ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India – PFI) ಮತ್ತು ಅದರ ಹಲವು ಅಂಗಸಂಸ್ಥೆಗಳ ನಿಷೇಧವನ್ನು ಪರಿಶೀಲಿಸಬೇಕಾದ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಾ ನ್ಯಾಯಮಂಡಳಿಯನ್ನು ಕೇಂದ್ರ ಸರ್ಕಾರವು ಪುನರ್ ರಚಿಸಿದೆ. ನ್ಯಾಯಮಂಡಳಿಯ ಅಧ್ಯಕ್ಷರಾಗಿ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರನ್ನು ನೇಮಿಸಲಾಗಿದೆ. 28ನೇ ಫೆಬ್ರುವರಿ 2022ರಂದು ಶರ್ಮಾ ಅವರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು.
ಕೇಂದ್ರ ಗೃಹ ಇಲಾಖೆಯು ಕಳೆದ ಸೆ 28ರಂದು ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಘೋಷಿಸಿತ್ತು. ಕಾನೂನು ಬಾಹಿರ ಕೃತ್ಯಗಳ ನಿಯಂತ್ರಣ ಕಾಯ್ದೆಯ ಅನ್ವಯ 5 ವರ್ಷಗಳ ಅವಧಿಗೆ ಈ ಸಂಘಟನೆಗಳನ್ನು ನಿರ್ಬಂಧಿಸಲಾಗಿತ್ತು. ಪಿಎಫ್ಐನ ಅಂಗಸಂಸ್ಥೆಗಳಾದ ರಿಹ್ಯಾಬ್ ಇಂಡಿಯಾ ಫೌಂಡೇಶನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫೆಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಷನ್, ನ್ಯಾಷನಲ್ ವುಮೆನ್ಸ್ ಫ್ರಂಟ್, ಜ್ಯೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಸೇರಿದಂತೆ ಹಲವು ಸಂಘಟನೆಗಳನ್ನು ಏಕಕಾಲಕ್ಕೆ ನಿಷೇಧಿಸಲಾಗಿತ್ತು.
ಕಾನೂನು ಬಾಹಿರ ಕೃತ್ಯಗಳ ನಿಯಂತ್ರಣ ಕಾಯ್ದೆಯ ಅನ್ವಯ ಯಾವುದೇ ಸಂಘಟನೆಯನ್ನು ನಿಷೇಧಿಸಿದಾಗ ಅಧಿಸೂಚನೆಯು ಹೊರಡಿಸಿದ 30 ದಿನಗಳ ಒಳಗೆ ನ್ಯಾಯಮಂಡಳಿಯು ಈ ಅಧಿಸೂಚನೆಯನ್ನು ಪರಿಶೀಲಿಸಿ, ತೀರ್ಮಾನ ಪ್ರಕಟಿಸಬೇಕಿದೆ. ನಿಷೇಧದ ಅಧಿಸೂಚನೆಯಲ್ಲಿ ಪ್ರಸ್ತಾಪಿಸಿರುವ ಸಂಗತಿಗಳು ಕಾನೂನು ಬದ್ಧವಾಗಿವೆ, ನಿಷೇಧಿತ ಸಂಘಟನೆಯಿಂದ ಸಮಾಜಕ್ಕೆ ಹಾನಿಯಾಗುತ್ತಿತ್ತು ಎಂದು ನ್ಯಾಯಮಂಡಳಿಗೆ ಸರ್ಕಾರವು ಮನವರಿಕೆ ಮಾಡಿಕೊಡಬೇಕಿದೆ. ನ್ಯಾಯಮಂಡಳಿಯು ತೀರ್ಮಾನ ಪ್ರಕಟಿಸಿ, ಅದು ಗೆಜೆಟ್ ಅಧಿಸೂಚನೆಯಾಗುವವರೆಗೂ ಕೇಂದ್ರ ಸರ್ಕಾರದ ಅಧಿಸೂಚನೆಯು ಜಾರಿಯಾಗುವುದಿಲ್ಲ.
ಪಿಎಫ್ಐ ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಏಕೆ?
ಬೆಂಗಳೂರಿನ ಎಸ್ಕೆ ಗಾರ್ಡನ್ನಲ್ಲಿರುವ ಪಿಎಫ್ಐ ಕಚೇರಿಯಲ್ಲಿ ಎನ್ಐಎ ದಾಳಿ ವೇಳೆ ಸಿಕ್ಕ ಮೆಟಲ್ ಡಿಟೆಕ್ಟರ್ಗಳು ತನಿಖಾಧಿಕಾರಿಗಳಿಗೆ ಒಗಟಾಗಿ ಕಾಡುತ್ತಿದೆ. ಈ ಮೆಟಲ್ ಡಿಟೆಕ್ಟರ್ಗಳನ್ನು ಏಕೆ ಬಳಸಲಾಗುತ್ತಿತ್ತು ಎಂಬ ಬಗ್ಗೆ ಸತತ 11 ದಿನಗಳ ವಿಚಾರಣೆಯ ನಂತರವೂ ವಿವರಗಳು ತಿಳಿದುಬಂದಿಲ್ಲ.
ಪಿಎಫ್ಐ ಕಚೇರಿಯಲ್ಲಿದ್ದ ಓರ್ವ ಆಫೀಸ್ ಬಾಯ್ ಹಾಗೂ ಮಂಗಳೂರು ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ವರ ಮೊಬೈಲ್ ಫೋನ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಸೈಬರ್ ಪೊಲೀಸರ ನೆರವಿನಿಂದ ಇವರ ಮೊಬೈಲ್ಗಳ ಡೇಟಾ ರಿಟ್ರೀವ್ ಮಾಡಲು ಪೊಲೀಸರು ಯತ್ನಿಸುತ್ತಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಮೆಟಲ್ ಡಿಟೆಕ್ಟರ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಎನ್ಐಎ ಬಂಧಿಸಿರುವ ಪ್ರಮುಖ ಮುಖಂಡರ ಬಳಿ ಮಾಹಿತಿ ಪಡೆಯಬೇಕು ಎಂದು ಪೊಲೀಸರು ನಿರ್ಧರಿಸಿದ್ದಾರೆ. ‘ಅಗತ್ಯಬಿದ್ದರೆ ನಾವೇ ತನಿಖೆ ಮಾಡುತ್ತೇವೆ. ಇಲ್ಲದಿದ್ದರೆ ಎನ್ಐಎ ಅಧಿಕಾರಿಗಳ ಗಮನಕ್ಕೆ ತಂದು, ಅವರ ತನಿಖೆಗೆ ಬಿಡುತ್ತೇವೆ’ ಎಂದು ನಗರ ಪೊಲೀಸರು ಹೇಳಿದ್ದಾರೆ.
ಮೆಟಲ್ ಡಿಟೆಕ್ಟರ್ ಯಾಕೆ ಇಟ್ಟಿರಬಹುದು?
ಯಾವುದೇ ಲೋಹದ ವಸ್ತುಗಳು ಇದ್ದರೂ ಪತ್ತೆ ಮಾಡುವ ಮೆಟಲ್ ಡಿಟೆಕ್ಟರ್ಗಳು ಸಾಮಾನ್ಯವಾಗಿ ಪೊಲೀಸರು ಹಾಗೂ ಭದ್ರತಾ ಏಜೆನ್ಸಿಗಳ ಬಳಿ ಇರುತ್ತವೆ. ಈ ಮೆಟಲ್ ಡಿಟೆಕ್ಟರ್ಗಳಿಂದ ತಪ್ಪಿಸಿಕೊಂಡು, ಯಾವುದೆ ವಸ್ತುವನ್ನು ಹೇಗೆ ಕೊಂಡೊಯ್ಯಬಹುದು ಎಂದು ತಿಳಿಯಲು ಬಳಸಿರಬಹುದು. ಸಾರ್ವಜನಿಕ ಸಭೆಯಲ್ಲಿ ಮೆಟೆಲ್ ಡಿಟೆಕ್ಟರ್ನಿಂದ ತಪ್ಪಿಸಿಕೊಂಡು ಹೋಗಲು ತರಬೇತಿಗೆ ಬಳಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ಎರಡು ಮೆಟಲ್ ಡಿಟೆಕ್ಟರ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ರವಾನಿಸಲಾಗಿದೆ.
ಪಿಎಫ್ಐ ಕಾರ್ಯಕರ್ತರ ವಿಚಾರಣೆ
ಬೆಂಗಳೂರಿನಲ್ಲಿ ಬಂಧಿಸಿರುವ ಕೆ.ಜಿ.ಹಳ್ಳಿಯ ಪಿಎಫ್ಐ ಕಾರ್ಯಕರ್ತರ 15 ದಿನಗಳ ನ್ಯಾಯಾಂಗ ಬಂಧನ ಇಂದು ಅಂತ್ಯವಾಗಲಿದೆ. ಕೇಂದ್ರ ಕಾರಾಗೃಹದಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಎದುರು ಆರೋಪಿಗಳನ್ನು ಪೊಲೀಸರು ವರ್ಚುವಲ್ ಆಗಿ ಹಾಜರು ಪಡಿಸಲಿದ್ದಾರೆ. ಕೆಲ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ನಗರ ಪೊಲೀಸರು ಈಗಾಗಲೇ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.