಂಗ್ರೆಸ್ ಗೋವಾ ಘಟಕದ ಅಧ್ಯಕ್ಷ ಗಿರೀಶ್ ಚೋಡಾಂಕರ್ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪಕ್ಷಾಂತರದ ನಂತರ ವಿಧಾನಸಭೆಯಲ್ಲಿ ಕಾಂಗ್ರೆಸ್ ಸ್ಥಾನವು ಕೇವಲ 5ಕ್ಕೆ ಇಳಿಯಿತು. ಈ ಶಾಸಕರು ಮೂಲ ಪಕ್ಷದ ಜೊತೆಗೆ ವಿಲೀನಗೊಂಡಿಲ್ಲ. ಹೀಗಾಗಿ ಇದು ಸಂವಿಧಾನದ 10ನೇ ಅನುಚ್ಛೇದದ ಅನ್ವಯ ಪಕ್ಷಾಂತರವಾಗುತ್ತದೆ ಎಂದು ಕಾಂಗ್ರೆಸ್ ವಾದಿಸಿತ್ತು.
ಪಕ್ಷಾಂತರ ನಿಷೇಧ ಕಾನೂನಿನ ಪ್ರಕಾರ ಶಾಸಕಾಂಗ ಪಕ್ಷದ ಮೂರನೇ ಎರಡು ಭಾಗದಷ್ಟು ಸಂಖ್ಯೆಯ ಶಾಸಕರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಅವಕಾಶವಿದೆ. ಹೀಗೆ ಆದ ಪಕ್ಷದಲ್ಲಿ ಅವರ ಶಾಸಕಸ್ಥಾನ ಅನರ್ಹಗೊಳ್ಳುವುದಿಲ್ಲ. ಈ ಕಾಯ್ದೆಗೆ ಜನವರಿ 2004ರಂದು ತಂದ ತಿದ್ದುಪಡಿ ಪ್ರಕಾರ ಶಾಸಕಾಂಗ ಪಕ್ಷದಿಂದ ಸಿಡಿದು ಮತ್ತೊಂದು ಪಕ್ಷದ ಜೊತೆಗೆ ಗುರುತಿಸಿಕೊಂಡರೆ ಮಾನ್ಯತೆ ಸಿಗುವುದಿಲ್ಲ.
ಗೋವಾ ವಿಧಾನಸಭೆಯ ಪ್ರತಿಪಕ್ಷದ ನಾಯಕ ಚಂದ್ರಕಾಂತ್ ಕಾವ್ಲೆಕಾರ್ ಜುಲೈ 19ರಂದು ಇತರ ಒಂಬತ್ತು ಶಾಸಕರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಚಂದ್ರಕಾಂತ್ ಜೊತೆಗೆ ಅಟನಸಿಯೊ ಮೊನ್ಸೆರಟೆ, ಜೆನ್ನಿಫರ್ ಮೊನ್ಸೆರಟೆ, ಫಿಲಿಪ್ ನೆರಿ ರೊಡ್ರಿಗಸ್, ನೀಲ್ಕಾಂತ್ ಹರ್ಲಂಕರ್, ಫ್ರಾನ್ಸಿಸ್ಕೊ ಸಿಲ್ವರೆರಿಯಾ, ಕ್ಲಾಫಸಿಯೊ ಡಯಾಸ್, ಇಸಿದೊರ್ ಫರ್ನಾಂಡಿಸ್, ವಿಲ್ಫ್ರೆಡ್ ಡಿಸೋಜಾ ಮತ್ತು ಟೊನಿ ಫರ್ನಾಂಡಿಸ್ ಕಾಂಗ್ರೆಸ್ ತೊರೆದಿದ್ದರು. ಈ 10 ಶಾಸಕರೂ ಬಿಜೆಪಿಯೊಂದಿಗೆ ವಿಲೀನಗೊಳ್ಳುವುದರಿಂದ ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 27ಕ್ಕೆ ಏರಿಕೆಯಾಗಿತ್ತು.
(Goa Speaker to decide on disqualification of 10 MLAs who joined BJP on April 20)
ಇದನ್ನೂ ಓದಿ: ಗೋವಾದ ಮಸೀದಿಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಲೌಡ್ಸ್ಪೀಕರ್ ಬಳಸುವ ಹಾಗಿಲ್ಲ; ಶಬ್ದ ಮಾಲಿನ್ಯ ಪ್ರಮಾಣವೂ ನಿಗದಿ