ಪಂಜಾಬ್ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ ಮಾಡಿದ ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್(Bhagwant Mann), ಇಂದಿನಿಂದ ಪಂಜಾಬ್ ಇತಿಹಾಸದಲ್ಲಿ ಸ್ವರ್ಣ ಅಧ್ಯಾಯ ಪ್ರಾರಂಭವಾಗಲಿದೆ ಎಂದು ಹೇಳಿದರು. ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ಮಾತನಾಡಿ, ಇನ್ನು ಈ ರಾಜ್ಯವನ್ನು ಉಡ್ತಾ ಪಂಜಾಬ್ ಬದಲಿಗೆ ಬಢ್ತಾ (ಅಭಿವೃದ್ಧಿ) ಪಂಜಾಬ್ ಮಾಡುವ ನಿಟ್ಟಿನಲ್ಲಿ ಕೆಲಸ ಶುರು ಮಾಡುತ್ತೇವೆ ಎಂದು ಹೇಳಿದರು. 2016ರಲ್ಲಿ ಉಡ್ತಾ ಪಂಜಾಬ್ ಎಂಬ ಬಾಲಿವುಡ್ ಸಿನಿಮಾ ತೆರೆಕಂಡಿತ್ತು. ಅದರಲ್ಲಿ ಪಂಜಾಬ್ನಲ್ಲಿ ಯುವಜನರು ಮಾದಕ ವ್ಯಸನಗಳಿಗೆ ಹೇಗೆ ಬಲಿಯಾಗುತ್ತಾರೆ, ನೆರೆರಾಷ್ಟ್ರ ಪಾಕಿಸ್ತಾನದಿಂದ ಡ್ರಗ್ಸ್ ಪೂರೈಕೆ ಹೇಗಾಗುತ್ತದೆ ಎಂಬ ಬಗ್ಗೆ ಕಥೆಯನ್ನು ಇದು ಒಳಗೊಂಡಿತ್ತು. ಅದಾದ ಮೇಲೆ ಉಡ್ತಾ ಪಂಜಾಬ್ ಎಂಬುದು ಬಾಯಿ ತುದಿಯ ಮಾತಾಗಿತ್ತು. ಇದೇ ವಿಚಾರವನ್ನು ಇಂದು ಭಗವಂತ್ ಮಾನ್ ಉಲ್ಲೇಖಿಸಿದ್ದಾರೆ. ಇನ್ಮುಂದೆ ಉಡ್ತಾ ಪಂಜಾಬ್ ಎನ್ನದೆ, ಎಲ್ಲರೂ ಭಡತಾ ಪಂಜಾಬ್ ಎನ್ನುವಂತೆ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
ಇಂದು ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್ನಲ್ಲಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ಸಮಾರಂಭ ಅದ್ದೂರಿಯಾಗಿ ನಡೆದಿದ್ದು ಲಕ್ಷಕ್ಕೂ ಹೆಚ್ಚು ಮಂದಿ ಸೇರಿದ್ದರು. ಭಗವಂತ್ ಮಾನ್ ಕರೆಗೆ ಸ್ಪಂದಿಸಿ, ಅನೇಕರು ಹಳದಿ ಪೇಟ ಧರಿಸಿಯೇ ಬಂದಿದ್ದು, ಖಟ್ಕರ್ ಕಲಾನ್ ಇಂದು ರಂಗ್ ದೇ ಬಸಂತಿ ಎಂಬಂತಾಗಿತ್ತು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನಾನು ಇಡೀ ಪಂಜಾಬ್ಗೇ ಮುಖ್ಯಮಂತ್ರಿ. ಆಪ್ಗೆ ಯಾರು ಮತಹಾಕಿಲ್ಲವೋ, ಅವರ ವಿಚಾರದಲ್ಲೂ ತಾರತಮ್ಯ ಮಾಡುವುದಿಲ್ಲ. ಯಾರನ್ನೂ ನೋಯಿಸುವುದಿಲ್ಲ ಎಂದೂ ಹೇಳಿದ್ದಾರೆ.
ನಾನು ಯಾವ ಕಾರಣಕ್ಕೂ ಕ್ಷುಲ್ಲಕ ರಾಜಕೀಯ ಮಾಡುವುದಿಲ್ಲ. ನಮ್ಮದು ಜನರ ಸರ್ಕಾರ, ಅವರಿಗಾಗಿಯೇ ಕೆಲಸ ಮಾಡುತ್ತದೆ. ಇದು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು, ನಾಯಕರಿಗೆ ಮತ ಹಾಕಲು ಸರ್ವಸ್ವತಂತ್ರರು. ನಾನೊಬ್ಬ ಅಹಂಕಾರಿ ಎಂದು ಯಾರೂ ಭಾವಿಸಬೇಕಿಲ್ಲ. ಭಾರತ ಸ್ವಾತಂತ್ರ್ಯ ಪಡೆದ ಮೇಲೆ ಮುಂದೇನು ಎಂಬ ಬಗ್ಗೆ ಭಗತ್ ಸಿಂಗ್ ಯೋಚಿಸಿದ್ದರು. ಅಭಿವೃದ್ಧಿ ಅವರ ಕನಸಾಗಿತ್ತು. ಅವರ ಆಶಯದಂತೆ ನಡೆಯುತ್ತೇನೆ. ಪಂಜಾಬ್ ಅಭಿವೃದ್ಧಿ ಮಾಡಲಾಗುವುದು. ನಿರುದ್ಯೋಗದಿಂದ ಕೃಷಿಯವರೆಗಿನ ಎಲ್ಲ ಕ್ಷೇತ್ರಗಳ ಸಮಸ್ಯೆಯನ್ನೂ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಪಂಜಾಬ್ನಲ್ಲಿ ಇನ್ನಷ್ಟು ಶಾಲೆಗಳು, ಆಸ್ಪತ್ರೆಗಳ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. 117 ವಿಧಾನಸಭೆ ಕ್ಷೇತ್ರಗಳಲ್ಲಿ 92 ಕ್ಷೇತ್ರಗಳಲ್ಲಿ ಆಪ್ ಗೆದ್ದುಕೊಂಡಿದೆ. ಆಡಳಿತದಲ್ಲಿದ್ದ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಆಪ್ ಅಧಿಕಾರದಲ್ಲಿರುವ ಎರಡನೇ ರಾಜ್ಯ ಪಂಜಾಬ್ ಆಗಿದೆ. ಅಲ್ಲಿ ಇಂದು ಭಗವಂತ್ ಮಾನ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಪಂಜಾಬ್ ಅಭಿವೃದ್ಧಿಯ ಬಗ್ಗೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Bhagwant Mann: ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ