ಲೈಂಗಿಕ ಹಗರಣ ಆರೋಪ: ಗೋವಾ ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ

| Updated By: ರಶ್ಮಿ ಕಲ್ಲಕಟ್ಟ

Updated on: Dec 16, 2021 | 1:12 PM

ನವೆಂಬರ್ 30 ರಂದು ಸಾವಂತ್ ನೇತೃತ್ವದ ಸರ್ಕಾರದ ಸಚಿವರೊಬ್ಬರು "ಲೈಂಗಿಕ ಹಗರಣ" ದಲ್ಲಿ ಭಾಗಿಯಾಗಿದ್ದಾರೆ ಎಂದು ಚೋಡಂಕರ್ ಆರೋಪಿಸಿದ್ದರು. ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡುವುದಾಗಿ ಹೇಳಿದ್ದರು.

ಲೈಂಗಿಕ ಹಗರಣ ಆರೋಪ: ಗೋವಾ ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ರಾಜೀನಾಮೆ
ಮಿಲಿಂದ್ ನಾಯಕ್
Follow us on

ಪಣಜಿ: ಲೈಂಗಿಕ ಹಗರಣದಲ್ಲಿ (sex scandal) ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ (Congress) ನಾಯಕರನ್ನು ಹೆಸರಿಸಿದ ಕೆಲವೇ ಗಂಟೆಗಳ ನಂತರ ಗೋವಾ ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ (Milind Naik) ಬುಧವಾರ ಸಂಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. “ಅವರು (ನಾಯಕ್) ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ನಾನು ಅದನ್ನು ಅಂಗೀಕರಿಸಿದ್ದೇನೆ. ಕಾಂಗ್ರೆಸ್ ಯಾವುದೇ ಪುರಾವೆ ನೀಡಿದರೂ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಹೇಳಿದ್ದಾರೆ. ನಾಯಕ್ ಅವರು ತಮ್ಮ ಪರವಾಗಿ ನಿಲ್ಲುತ್ತಾರೆ ಮತ್ತು ವೈಯಕ್ತಿಕ ಮಟ್ಟದಲ್ಲಿ ಹೋರಾಟ ಮಾಡುತ್ತಾರೆ ಎಂದು ಅವರು ಹೇಳಿದರು. ಅವರ ವಿರುದ್ಧ ಮಾಡಿರುವ ಆರೋಪಗಳು ವೈಯಕ್ತಿಕವಾಗಿದ್ದು, ಅದರ ಬಗ್ಗೆ ಅವರು ಏನು ಮಾಡುತ್ತಾರೆ ಎಂಬುದು ಅವರ ವೈಯಕ್ತಿಕ ನಿರ್ಧಾರದ ವಿಷಯವಾಗಿದೆ ಎಂದು ಸಾವಂತ್ ಹೇಳಿದರು. ಸರ್ಕಾರದ ಮಟ್ಟದಲ್ಲಿ ಏನು ತನಿಖೆಯಾಗಬೇಕೋ ಅದನ್ನು 100 ಪ್ರತಿಶತ ಮಾಡಲಾಗುವುದು ಎಂದು ಸಾವಂತ್ ಹೇಳಿದರು. ನಾಯಕ್ ಅವರು ಈ ಹಿಂದೆ ಹೊಂದಿದ್ದ ಸಚಿವ ಸ್ಥಾನ ಖಾಲಿ ಉಳಿಯಲಿದೆ ಎಂದರು.

ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರು ಬುಧವಾರ ನಾಯಕ್ ಅವರನ್ನು “ಲೈಂಗಿಕ ಹಗರಣ” ದಲ್ಲಿ ಭಾಗಿಯಾಗಿರುವ ಸಚಿವ ಎಂದು ಹೇಳಿದ್ದಾರೆ. ಚೋಡಂಕರ್ ಅವರು ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದು, ಬಿಹಾರದ ಮಹಿಳೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನವೆಂಬರ್ 30 ರಂದು ಸಾವಂತ್ ನೇತೃತ್ವದ ಸರ್ಕಾರದ ಸಚಿವರೊಬ್ಬರು “ಲೈಂಗಿಕ ಹಗರಣ” ದಲ್ಲಿ ಭಾಗಿಯಾಗಿದ್ದಾರೆ ಎಂದು ಚೋಡಂಕರ್ ಆರೋಪಿಸಿದ್ದರು. ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಸರ್ಕಾರಕ್ಕೆ 15 ದಿನಗಳ ಕಾಲಾವಕಾಶ ನೀಡುವುದಾಗಿ ಹೇಳಿದ್ದರು. ಹದಿನೈದು ದಿನಗಳ ಕೊನೆಯಲ್ಲಿ ಸರ್ಕಾರವು ಸಚಿವರನ್ನು ಸಂಪುಟದಿಂದ ತೆಗೆದುಹಾಕದಿದ್ದರೆ, ಅವರನ್ನು ಹೆಸರಿಸಲು ಒತ್ತಾಯಿಸಲಾಗುವುದು ಎಂದು ಚೋಡಂಕರ್ ಹೇಳಿದ್ದರು.


2022ರ ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಗೋವಾದ ಬಿಜೆಪಿ ಸರ್ಕಾರಕ್ಕೆ ನಾಯಕ್‌ರ ರಾಜೀನಾಮೆಯು ದೊಡ್ಡ ಮುಜುಗರವನ್ನು ಉಂಟುಮಾಡಬಹುದು. ಐವತ್ತೆಂಟು ವರ್ಷದ ನಾಯಕ್ ಮೂರು ಬಾರಿ ಶಾಸಕರಾಗಿದ್ದಾರೆ ಮತ್ತು  2012 ರಲ್ಲಿ ವಸತಿ ಸಚಿವರಾಗಿದ್ದರು. ಅವರು ದಕ್ಷಿಣ ಗೋವಾದ ಮೊರ್ಮುಗೋವ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಡಿಸೆಂಬರ್ 10 ರಂದು ದಕ್ಷಿಣ ಗೋವಾದ ಕಾಂಗ್ರೆಸ್ ನಾಯಕ ಸಂಕಲ್ಪ್ ಅಮೋನ್ಕರ್ ಮತ್ತು ಇತರ ಪಕ್ಷದ ಕಾರ್ಯಕರ್ತರ ವಿರುದ್ಧ ಸುಲಿಗೆ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ಮಹಿಳೆಯೊಬ್ಬರು ಬಿಹಾರದಲ್ಲಿ ದೂರು ದಾಖಲಿಸಿದ್ದರು.

ಬಿಹಾರದಲ್ಲಿ ದಾಖಲಾದ ದೂರಿನ ಪ್ರಕಾರ, ಆರೋಪಿಯು ಆಕೆಯ ವಿಡಿಯೊ ಮತ್ತು ಆಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಆತನ ವಿರುದ್ಧ ಸುಲಿಗೆ ಮತ್ತು ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಾಧಗಳನ್ನು ಆರೋಪಿಸಿದರು. ಶುಕ್ರವಾರ ಶೂನ್ಯ ಎಫ್‌ಐಆರ್ ದಾಖಲಾಗಿದ್ದು ಮಂಗಳವಾರ ಪ್ರಕರಣವನ್ನು ಗೋವಾ ಪೊಲೀಸರಿಗೆ ವರ್ಗಾಯಿಸಲಾಗಿದೆ.
ದಕ್ಷಿಣ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಧನಿಯಾ, “ನಾವು ನಿನ್ನೆ ಸಂಜೆ ದೂರನ್ನು ಸ್ವೀಕರಿಸಿದ್ದೇವೆ ಮತ್ತು ಮೊರ್ಮುಗಾವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದು ಸುಲಿಗೆ, ಹಿಂಬಾಲಿಸುವುದು, ಕ್ರಿಮಿನಲ್ ಪಿತೂರಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ಗಳ ದೂರು. ಇದೀಗ ಪ್ರಕರಣದ ತನಿಖೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಏತನ್ಮಧ್ಯೆ ಬುಧವಾರದಂದ ಅಮೋನ್ಕರ್ ಮತ್ತು ಇತರ ಕಾಂಗ್ರೆಸ್ ನಾಯಕರು ನಾಯಕ್ ವಿರುದ್ಧ ಪಣಜಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಚಿವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆ ಎಂಬುದಕ್ಕೆ ಇತರ ಪುರಾವೆಗಳನ್ನು ಸಲ್ಲಿಸಿದ್ದಾರೆ.
ಮಹಿಳೆಯ ಮೂಲ ಫೋನ್ ಮತ್ತು ನಕಲು ಪ್ರತಿ ಸೇರಿದಂತೆ ನಾಯಕ್ ವಿರುದ್ಧ ನಾವು ಹೊಂದಿದ್ದ ಎಲ್ಲಾ ಸಾಕ್ಷ್ಯಗಳನ್ನು ನಾವು ಸಲ್ಲಿಸಿದ್ದೇವೆ. ನಾನು ಪೊಲೀಸರೊಂದಿಗೆ ಸಹಕರಿಸಲು ಸಿದ್ಧನಿದ್ದೇನೆ ಎಂದು ಅಮೋನ್ಕರ್ ಸುದ್ದಿಗಾರರಿಗೆ ತಿಳಿಸಿದರು.

ಮಹಿಳೆ ಮೊದಲು ನವೆಂಬರ್ 2019 ರಲ್ಲಿ ತನ್ನನ್ನು ಸಂಪರ್ಕಿಸಿದ್ದಳು. ಆಕೆ ಶೋಷಣೆಗೆ ಒಳಗಾಗುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಆದರೆ ದೂರು ನೀಡಲು ಹೆದರುತ್ತಿದ್ದಳು ಎಂದು ಅಮೋನ್ಕರ್ ಹೇಳಿದರು. ನಾನು ಆಕೆಗೆ ಎಲ್ಲಾ ಸಹಾಯವನ್ನು ಭರವಸೆ ನೀಡಿದ್ದೇನೆ. ಆದರೆ ಕಾನೂನುಬದ್ಧವಾಗಿ, ಅವರು ದೂರು ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದೆ. “ಅವರು ನಮಗೆ ವಾಟ್ಸಾಪ್ ಚಾಟ್‌ಗಳು, ವಿಡಿಯೊ ಮತ್ತು ಆಡಿಯೊವನ್ನು ತೋರಿಸಿದರು. ಮನಾನು ಅದನ್ನು ಮೊದಲು ನೋಡಿದಾಗ ನನಗೆ ತುಂಬಾ ಕೋಪ ಬಂತು. ತನ್ನನ್ನು ಬಳಸಿಕೊಳ್ಳಲಾಗಿದೆ, ಶೋಷಣೆ ಮಾಡಲಾಗಿದೆ, ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಬೆದರಿಕೆ ಹಾಕಿದ್ದಾರೆ ಮಹಿಳೆ ಹೇಳಿರುವುದಾಗಿಅಮೋನ್ಕರ್ ಹೇಳಿದ್ದಾರೆ. ಆಕೆ ತನ್ನ ಫೋನ್‌ನಲ್ಲಿ ಹೇಳಿಕೆಯನ್ನು ರೆಕಾರ್ಡ್ ಮಾಡಿದ್ದಾಳೆ ಮತ್ತು ತನ್ನ ಫೋನ್‌ನಲ್ಲಿನ ವಾಟ್ಸಾಪ್ ಚಾಟ್‌ಗಳು, ವಿಡಿಯೊಗಳು ಮತ್ತು ಆಡಿಯೊಗಳೊಂದಿಗೆ ಅವಳ ಮೊಬೈಲ್ ಅನ್ನು ನನಗೆ ನೀಡಿದ್ದು ಅವಳ ಪರವಾಗಿ ದೂರು ದಾಖಲಿಸಲು ಕೇಳಿಕೊಂಡಿದ್ದಾಳೆ. ಆದಾಗ್ಯೂ, ಐದು ತಿಂಗಳ ಹಿಂದೆ ಅವಳು ಮತ್ತೆ ತನ್ನ ಬಳಿಗೆ ಬಂದಿದ್ದಳು. ತಾನುಭಯದಲ್ಲಿದ್ದೇನೆ ಹಾಗಾಗಿ ತನ್ನ ಫೋನ್ ಅನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾಳೆ ಎಂದು ಅವರು ಹೇಳಿದರು. 2015-16 ರಿಂದ ಮಹಿಳೆ ಮತ್ತು ಸಚಿವರ ನಡುವೆ ಸಂದೇಶಗಳು ವಿನಿಮಯವಾಗಿವೆ ಎಂದು ಅಮೋನ್ಕರ್ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಮೋನ್ಕರ್,  ಪುರುಷ ಮತ್ತು ಮಹಿಳೆಯ ನಡುವಿನ ಸಂಭಾಷಣೆಯ ಆಡಿಯೊ ಕ್ಲಿಪ್ ಅನ್ನು ಪ್ಲೇ ಮಾಡಿದ್ದು  ಮಹಿಳೆಯೊಂದಿಗೆ ಮಾತನಾಡುತ್ತಿರುವುದು ನಾಯಕ್ ಎಂದು ಹೇಳಿಕೊಂಡರು. ಮಹಿಳೆ ತನ್ನ ಫೋನ್‌ನಲ್ಲಿ ಸೇವ್ ಮಾಡಿದ್ದಾಳೆ ಎಂದು ಹೇಳಿದ ವಾಟ್ಸಾಪ್ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.

ನಾಯಕ್ ರಾಜೀನಾಮೆ ನೀಡುವ ಕೆಲವೇ ಗಂಟೆಗಳ ಮೊದಲು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬೀನಾ ನಾಯ್ಕ್ ಅವರು, “ಸಂತ್ರಸ್ತ ಮಹಿಳೆ ವಿಧವೆಯಾಗಿದ್ದರು, ಸಚಿವರು ಅದರ ಲಾಭವನ್ನು ಪಡೆದರು ಮತ್ತು ಅವರ ಒಪ್ಪಿಗೆಯಿಲ್ಲದೆ ಅವರೊಂದಿಗೆ ಸಂಬಂಧ ಹೊಂದಿದ್ದರು. ಸಂತ್ರಸ್ತೆ ತನ್ನ ಒಪ್ಪಿಗೆಯಿಲ್ಲದೆ ಗರ್ಭಪಾತ ಮಾಡುವಂತೆ ಹೇಳುವುದು ಮಗುವಿನ ಕೊಲೆಯಾಗಿದೆ. ಇದು ಮಹಿಳೆಯ ಒಪ್ಪಿಗೆಯಿಲ್ಲದ ಕಾರಣ ಇದು ಅತ್ಯಾಚಾರದ ಪ್ರಕರಣವಾಗಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರ ಅವರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ನಾವೆಲ್ಲ ಹೆಂಗಸರು ಅವರ ಮನೆಗೆ ಮೆರವಣಿಗೆ ನಡೆಸಿ ಮನೆಯಿಂದ ಹೊರ ಹಾಕುವಂತೆ ನೋಡಿಕೊಳ್ಳುತ್ತೇವೆ. ಅವರನ್ನು ಸ್ಥಾನದಿಂದ ಕೆಳಗಿಳಿಸಿ ಮನೆಯಲ್ಲಿ ಕೂರಿಸಬೇಕು ಎಂದು ಗುಡುಗಿದ್ದಾರೆ.

ಅಮೋನ್ಕರ್ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮೋರ್ಮುಗೋವ್ ಕ್ಷೇತ್ರಕ್ಕೆ ಸ್ಪರ್ಧಿಸಿದ್ದು ನಾಯಕ್ ವಿರುದ್ಧ 140 ಮತಗಳ ಕಡಿಮೆ ಅಂತರದಿಂದ ಸೋತಿದ್ದರು.

ನಾಯಕ್ ರಾಜೀನಾಮೆಯ ನಂತರ, ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ ತಾನವಾಡೆ ಅವರು ರಾಜೀನಾಮೆ ನೀಡುವ ನಿರ್ಧಾರ ನಾಯಕ್ ಅವರ ಸ್ವಂತ ನಿರ್ಧಾರ ಎಂದು ಹೇಳಿದ್ದರು.  “ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಯುತ ತನಿಖೆಯನ್ನು ಸಕ್ರಿಯಗೊಳಿಸಲು ಅವರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಯಾರು ಬೇಕಾದರೂ ಆರೋಪ ಮಾಡಬಹುದು. ಅವು ನಿಜವೋ ಸುಳ್ಳೋ ಎಂಬುದು ತನಿಖೆಯ ನಂತರ ತಿಳಿಯಲಿದೆ’ ಎಂದು ತನವಡೆ ಹೇಳಿದರು.

ಬುಧವಾರ ಪಣಜಿಯ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಚೋಡಂಕರ್, “ಅದು ಅಪರಾಧವೋ ಅಲ್ಲವೋ ಎಂಬುದು ಬೇರೆ ವಿಷಯ. ಆದರೆ ಸಚಿವರೊಬ್ಬರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯನ್ನು ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದಾರೆ. ಇಂತಹ ಸಚಿವರು ಗೋವಾ ಮತ್ತು ಎಲ್ಲಾ ಗೋವಾ ಜನರಿಗೆ ಅವಮಾನ. ಅವರನ್ನು ಕೂಡಲೇ ವಜಾಗೊಳಿಸಬೇಕು ಮತ್ತು ಮಹಿಳೆಯರನ್ನು ಶೋಷಿಸುವ ಮಿಲಿಂದ್ ನಾಯಕ್ ಅವರಂತಹ ಸಚಿವರನ್ನು ಬಿಡುವುದಿಲ್ಲ ಎಂಬುದನ್ನು ಈ ಸರ್ಕಾರ ಗೋವಾದ ಜನರಿಗೆ ತೋರಿಸಬೇಕಾಗಿದೆ. ಮಹಿಳೆ ಬಿಹಾರ ಮೂಲದವರಾಗಿದ್ದು, ನಾಯಕ್ ವಿರುದ್ಧ ದೂರು ದಾಖಲಿಸಲು ಆಕೆಗೆ ವಿಶ್ವಾಸ ನೀಡುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸುವುದಾಗಿ ಎಂದು ಚೋಡಂಕರ್ ಹೇಳಿದ್ದಾರೆ.

ಇದನ್ನೂ ಓದಿ:  Parliament Winter Session 2021 ಲಖಿಂಪುರ ಖೇರಿಯಲ್ಲಿ ರೈತರನ್ನು ಹತ್ಯೆ ಮಾಡಿದ ಸಚಿವರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

Published On - 1:00 pm, Thu, 16 December 21