ಭಾರತದ ಕೊರೊನಾ ಲಸಿಕೆಯ ಅಂದೋಲನದಲ್ಲಿ ಬಳಕೆಯಾಗುತ್ತಿರುವ ಲಸಿಕೆಗಳ ಪಟ್ಟಿಗೆ ಮುಂದಿನ ವಾರದಿಂದ ಮತ್ತೊಂದು ಹೊಸ ಲಸಿಕೆ ಸೇರ್ಪಡೆಯಾಗಲಿದೆ. ಆಗಸ್ಟ್ ತಿಂಗಳಲ್ಲೇ ಅಹಮದಾಬಾದ್‌ನ ಜೈಡಸ್ ಕ್ಯಾಡಿಲಾ ಕಂಪನಿಯ ಜೈಕೋವ್ ಡಿ ಲಸಿಕೆಗೆ ಡಿಸಿಜಿಐ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಆದರೆ, ಇನ್ನೂ ಈ ಲಸಿಕೆಯನ್ನು ಕೆಲ ಸಮಸ್ಯೆಗಳ ಕಾರಣದಿಂದ ಲಸಿಕಾ ಅಭಿಯಾನದಲ್ಲಿ ಬಳಕೆ ಮಾಡುತ್ತಿಲ್ಲ. ಮುಂದಿನ ವಾರದಿಂದಲೇ ಜೈಕೋವ್ ಡಿ ಲಸಿಕೆಯು ಭಾರತದ ಲಸಿಕಾ ಅಭಿಯಾನದಲ್ಲಿ ಬಳಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜೈಕೋವ್ ಡಿ ಲಸಿಕೆಯನ್ನು ಜನರಿಗೆ ನೀಡಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮುಂದಿನ ವಾರದಿಂದ ಜೈಕೋವ್ ಡಿ ಲಸಿಕೆಯನ್ನು ಜನರಿಗೆ ನೀಡಲಾಗುತ್ತೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೊದಲಿಗೆ ದೇಶದ 7 ರಾಜ್ಯಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತೆ. ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಏಳು ರಾಜ್ಯಗಳು ಜೈಕೋವ್ ಡಿ ಲಸಿಕೆಯನ್ನು ಜನರಿಗೆ ನೀಡುತ್ತವೆ. ಈ ರಾಜ್ಯಗಳು ಲಸಿಕೆಯನ್ನು ನೀಡಲು ಹೆಚ್ಚಿನ ಸಂಖ್ಯೆಯ ಮೊದಲ ಡೋಸ್ ಪಡೆಯದೇ ಇರುವ ಜಿಲ್ಲೆಗಳನ್ನು ಗುರುತಿಸಿವೆ ಎಂದು ಹೇಳಿದ್ದಾರೆ. ಈ ಲಸಿಕೆಯನ್ನು ಸದ್ಯಕ್ಕೆ ವಯಸ್ಕರಿಗೆ ಮಾತ್ರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರತದ ಡಿಸಿಜಿಐ, ಆಗಸ್ಟ್ 20ರಂದು ಮೂರು-ಡೋಸ್ ಕೋವಿಡ್-19 ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಭಾರತದಲ್ಲಿ 12 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜನರಿಗೆ ನೀಡಬಹುದಾದ ಮೊದಲ ಲಸಿಕೆಯೇ ಜೈ ಕೋವ್ ಡಿ ಲಸಿಕೆ. ಆದರೆ, ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸದ ಕಾರಣ, ವಯಸ್ಕರಿಗೆ ಮಾತ್ರ ಜೈಡಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಕೊವಿಶೀಲ್ಡ್ , ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ನಂತರ ಲಸಿಕೆ ಅಭಿಯಾನ ಸೇರುತ್ತಿರುವ ನಾಲ್ಕನೇ ಲಸಿಕೆ ಇದಾಗಿದೆ.
ಅಕ್ಟೋಬರ್ ವೇಳೆಗೆ ಜೈಡಸ್ ಕಂಪನಿಯು 1 ಕೋಟಿ ಡೋಸ್ ಮತ್ತು ಜನವರಿ 2022ರ ವೇಳೆಗೆ 4ರಿಂದ 5 ಕೋಟಿ ಡೋಸ್‌ಗಳನ್ನು ತಯಾರಿಸಬಹುದು ಎಂದು ಜೈಡಸ್ ಕ್ಯಾಡಿಲಾ ವ್ಯವಸ್ಥಾಪಕ ನಿರ್ದೇಶಕ ಶರ್ವಿಲ್ ಪಟೇಲ್ ಈ ಹಿಂದೆ ಹೇಳಿದ್ದರು. ಪ್ರಪಂಚದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾದ ಜೈಕೋವ್ ಡಿ ಲಸಿಕೆಯ ಒಂದು ಕೋಟಿ ಡೋಸ್‌ಗಳನ್ನು ಪ್ರತಿ ಡೋಸ್‌ಗೆ 265 ರೂಪಾಯಿಯಂತೆ ಭಾರತ ಸರ್ಕಾರಕ್ಕೆ ಪೂರೈಸಲು ಜೈಡಸ್ ಕ್ಯಾಡಿಲಾ ಕಂಪನಿಯು ಆರ್ಡರ್ ಪಡೆದಿದೆ. ಸೂಜಿ ಮುಕ್ತ ಲಸಿಕಾ ಲೇಪಕದ ಮೊತ್ತವನ್ನು ಪ್ರತಿ ಡೋಸ್‌ಗೆ 93 ರೂಪಾಯಿ ನಿಗದಿಪಡಿಸಲಾಗಿದೆ.
ಒಂದು ಕೋಟಿ (10 ಮಿಲಿಯನ್) ಡೋಸ್‌ಗಳು ಲಭ್ಯವಿದ್ದು, ಇವತ್ತು ತಕ್ಷಣದಿಂದಲೇ ಬಳಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರ ನೀಡುತ್ತಿರುವ ಲಸಿಕೆಗಳ ಪಟ್ಟಿಗೆ ಜೈಕೋವ್ ಡಿ ಶೀಘ್ರ ಸೇರ್ವಡೆಯಾಗಲಿದೆ. ಆರೋಗ್ಯ ಸಚಿವಾಲಯದ ಲಸಿಕೆ ವಿಭಾಗವು ಅಗತ್ಯ ಪೂರ್ವಸಿದ್ಧತಾ ಕಾರ್ಯವನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: 3 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ 6 ತಿಂಗಳಲ್ಲಿ ಕೊವಿಡ್ ಲಸಿಕೆ ಸಿದ್ಧವಾಗಲಿದೆ: ಅದಾರ್ ಪೂನವಾಲಾ
ಇದನ್ನೂ ಓದಿ: ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ಫೋಟೊ ಇದ್ದರೇನು? ಅವರು ನಮ್ಮ ಪ್ರಧಾನಿ: ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡ ಕೇರಳ ಹೈಕೋರ್ಟ್