ಗಾಂಧಿನಗರ: ಇಷ್ಟು ದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಗರಗಳ ಹೆಸರನ್ನು ಬದಲಿಸುವುದನ್ನು ಕೇಳಿದ್ದೀರಿ. ಆದರೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಣ್ಣೊಂದರ ಹೆಸರನ್ನು ಬದಲಿಸಿದ್ದಾರೆ.
ಗುಜರಾತ್ನ ಕಛ್, ನವ್ಸಾರಿ ಹಾಗೂ ಸೌರಾಷ್ಟ್ರದ ವಿವಿಧ ಭಾಗಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಡ್ರ್ಯಾಗನ್ ಫ್ರೂಟ್ಗೆ ‘ಕಮಲಂ’ ಮರುನಾಮಕರಣ ಮಾಡಿದ್ದಾರೆ. ಈ ಬಗ್ಗೆ ಮಂಗಳವಾರ ಮಾಧ್ಯಮಗಳಿಗೆ ರೂಪಾಣಿ ಮಾಹಿತಿ ನೀಡಿದ್ದಾರೆ. ಈ ಹಣ್ಣಿಗೆ ಡ್ರ್ಯಾಗನ್ ಎಂಬ ಹೆಸರು ಸೂಕ್ತವೆನಿಸುತ್ತಿಲ್ಲ. ಇದರ ಹೆಸರಿನ ಕಾರಣಕ್ಕೆ ಇದು ಚೀನಾದ್ದೇ ಇರಬಹುದಾ ಎನಿಸುತ್ತದೆ. ಹಾಗಾಗಿ ಕಮಲಂ ಎಂದು ಮರುನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ.
ಕಮಲಂ ಯಾಕೆ?
ಆದರೆ ಕಮಲಂ ಎಂಬ ಹೆಸರೇ ಯಾಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೂಪಾಣಿ, ಈ ಹಣ್ಣು ಕಮಲದ ಹೂವಿನಂತೆ ಇದೆ ಎಂದು ಇದನ್ನು ಬೆಳೆಯುವ ಅದೆಷ್ಟೋ ರೈತರು ಹೇಳಿದ್ದಾರೆ. ಹಾಗಾಗಿ ಕಮಲಂ ಎಂದೇ ಹೆಸರಿಟ್ಟಿದ್ದೇವೆಯೇ ಹೊರತು ಇದರಲ್ಲಿ ರಾಜಕೀಯ ಕಾರಣವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಜೆಪಿಯ ಸಿಂಬಲ್ ಕಮಲವಾಗಿದ್ದು, ಗುಜರಾತ್ನಲ್ಲಿ ಪಕ್ಷದ ಪ್ರಧಾನ ಕಚೇರಿಯ ಹೆಸರೂ ಶ್ರೀ ಕಮಲಂ ಎಂದೇ ಆಗಿದೆ.
ಡ್ರ್ಯಾಗನ್ ಫ್ರೂಟ್ ದುಬಾರಿಯಾದರೂ ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಉಪಯೋಗಗಳಿವೆ. ಈ ದಿನಗಳಲ್ಲಿ ಇದು ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಆದರೆ ಗುಜರಾತ್ನಲ್ಲಿ ಡ್ರ್ಯಾಗನ್ ಫ್ರೂಟ್ನ ಹೆಸರು ಬದಲಾವಣೆಯಾದ ಬಗ್ಗೆ ಇನ್ನೂ ಎಲ್ಲರಿಗೂ ಮಾಹಿತಿ ತಲುಪಿಲ್ಲ.
ಇದು ರೈತರ ಪ್ರತಿಭಟನೆಯಲ್ಲ, ಕಾಂಗ್ರೆಸ್ ಪ್ರತಿಭಟನೆ: ಸಿ.ಟಿ.ರವಿ ವಾಗ್ದಾಳಿ