ದೆಹಲಿ: ಭಾರತೀಯ ರೈಲ್ವೇಯನ್ನು(Indian Railways) ಖಾಸಗೀಕರಣಗೊಳಿಸುವ (privatise) ಯಾವುದೇ ಯೋಜನೆಯನ್ನು ಸರ್ಕಾರ ಹೊಂದಿಲ್ಲ. ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳ ವಾದ ಕಾಲ್ಪನಿಕವಾಗಿದೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ. ರೈಲ್ವೆಯು ಸಾಮಾಜಿಕ ಹೊಣೆಗಾರಿಕೆಗಳನ್ನು ಪೂರೈಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ ಅವರು, ಸರಕು ಸಾಗಣೆ ಕಾರಿಡಾರ್‌ಗಳನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು. ಇದು ಕೇವಲ ಒಂದು ಕಾಲ್ಪನಿಕ ಸಂಗತಿ ಆಗಿದೆ. ಹಳಿಯು ರೈಲ್ವೆಗೆ ಸೇರಿದ್ದು, ನಿಲ್ದಾಣಗಳು ರೈಲ್ವೇಗೆ ಸೇರಿದ್ದು, ಇಂಜಿನ್‌ಗಳು ರೈಲ್ವೇಗೆ ಸೇರಿದ್ದು, ರೈಲುಗಳು ರೈಲ್ವೇಗೆ ಸೇರಿದ್ದು, ಸಿಗ್ನಲಿಂಗ್ ವ್ಯವಸ್ಥೆಗಳು ರೈಲ್ವೇಗೆ ಸೇರಿದ್ದು. ಹೀಗಿರುವಾಗ ಖಾಸಗೀಕರಣದ ಮಾತೇ ಇಲ್ಲ.ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ ಸಚಿವರು. ಪ್ರಯಾಣಿಕರ ದರದಲ್ಲಿ 60,000 ಕೋಟಿ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ ಎಂದು ವೈಷ್ಣವ್ ಒತ್ತಿ ಹೇಳಿದರು. ಸಾಮಾಜಿಕ ಹೊಣೆಗಾರಿಕೆಯನ್ನು ಹೊರತೆಗೆದರೆ, ಭಾರತೀಯ ರೈಲ್ವೆಯ ಕಾರ್ಯನಿರ್ವಹಣೆಯ ಅನುಪಾತ ಅಂದರೆ ಒಂದು ಘಟಕದ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ನಿಯತಾಂಕ ಸುಮಾರು ಶೇ 85 ಇರುತ್ತದೆ ಎಂದು ಅವರು ಹೇಳಿದರು. ಆದಾಗ್ಯೂ, ಇದು ಪ್ರಸ್ತುತ 100 ಕ್ಕಿಂತ ಸ್ವಲ್ಪವೇ ಕಡಿಮೆ ಇದೆ. ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ರೈಲ್ವೆಯನ್ನು ಖಾಸಗೀಕರಣಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹಲವು ಸಂಸದರು ಆರೋಪಿಸಿದ ಹಿನ್ನೆಲೆಯಲ್ಲಿ ರೈಲ್ವೇ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಲೋಕಸಭೆಯಲ್ಲಿ 2022-23ನೇ ಸಾಲಿಗೆ ರೈಲ್ವೆ ಸಚಿವಾಲಯಕ್ಕೆ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವರು, ನೇಮಕಾತಿಗೆ ಸಂಬಂಧಿಸಿದಂತೆ ಇತ್ತೀಚಿನ “ತಪ್ಪು ಗ್ರಹಿಕೆ” ಯನ್ನು ಸಹಾನುಭೂತಿಯ ರೀತಿಯಲ್ಲಿ ರೈಲ್ವೆ ಪರಿಹರಿಸಿದೆ ಎಂದು ಹೇಳಿದರು.
“ನೇಮಕಾತಿಗೆ ಯಾವುದೇ ನಿಷೇಧವಿಲ್ಲ. 1.14 ಲಕ್ಷ ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ” ಎಂದು ಚರ್ಚೆಯ ವೇಳೆ ಸಂಸದರು ಪ್ರಸ್ತಾಪಿಸಿದ ವಿವಿಧ ವಿಷಯಗಳಿಗೆ ಪ್ರತಿಕ್ರಿಯಿಸಿದ ಸಚಿವರು ಹೇಳಿದರು.
ಮುಂಬೈ ಮತ್ತು ಅಹಮದಾಬಾದ್ ನಡುವಿನ ಉದ್ದೇಶಿತ ಬುಲೆಟ್ ಟ್ರೈನ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಗುಜರಾತ್ ವಿಭಾಗದಲ್ಲಿ 99.7 ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ ಮತ್ತು 750 ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಬುಲೆಟ್ ರೈಲು ಯೋಜನೆ ಕಾಮಗಾರಿಯು ತಿಂಗಳಿಗೆ 8 ಕಿ.ಮೀ.ನಂತೆ ಪ್ರಗತಿಯಲ್ಲಿದ್ದು, ಇದನ್ನು ತಿಂಗಳಿಗೆ 10 ಕಿ.ಮೀ.ಗೆ ಹೆಚ್ಚಿಸಲಾಗುವುದು.
“ಭಾರತದ ಮಣ್ಣಿನಲ್ಲಿ ಬುಲೆಟ್ ರೈಲು ಓಡಲು ಸಾಧ್ಯವಿಲ್ಲ ಎಂದು ಯಾರು ಹೇಳುತ್ತಾರೆ” ಎಂದು ಅವರು ಟಿಎಂಸಿಯ ವಾದವನ್ನು ಪ್ರಶ್ನಿಸಿದರು. ರಾಜ್ಯ ಸರ್ಕಾರದ ಸಹಕಾರದ ಕೊರತೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ 18 ರೈಲ್ವೆ ಯೋಜನೆಗಳು ಬಾಕಿ ಉಳಿದಿವೆ ಎಂದು ವೈಷ್ಣವ್ ಹೇಳಿದರು.
ವಂದೇ ಭಾರತ್ ರೈಲುಗಳ ವೇಗವನ್ನು ಪ್ರಸ್ತುತ ಗಂಟೆಗೆ 160 ಕಿಮೀಯಿಂದ ಗಂಟೆಗೆ 200 ಕಿಲೋಮೀಟರ್‌ಗೆ ಏರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಮುಂಬರುವ ವರ್ಷಗಳಲ್ಲಿ ಇಂತಹ 400 ರೈಲುಗಳನ್ನು ಪರಿಚಯಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ಆಟ ಇನ್ನೂ ಮುಗಿದಿಲ್ಲ: ರಾಷ್ಟ್ರಪತಿ ಚುನಾವಣೆ ಬಗ್ಗೆ ಬಿಜೆಪಿಗೆ ಮಮತಾ ಬ್ಯಾನರ್ಜಿ ಸಂದೇಶ
Published On - 9:28 pm, Wed, 16 March 22