Good Governance Day 2022: ಇಂದು ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ 98ನೇ ಜನ್ಮದಿನ, ದೇಶಾದ್ಯಂತ ಉತ್ತಮ ಆಡಳಿತ ದಿನ ಆಚರಣೆ

ಭಾರತದ ನಾಗರಿಕರಲ್ಲಿ ಸರ್ಕಾರದ ಹೊಣೆಗಾರಿಕೆಯ ಅರಿವು ಮೂಡಿಸಲು ಉತ್ತಮ ಆಡಳಿತ ದಿನವನ್ನು ವಾರ್ಷಿಕವಾಗಿ ಸ್ಮರಿಸಲಾಗುತ್ತದೆ, ಇದನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ.

Good Governance Day 2022: ಇಂದು ಮಾಜಿ ಪ್ರಧಾನಿ ದಿ.ವಾಜಪೇಯಿ ಅವರ 98ನೇ ಜನ್ಮದಿನ, ದೇಶಾದ್ಯಂತ ಉತ್ತಮ ಆಡಳಿತ ದಿನ ಆಚರಣೆ
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ
Follow us
| Updated By: Rakesh Nayak Manchi

Updated on:Dec 25, 2022 | 10:32 AM

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ (Atal Bihari Vajpayee 98th Birth Anniversary)ದಂದು (ಡಿಸೆಂಬರ್ 25) ದೇಶಾದ್ಯಂತ ಉತ್ತಮ ಆಡಳಿತ ದಿನ (Good Governance Day 2022)ವನ್ನು ಆಚರಿಸಲಾಗುತ್ತಿದೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರು ಭಾರತದ ಪ್ರಧಾನಿಯಾಗಿ ಆಯ್ಕೆಯಾದ ನಂತರದಿಂದ ಅಂದರೆ 2014ರಿಂದ ವಾಜಪೇಯಿ ಅವರನ್ನು ಗೌರವಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅಲ್ಲದೆ ಸರ್ಕಾರವು ಡಿಸೆಂಬರ್ 19 ರಿಂದ 25 ರವರೆಗೆ ಉತ್ತಮ ಆಡಳಿತ ವಾರವನ್ನು ಆಚರಿಸಲಾಗುತ್ತಿದ್ದು, ಗ್ರಾಮದ ಕಡೆಗೆ ಆಡಳಿತ ಎಂಬ ಅಭಿಯಾನವನ್ನೂ ನಡೆಸಲಾಗುತ್ತಿದೆ.

ಉತ್ತಮ ಆಡಳಿತ ದಿನವನ್ನು ಏಕೆ ಆಚರಿಸಲಾಗುತ್ತದೆ?

2014ರ ಡಿ.23 ರಂದು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಂಡಿತ್ ಮದನ್ ಮೋಹನ್ ಮಾಳವೀಯ (ಮರಣೋತ್ತರ) ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಿಸಲಾಯಿತು. ನಂತರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವನ್ನು ಇನ್ನು ಮುಂದೆ ಭಾರತದಲ್ಲಿ ವಾರ್ಷಿಕವಾಗಿ ಉತ್ತಮ ಆಡಳಿತ ದಿನವಾಗಿ ಸ್ಮರಿಸಲಾಗುತ್ತದೆ ಎಂದು ಘೋಷಿಸಿತು.

ಉತ್ತಮ ಆಡಳಿತ ದಿನದಂದು ಮಾಜಿ ಪ್ರಧಾನಿಯ ಸ್ಮರಣೆ

ಉತ್ತಮ ಆಡಳಿತ ದಿನದಂದು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸುವುದರ ಮೂಲಕ ಜನರು ಗೌರವ ಸಲ್ಲಿಸುತ್ತಾರೆ. ಈ ದಿನ ಅವರು ಮಾಡಿದ ಕೆಲಸವನ್ನು ಜನರು ನೆನಪಿಸಿಕೊಳ್ಳುತ್ತಾರೆ. ಬಿಜೆಪಿ ಪಕ್ಷದ ವತಿಯಿಂದ ಹಾಗೂ ಅಭಿಮಾನಿಗಳಿಂದ ವಿವಿಧೆಡೆ ವಿಚಾರ ಸಂಕಿರಣಗಳನ್ನೂ ಆಯೋಜಿಸಲಾಗುತ್ತದೆ. ವಿಚಾರ ಸಂಕಿರಣಗಳ ಮೂಲಕ ಜನರು ಮಾಜಿ ಪ್ರಧಾನಿಯವರು ಮಾಡಿರುವ ಕೆಲಸಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತಾರೆ.

ಮಾಜಿ ಪ್ರಧಾನಿಯವರ ಜೀವನ ಚರಿತ್ರೆ

ಮಾಜಿ ಪ್ರಧಾನಿ ಅಟಲ್ ವಿಹಾರಿ ವಾಜಪೇಯಿ ಅವರು 1924 ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ಅವರು ಮೂರು ಬಾರಿ ದೇಶದ ಪ್ರಧಾನಿಯಾದರು. 1996ರಲ್ಲಿ ಮೊದಲ ಬಾರಿಗೆ ದೇಶದ ಪ್ರಧಾನಿಯಾದರು. ಎರಡನೇ ಬಾರಿ 1998-99ರಲ್ಲಿ ಮತ್ತೆ ಪ್ರಧಾನಿಯಾಗಿ ಗದ್ದುಗೆ ಏರಿದರು. ಇದರ ನಂತರ, ಅವರು 1999ರ ಅಕ್ಟೋಬರ್ 13 ರಂದು ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾದರು. ವಾಜಪೇಯಿ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ನಾಯಕರಾಗಿದ್ದಾರೆ. 2015ರ ಮಾರ್ಚ್ 27 ರಂದು ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಲಾಯಿತು. 2018ರ ಆಗಸ್ಟ್ 16ರಂದು ನಿಧನ ಹೊಂದಿದರು.

ವಾಜಪೇಯಿ ಬಗ್ಗೆ ಕುತೂಹಲಕಾರಿ ಸಂಗತಿಗಳು

  • ವಾಜಪೇಯಿ ಅವರು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರೂ ಮಾಂಸಾಹಾರವನ್ನು ಇಷ್ಟಪಡುತ್ತಿದ್ದರು. ಸಿಗಡಿ ಅವರ ನೆಚ್ಚಿನ ಆಹಾರ ಪದಾರ್ಥವಾಗಿತ್ತು.
  • ವಾಜಪೇಯಿ ಚಿಕ್ಕಂದಿನಿಂದಲೂ ಕಾವ್ಯದ ಮೇಲೆ ಒಲವು ಹೊಂದಿದ್ದರು. ಅವರು 10ನೇ ತರಗತಿಯಲ್ಲಿದ್ದಾಗ ತಮ್ಮ ಮೊದಲ ಕವಿತೆಯನ್ನು ಬರೆದಿದ್ದರು.
  • ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ ಅವರು 23 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು.
  • ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯವರ ನಿಕಟ ಅನುಯಾಯಿಯಾಗಿದ್ದರು.
  • ಅಟಲ್ ಬಿಹಾರಿ ವಾಜಪೇಯಿ ಮದುವೆಯಾಗಿಲ್ಲ. ಮದುವೆಯಾಗದೆ ಇರುವುದರ ಹಿಂದಿನ ಕಾರಣವನ್ನು ಕೇಳಿದಾಗ, “ನಾನು ತುಂಬಾ ಕಾರ್ಯನಿರತನಾಗಿರುತ್ತೇನೆ, ನಾನು ಮರೆತಿದ್ದೇನೆ” ಎಂದು ಅವರು ಉತ್ತರಿಸಿದ್ದರು.
  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ರಾಜಕಾರಣಿಯಾಗಿದ್ದಾರೆ.
  • ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತವು ರಾಜಸ್ಥಾನದ ಪೋಖ್ರಾನ್‌ನಲ್ಲಿ ಆಪರೇಷನ್ ಶಕ್ತಿ ಎಂಬ ಪರಮಾಣು ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
  • ವಾಜಪೇಯಿ ಅವರು 47 ವರ್ಷಗಳ ಕಾಲ ಸಂಸತ್ ಸದಸ್ಯರಾಗಿದ್ದರು. ಲೋಕಸಭೆಯಿಂದ 11 ಬಾರಿ ಮತ್ತು ರಾಜ್ಯಸಭೆಯಿಂದ ಎರಡು ಬಾರಿ ಆಯ್ಕೆಯಾಗಿದ್ದರು.
  • ಹಿರಿಯ ನಾಯಕ 2005ರಲ್ಲಿ ರಾಜಕೀಯದಿಂದ ನಿವೃತ್ತಿ ಘೋಷಿಸಿದರು.
  • 2009ರಲ್ಲಿ ಅವರು ಪಾರ್ಶ್ವವಾಯುವಿಗೆ ಒಳಗಾದರು. ಘಟನೆಯ ನಂತರ ಅವರ ಮಾತು ಮತ್ತು ಕೈ ಚಲನೆಗಳು ದುರ್ಬಲಗೊಂಡಿದ್ದವು

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Sun, 25 December 22