Breaking News: 5 ವರ್ಷಗಳ ಅವಧಿಗೆ PFI ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ

ಪಿಎಫ್​ಐ ಸಂಘಟನೆಯನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ.

Breaking News: 5 ವರ್ಷಗಳ ಅವಧಿಗೆ PFI ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ
ಪಿಎಫ್ಐ (ಸಂಗ್ರಹ ಚಿತ್ರ)
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 28, 2022 | 2:34 PM

ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Pupular Front of India – PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಸಂಘಟನೆಗಳನ್ನು ‘ಕಾನೂನು ಬಾಹಿರ’ ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ ಮೂಲಗಳನ್ನು ಆಧರಿಸಿದ ಎಎನ್​ಐ ಸುದ್ದಿ ಸಂಸ್ಥೆಯು ಈ ಸಂಬಂಧ ಟ್ವೀಟ್ ಮಾಡಿದೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ರಾಷ್ಟ್ರೀಯ ತನಿಖಾ ದಳ (National Investigation Agency – NIA) ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಪಿಎಫ್​ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದರು. ನೂರಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ದಾಳಿಯ ಬೆನ್ನಿಗೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾಗ ಅಜಿತ್ ದೋವಲ್ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದರು. ವಿವಿಧ ಭದ್ರತಾ ಏಜೆನ್ಸಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದ ಸಭೆಯಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಪಿಎಫ್​ಐ ನಿಷೇಧಿಸಿ ಸರ್ಕಾರ ಹೊರಡಿಸಿರುವ ಆದೇಶ

ಎನ್​ಐಎ, ಜಾರಿ ನಿರ್ದೇಶನಾಲಯ (Enforcement Directorate – ED) ಮತ್ತು ಗುಪ್ತದಳದಿಂದ (Intelligence Bureau – IB) ಸಾಕಷ್ಟು ಮಾಹಿತಿ ಕಲೆಹಾಕಿದ ನಂತರವೇ ಪಿಎಫ್​ಐ ಹಾಗೂ ಎಸ್​ಡಿಪಿಐ ಮೇಲೆ ಕೇಂದ್ರ ಸರ್ಕಾರದ ಏಜೆನ್ಸಿಗಳು ಸೆ 22ರಂದು ದಾಳಿ ನಡೆಸಿದ್ದವು. ವಿವಿಧ ರಾಜ್ಯಗಳ ಪೊಲೀಸರ ನೆರವನ್ನೂ ದಾಳಿಯ ವೇಳೆ ಪಡೆಯಲಾಯಿತು. ಪಿಎಫ್​ಐ ಸಂಘಟನೆಯು ತನ್ನನ್ನು ತಾನು ಸಮಾಜೋ-ಧಾರ್ಮಿಕ ಸಂಘಟನೆ ಎಂದು ಕರೆದುಕೊಳ್ಳುತ್ತದೆ. ಈ ಸಂಘಟನೆಯ ಬಗ್ಗೆ ಕೇಂದ್ರ ಮತ್ತು ಹಲವು ರಾಜ್ಯ ಸರ್ಕಾರಗಳು ಇದೀಗ ಕಠಿಣ ನಿಲುವು ತಳೆದಿವೆ. ಉದಯ್​ಪುರ್ ಮತ್ತು ಅಮರಾವತಿ ನಗರಗಳಲ್ಲಿ ನಡೆದ ಶಿರಚ್ಛೇದ ಪ್ರಕರಣಗಳ ಅಪರಾಧಿಗಳಿಗೆ ಪಿಎಫ್​ಐ ನಂಟು ಇದ್ದುದು ಬೆಳಕಿಗೆ ಬಂದ ನಂತರ ಕೇಂದ್ರ ಸರ್ಕಾರವು ಪಿಎಫ್​ಐ ವಿರುದ್ಧ ಮತ್ತಷ್ಟು ಕಠಿಣ ನಿಲುವು ತಳೆಯಿತು.

ಇದೀಗ ಪಿಎಫ್​ಐ ಸಂಘಟನೆಯನ್ನು ಕೇಂದ್ರ ಸರ್ಕಾರವು ಕಾನೂನು ಬಾಹಿರ ಎಂದು ಅಧಿಕೃತವಾಗಿ ಘೋಷಿಸಿದ್ದು, ಐದು ವರ್ಷಗಳ ಅವಧಿಗೆ ನಿಷೇಧಿಸುವುದರೊಂದಿಗೆ ಈ ಕಾರ್ಯಾಚರಣೆಯು ಮಹತ್ವದ ಘಟ್ಟ ತಲುಪಿದೆ.

Published On - 6:47 am, Wed, 28 September 22