ದೆಹಲಿ: ಕೊರೊನಾ ವೈರಸ್ ವಿರುದ್ಧ ಭಾರತವು ದೇಶೀಯವಾಗಿ ರೂಪಿಸಿರುವ 2ನೇ ಲಸಿಕೆ ಝೈಕೊವ್-2ಡಿ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಒಂದು ಕೋಟಿ ಲಸಿಕೆಗಳನ್ನು ಪೂರೈಸುವಂತೆ ಕಂಪನಿಗೆ ಬೇಡಿಕೆಯಿಟ್ಟಿದೆ. ದೇಶಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿಯೂ ಈ ಲಸಿಕೆಯನ್ನೂ ಸೇರಿಸಿಕೊಳ್ಳಲು ಸರ್ಕಾರವು ನಿರ್ಧರಿಸಿದೆ. ಸೂಜಿಯಿಲ್ಲದೆ ಔಷಧವನ್ನು ದೇಹಕ್ಕೆ ಸೇರಿರುವ ಈ ಲಸಿಕೆಗೆ ಕಳೆದ ಆಗಸ್ಟ್ 20ರಂದು ಭಾರತದ ಔಷಧ ಮಹಾನಿಯಂತ್ರಕರ ಅನುಮೋದನೆ (Drugs Controller General of India – DCGI) ಪಡೆದುಕೊಂಡಿತ್ತು.
12ರಿಂದ 18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡಬಹುದು ಎಂದು ಡಿಸಿಜಿಐ ಅನುಮೋದನೆ ನೀಡಿದ್ದರೂ, ಆರಂಭದಲ್ಲಿ ಲಸಿಕೆಯನ್ನು ಕೇವಲ ವಯಸ್ಕರಿಗೆ ಮಾತ್ರ ನೀಡಲಾಗುತ್ತದೆ. ಝೈಕೊವ್-ಡಿ ಲಸಿಕೆಯ ಪ್ರತಿ ಡೋಸ್ಗೆ ₹ 358 ದರ ನಿಗದಿಪಡಿಸಲಾಗಿದೆ. ಸಾಧ್ಯವಾದಷ್ಟೂ ಬೇಗ ಲಸಿಕೆಗಳನ್ನು ಪೂರೈಸುವಂತೆ ಸರ್ಕಾರವು ಕಂಪನಿಗೆ ವಿನಂತಿಸಿದೆ.
ಮಕ್ಕಳಿಗೂ ಲಸಿಕೆ ನೀಡಲು ಅವಕಾಶವಿದ್ದರೂ ವಯಸ್ಕರಿಗೆ ಮಾತ್ರವೇ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರಿ ಅಧಿಕಾರಿಗಳು ಕಂಪನಿಯ ಉತ್ಪಾದನಾ ಸಾಮರ್ಥ್ಯ ಸೀಮಿತವಾಗಿದೆ. ಪ್ರತಿ ತಿಂಗಳು 1 ಕೋಟಿ ಲಸಿಕೆ ಡೋಸ್ಗಳನ್ನು ಮಾತ್ರವೇ ನೀಡಲು ಕಂಪನಿಗೆ ಸಾಧ್ಯವಿದೆ. ಹೀಗಾಗಿ ಮೊದಲು ವಯಸ್ಕರಿಗೆ ಮಾತ್ರವೇ ಲಸಿಕೆ ಒದಗಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.
ಕಳೆದ ಸೆಪ್ಟೆಂಬರ್ 30ರಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾತನಾಡಿ, ವಿಶ್ವದ ಮೊದಲ ಡಿಎನ್ಎ ಆಧರಿತ ಲಸಿಕೆಯನ್ನು ದೇಶವ್ಯಾಪಿ ಆಂದೋಲನದಲ್ಲಿ ಬಳಸಲಾಗುವುದು ಎಂದು ಹೇಳಿದ್ದರು. ಈ ಲಸಿಕೆಯ ಮೂರು ಡೋಸ್ಗಳನ್ನು ನೀಡಬೇಕಾಗುತ್ತದೆ. ಮೊದಲ ಲಸಿಕೆ ತೆಗೆದುಕೊಂಡ 28 ಮತ್ತು 56ನೇ ದಿನಕ್ಕೆ ಕ್ರಮವಾಗಿ ಎರಡು ಮತ್ತು ಮೂರನೇ ಲಸಿಕೆಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದರು.
ಈವರೆಗೆ ಭಾರತದಲ್ಲಿ ಒಟ್ಟು 6 ಲಸಿಕೆಗಳು ತುರ್ತು ಬಳಕೆ ಅನುಮೋದನೆ (Emergency Use Authorisation – EUA) ಪಡೆದುಕೊಂಡಿವೆ. ಇದರಲ್ಲಿ ಝೈಕೊವ್-ಡಿ 6ನೆಯದ್ದು. ಹೈದರಾಬಾದ್ ಮೂಲದ ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಭಾರತ ನಿರ್ಮಿತ ಮತ್ತೊಂದು ಕೊವಿಡ್ ಲಸಿಕೆಯಾಗಿದೆ. ಝೈಕೊವ್-2ಇ ಜೊತೆಗೆ ಕೊವ್ಯಾಕ್ಸಿನ್ ಸಹ ಮಕ್ಕಳಿಗೆ ನೀಡಬಹುದು ಎಂದು ಔಷಧ ನಿಯಂತ್ರಕರು ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ 2-18 ವರ್ಷದವರಿಗೆ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಒಕುಜೆನ್ ಕಂಪನಿ
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊವಿಡ್ ಸೋಂಕು ಮತ್ತು ಸಾವಿನ ಸಂಖ್ಯೆ ತಗ್ಗಿದೆ, ಆದರೆ ಲಸಿಕೆ ನೀಡುವ ಪ್ರಮಾಣವು ಕುಂಠಿತಗೊಂಡಿದೆ!