ಅಹಮದಾಬಾದ್: ಗುಜರಾತ್ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು 236 ಸೀಟುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 49 ಸೀಟುಗಳಲ್ಲಿ ಹಾಗೂ ಇತರೆ ಪಕ್ಷಗಳು 17 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಅಹಮದಾಬಾದ್, ವಡೋದರಾ, ಸೂರತ್, ರಾಜ್ ಕೋಟ್ , ಜಾಮ್ ನಗರ್ , ಭಾವ್ ನಗರ್ ಈ ಆರು ಮಹಾನಗರ ಪಾಲಿಕೆಗಳಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್ ಜಿದ್ದಾಜಿದ್ದಿನ ಪೈಪೋಟಿಗೆ ಮುಂದಾಗಿದೆ. ಅದೇ ವೇಳೆ ಆಮ್ ಆದ್ಮಿ ಪಕ್ಷ (AAP) ಆಲ್ ಇಂಡಿಯಾ ಮಜ್ಲಿಸ್-ಇ- ಇತ್ತೇಹಾದುಲ್ ಮುಸ್ಲಿಮೀನ್ (AIMIM) ಮೊದಲ ಬಾರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಖಾತೆ ತೆರೆಯಲು ಹವಣಿಸುತ್ತಿದೆ.
6 ನಗರಗಳ 15 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದ್ದು ಇಲ್ಲಿ ಕೊವಿಡ್ -19 ಸುರಕ್ಷಾ ಕ್ರಮಗಳನ್ನು ಅನುಸರಿಸಲಾಗಿದೆ. ಅಹಮದಾಬಾದ್, ವಡೋದರಾ, ಸೂರತ್, ರಾಜ್ ಕೋಟ್ , ಜಾಮ್ ನಗರ್ , ಭಾವ್ ನಗರ್ ಈ ಆರು ಮಹಾನಗರ ಪಾಲಿಕೆಗಳಲ್ಲಿ ಭಾನುವಾರ ಮತದಾನ ನಡೆದಿದ್ದು ಶೇ. 46 ಮತದಾನವಾಗಿತ್ತು. ಜಾಮ್ನಗರ್ನಲ್ಲಿ ಗರಿಷ್ಠ ಶೇ. 53. 4 ಮತದಾನವಾಗಿದ್ದು, ಅಹಮಾದಾಬಾದ್ನಲ್ಲಿ ಕನಿಷ್ಠ ಶೇ. 42.5 ಮತದಾನವಾಗಿದೆ. ದಶಕಗಳಿಂದ ಈ ಆರು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ.
ಮಂಗಳವಾರ ಮತ ಎಣಿಕೆ ಬೇಡ ಎಂದು ಆನಂದ್ ಜಿಲ್ಲೆಯ ಇಬ್ಬರು ಕಾಂಗ್ರೆಸ್ ನಾಯಕರು ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅರ್ಜಿ ವಜಾ ಆಗಿದೆ.
Gujarat: Counting of votes for local body polls underway in Ahmedabad pic.twitter.com/K8Q4xxyrMp
— ANI (@ANI) February 23, 2021
15 ಮತ ಎಣಿಕೆ ಕೇಂದ್ರಗಳಲ್ಲಿ ಒಟ್ಟು 52 ಚುನಾವಣಾ ಅಧಿಕಾರಿಗಳು ಮತ್ತು 58 ಸಹಾಯಕ ಚುನಾವಣಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 60 ಹಾಲ್ಗಳಲ್ಲಿ 664 ಮೇಜುಗಳನ್ನಿರಿಸಿದ್ದು 3,500 ಸಿಬ್ಬಂದಿಗಳು ಮತ ಎಣಿಕೆ ಮಾಡಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ. ಮತಕೇಂದ್ರಗಳಲ್ಲಿ 4,800 ಭದ್ರತಾ ಸಿಬ್ಬಂದಿ ಮತ್ತು 227 ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ.
ಭಾನುವಾರ ಚಂದ್ ಖೇಡಾ ಮತಗಟ್ಟೆಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಕ್ಕಾಗಿ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಆರ್ ಸಿ ಟೆಕ್ನಿಕಲ್ ಕಾಲೇಜಿನಲ್ಲಿರುವ ಮತಗಟ್ಟೆಯಲ್ಲಿ ವಿಠಲ್ ಮಕ್ವಾನಾ, ಸುರೇಶ್ ಕಕ್ರೇಚಾ, ವಿಪುಲ್ ವಾಲ್ಮೀಕಿ ಮತ್ತು ಸಂಜಯ್ ವಾಲ್ಮೀಕಿ ಎಂಬವರು ಚುನಾವಣಾ ಪ್ರಚಾರ ನಡೆಸಿದ್ದರು ಎಂದು ಚುನಾವಣಾ ಅಧಿಕಾರಿ ಬಿಪಿಲ್ ಪಟೇಲ್ ದೂರಿದ್ದರು.
ವಾರ್ಡ್ – ಸೀಟು ಲೆಕ್ಕಾಚಾರ
ಮಹಾನಗರ ಪಾಲಿಕೆ- 6
ಸೀಟುಗಳು- 576
ವಾರ್ಡ್ ಗಳು – 144
ಅಹಮದಾಬಾದ್ ಮಹಾನಗರ ಪಾಲಿಕೆ
ವಾರ್ಡ್ – 48
ಸೀಟು – 192
ಸೂರತ್ ಮಹಾನಗರ ಪಾಲಿಕೆ
ವಾರ್ಡ್ – 30
ಸೀಟು – 120
ವಡೋದರಾ ಮಹಾನಗರ ಪಾಲಿಕೆ
ವಾರ್ಡ್ – 19
ಸೀಟು – 76
ರಾಜ್ಕೋಟ್ ಮಹಾನಗರ ಪಾಲಿಕೆ
ವಾರ್ಡ್ – 18
ಸೀಟು – 72
ಭಾವ್ ನಗರ್ ಮಹಾನಗರ ಪಾಲಿಕೆ
ವಾರ್ಡ್ -13
ಸೀಟು – 52
ಜಾಮ್ನಗರ ಮಹಾನಗರ ಪಾಲಿಕೆ
ವಾರ್ಡ್ – 16
ಸೀಟು – 64
ಇದನ್ನೂ ಓದಿ: Rakesh Tikait: ಗುಜರಾತ್ ಜನರ ಸ್ವಾತಂತ್ರ್ಯವನ್ನು ಬಿಜೆಪಿ ಸರ್ಕಾರಗಳು ಕಸಿದುಕೊಂಡಿವೆ; ರಾಕೇಶ್ ಟಿಕಾಯತ್
Published On - 12:16 pm, Tue, 23 February 21