ಬೆಂಗಳೂರು, ದೆಹಲಿ, ಮುಂಬೈ ಮುಂತಾದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಜಿಪಿಎಸ್ ವಂಚನೆ; ತನಿಖೆಗೆ ಆದೇಶಿಸಿದ ಸರ್ಕಾರ

ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಇತರ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಜಿಪಿಎಸ್ ವಂಚನೆಯನ್ನು ಕೇಂದ್ರ ಸರ್ಕಾರ ಇಂದು ರಾಜ್ಯಸಭಾ ಅಧಿವೇಶನದಲ್ಲಿ ದೃಢಪಡಿಸಿದೆ. ಈ ಬಗ್ಗೆ ತನಿಖೆಗೆ ಆದೇಶಿಸಿದೆ. ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾದ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (IGIA) ಮತ್ತು ಸುತ್ತಮುತ್ತ GPS ವಂಚನೆ ನಡೆದಿದೆ. ಆದರೆ, ಇದು ಯಾವುದೇ ವಿಮಾನದ ಕಾರ್ಯಾಚರಣೆಗೆ ಅಡ್ಡಿಯಾಗಲಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಹೇಳಿದೆ.

ಬೆಂಗಳೂರು, ದೆಹಲಿ, ಮುಂಬೈ ಮುಂತಾದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಜಿಪಿಎಸ್ ವಂಚನೆ; ತನಿಖೆಗೆ ಆದೇಶಿಸಿದ ಸರ್ಕಾರ
Flight

Updated on: Dec 01, 2025 | 8:36 PM

ನವದೆಹಲಿ, ಡಿಸೆಂಬರ್ 1: ದೆಹಲಿ, ಮುಂಬೈ, ಕೋಲ್ಕತ್ತಾ, ಅಮೃತಸರ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ಸೇರಿದಂತೆ ಹಲವಾರು ಪ್ರಮುಖ ವಿಮಾನ ನಿಲ್ದಾಣಗಳು GPS ವಂಚನೆ ಮತ್ತು ಸಿಗ್ನಲ್ ಹಸ್ತಕ್ಷೇಪದ ಘಟನೆಗಳನ್ನು ವರದಿ ಮಾಡಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಇಂದು ರಾಜ್ಯಸಭೆಯಲ್ಲಿ (Rajya Sabha Session) ಬಹಿರಂಗಪಡಿಸಿದೆ.

ವೈಎಸ್‌ಆರ್‌ಸಿಪಿ ಸಂಸದ ಎಸ್. ನಿರಂಜನ್ ರೆಡ್ಡಿ ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐಎ) ಸುತ್ತಮುತ್ತಲ ಪ್ರದೇಶಗಳಲ್ಲಿ ಜಿಪಿಎಸ್ ವಂಚನೆ ವರದಿಯಾಗಿದೆ ಎಂದು ದೃಢಪಡಿಸಿದರು.

ಇದನ್ನೂ ಓದಿ: ಎಸ್​ಐಆರ್​ ಕುರಿತ ಗಲಾಟೆ ಬಳಿಕ ಸಂಸತ್ ಅಧಿವೇಶನ ಮುಂದೂಡಿಕೆ; ಇಂದಿನ ಕಲಾಪದ ಮುಖ್ಯಾಂಶಗಳು

“ಕೆಲವು ವಿಮಾನಗಳು ನವದೆಹಲಿಯ ಐಜಿಐಎ ಸುತ್ತಮುತ್ತಲ ಪ್ರದೇಶಗಳಲ್ಲಿ ಜಿಪಿಎಸ್ ಆಧಾರಿತ ಲ್ಯಾಂಡಿಂಗ್ ಕಾರ್ಯವಿಧಾನಗಳನ್ನು ಬಳಸುತ್ತಿರುವಾಗ ಮತ್ತು ಆರ್‌ಡಬ್ಲ್ಯುವೈ (ರನ್‌ವೇ) 10 ರಲ್ಲಿ ಸಮೀಪಿಸುತ್ತಿರುವಾಗ ಜಿಪಿಎಸ್ ವಂಚನೆ ನಡೆದಿರುವುದು ದೃಢಪಟ್ಟಿದೆ. ಆದರೆ, ಇದು ವಿಮಾನಗಳ ಚಲನೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ” ಎಂದು ಸಚಿವರು ದೃಢಪಡಿಸಿದ್ದಾರೆ. ಹಾಗೇ, ಈ ವಂಚನೆಯ ಮೂಲವನ್ನು ಪತ್ತೆಹಚ್ಚಲು ವೈರ್‌ಲೆಸ್ ಮಾನಿಟರಿಂಗ್ ಆರ್ಗನೈಸೇಶನ್ (ಡಬ್ಲ್ಯೂಎಂಒ)ಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಮಾಹಿತಿ ನೀಡಿದ್ದಾರೆ.

ವರದಿಗಳ ಪ್ರಕಾರ, ನವೆಂಬರ್ 6ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 800 ವಿಮಾನಗಳು ವಿಳಂಬವಾಗಿದ್ದವು. ಈ ಬಗ್ಗೆ ಸರ್ಕಾರ ರಾಜ್ಯಸಭೆಯಲ್ಲಿ ಇಂದು ಮಾಹಿತಿ ನೀಡಿದೆ.

ಇದನ್ನೂ ಓದಿ: Parliament Winter Session: ಚಳಿಗಾಲದ ಅಧಿವೇಶನದಲ್ಲಿ ಈ ಪ್ರಮುಖ ಮಸೂದೆಗಳ ಮಂಡಿಸಲಿದೆ ಮೋದಿ ಸರ್ಕಾರ, ಗದ್ದಲಕ್ಕೆ ವಿಪಕ್ಷಗಳು ಸಿದ್ಧ

ಜಿಪಿಎಸ್​ ವಂಚನೆ ಎಂದರೇನು?:

ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಅಥವಾ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ವಂಚನೆಯು ಸುಳ್ಳು ಸಂಕೇತಗಳನ್ನು ನೀಡುವ ಮೂಲಕ ಬಳಕೆದಾರರ ನ್ಯಾವಿಗೇಷನ್ ವ್ಯವಸ್ಥೆಯ ದಾರಿ ತಪ್ಪಿಸುತ್ತದೆ. ವಿಮಾನದ ಸಂಚಾರ ವ್ಯವಸ್ಥೆಗೆ ನಕಲಿ ಉಪಗ್ರಹ ಸಂಕೇತಗಳನ್ನು ರವಾನಿಸಿದಾಗ, ವಿಮಾನದ ನಿಜವಾದ ಸ್ಥಾನ ಅಥವಾ ಎತ್ತರದ ಬಗ್ಗೆ ಪೈಲಟ್‌ಗಳು ಅಥವಾ ಆನ್‌ಬೋರ್ಡ್ ವ್ಯವಸ್ಥೆಗಳನ್ನು ಗೊಂದಲಗೊಳಿಸಿದಾಗ ಜಿಪಿಎಸ್ ವಂಚನೆ ಸಂಭವಿಸುತ್ತದೆ. ಅಂತಹ ಸುಳ್ಳು ಸಂಕೇತಗಳು ವಿಶೇಷವಾಗಿ ಲ್ಯಾಂಡಿಂಗ್ ಸಮಯದಲ್ಲಿ ಗಂಭೀರ ಸುರಕ್ಷತಾ ಅಪಾಯವನ್ನುಂಟುಮಾಡುತ್ತವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ