ವರ್ಷದೊಳಗೆ ಜಿಪಿಎಸ್ ಆಧರಿತ ಟೋಲ್, ಬ್ಯಾಂಕ್ ಖಾತೆಯಿಂದಲೇ ಟೋಲ್ ಶುಲ್ಕ ಕಡಿತ: ನಿತಿನ್ ಗಡ್ಕರಿ

ಇನ್ನು ಒಂದು ವರ್ಷದೊಳಗೆ ದೇಶದಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ವರ್ಷದೊಳಗೆ ಜಿಪಿಎಸ್ ಆಧರಿತ ಟೋಲ್, ಬ್ಯಾಂಕ್ ಖಾತೆಯಿಂದಲೇ ಟೋಲ್ ಶುಲ್ಕ ಕಡಿತ: ನಿತಿನ್ ಗಡ್ಕರಿ
ನಿತಿನ್​ ಗಡ್ಕರಿ (ಸಂಗ್ರಹ ಚಿತ್ರ)
Edited By:

Updated on: Mar 18, 2021 | 6:36 PM

ನವದೆಹಲಿ: ಇನ್ನು ಒಂದು ವರ್ಷದೊಳಗೆ ಸಂಪೂರ್ಣವಾಗಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹವನ್ನು ಜಾರಿಗೆ ತರುವುದಕ್ಕೆ ಸಿದ್ಧತೆ ನಡೆದಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್​ಎಂಇ ಖಾತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಗುರುವಾರ ಹೇಳಿದರು. ಶೇ 93ರಷ್ಟು ವಾಹನಗಳು ಫಾಸ್​ಟ್ಯಾಗ್ ಬಳಸಿ ಟೋಲ್ ಪಾವತಿ ಮಾಡುತ್ತಿವೆ. ಆದರೆ ಬಾಕಿ ಶೇಕಡಾ 7ರಷ್ಟು ಮಂದಿ ಟೋಲ್​​ನ ಎರಡರಷ್ಟು ಪಾವತಿ ಮಾಡುತ್ತಿದ್ದರೂ ಫಾಸ್​ಟ್ಯಾಗ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದರು.

‘ಇನ್ನು ಒಂದು ವರ್ಷದೊಳಗೆ ದೇಶದಲ್ಲಿ ಇರುವ ಎಲ್ಲ ಭೌತಿಕ ಟೋಲ್ ಬೂತ್​ಗಳನ್ನು ತೆಗೆಯಲಾಗುವುದು ಎಂದು ನಾನು ಖಾತ್ರಿ ನೀಡುತ್ತೇನೆ. ಇದರರ್ಥ ಏನೆಂದರೆ, ಟೋಲ್ ಸಂಗ್ರಹವು ಜಿಪಿಎಸ್ ಮೂಲಕವಾಗಿ ಆಗುತ್ತದೆ. ಜಿಪಿಎಸ್ ಇಮೇಜಿಂಗ್ (ವಾಹನದಲ್ಲಿರುತ್ತದೆ) ಆಧಾರದಲ್ಲಿ ಹಣ ಸಂಗ್ರಹ ಆಗುತ್ತದೆ’ ಎಂದು ಲೋಕಸಭೆಯಲ್ಲಿ ಪ್ರಶ್ನಾವಳಿ ಕಲಾಪದ ವೇಳೆ ಗಡ್ಕರಿ ಉತ್ತರ ನೀಡಿದರು.

ಗಡ್ಕರಿ ಮಾತನಾಡಿ, ಫಾಸ್​ಟ್ಯಾಗ್ ಬಳಸಿ ಟೋಲ್ ಪಾವತಿಸದಿರುವ ವಾಹನಗಳ ಬಗ್ಗೆ ವಿಚಾರಣೆ ನಡೆಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಒಂದು ವೇಳೆ ಫಾಸ್​ಟ್ಯಾಗ್ ಹಾಕಿಲ್ಲ ಎಂದಾದಲ್ಲಿ ಟೋಲ್ ಕಳುವು ಹಾಗೂ ಜಿಎಸ್​ಟಿ ತಪ್ಪಿಸುವಂಥ ಪ್ರಕರಣಗಳಿವೆ ಎಂದಿದ್ದಾರೆ. ಫಾಸ್​ಟ್ಯಾಗ್ಸ್ ಎಂಬುದು ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಪಾವತಿಗಳಿಗೆ ಅವಕಾಶ ನೀಡುತ್ತದೆ. ಇದನ್ನು 2016ರಲ್ಲಿ ಪರಿಚಯಿಸಲಾಗಿದೆ.

ಫೆಬ್ರವರಿ 16ರಿಂದ ಈಚೆಗೆ ಫಾಸ್​ಟ್ಯಾಗ್ ಇಲ್ಲದ ವಾಹನಗಳು ದೇಶದಾದ್ಯಂತ ಇರುವ ಎಲೆಕ್ಟ್ರಾನಿಕ್ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಟೋಲ್ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇನ್ನು ಲೋಕಸಭೆಯಲ್ಲಿ ಮಾತು ಮುಂದುವರಿಸಿದ ಗಡ್ಕರಿ, ಹೊಸ ವಾಹನಗಳಿಗೆ ಫಾಸ್​ಟ್ಯಾಗ್ ಜೋಡಣೆ ಮಾಡಲಾಗಿದೆ ಎಂದು ಹೇಳಿದ್ದು, ಸರ್ಕಾರವು ತಿಳಿಸಿರುವಂತೆ ಹಳೇ ವಾಹನಗಳಿಗೆ ಫಾಸ್​ಟ್ಯಾಗ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಕಳೆದ ವರ್ಷ ಅಸೋಚಾಂ (ASSOCHAM) ಸಂಸ್ಥಾಪನಾ ಸಪ್ತಾಹ ಕಾರ್ಯಕ್ರಮದಲ್ಲಿ, ‘ಎಲ್ಲ ವಲಯಗಳ ಆರ್ಥಿಕ ಪುನಶ್ಚೇತನಕ್ಕೆ ರಾಷ್ಟ್ರೀಯ ಮೂಲಸೌಕರ್ಯದ ಪ್ರಾಮುಖ್ಯತೆ’ ಎಂಬ ವಿಚಾರದ ಕುರಿತು ಮಾತನಾಡುವ ವೇಳೆ ನಿತಿನ್ ಗಡ್ಕರಿ, ವಾಹನಗಳ ಸಂಚಾರದ ವೇಳೆ ಬ್ಯಾಂಕ್ ಖಾತೆಯಿಂದಲೇ ನೇರವಾಗಿ ಟೋಲ್ ದರ ಕಡಿತ ಆಗುವುದರ ಬಗ್ಗೆ ತಿಳಿಸಿದ್ದರು. ಇನ್ನು ಈಗ ಎಲ್ಲ ವಾಣಿಜ್ಯ ವಾಹನಗಳು ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ ಅಡಿಯಲ್ಲಿ ಬರುತ್ತಿದೆ. ಹಳೇ ವಾಹನಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ಯೋಜನೆ ರೂಪಿಸಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ: ದೋಷಪೂರಿತ ವಾಹನ ತಯಾರಿಸಿದ ಕಂಪೆನಿಗಳಿಗೆ ಬೀಳಲಿದೆ ಭಾರೀ ಜುಲ್ಮಾನೆ