Rakesh Tikait: ಗುಜರಾತ್ ಜನರ ಸ್ವಾತಂತ್ರ್ಯವನ್ನು ಬಿಜೆಪಿ ಸರ್ಕಾರಗಳು ಕಸಿದುಕೊಂಡಿವೆ; ರಾಕೇಶ್ ಟಿಕಾಯತ್
ದೇಶದ ಜನರು ಸ್ವತಂತ್ರವಾಗಿ ತಮಗೆ ಅನಿಸಿದ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯ ಪಡೆದರೂ ಗುಜರಾತ್ನ ಜನತೆ ಮಾತ್ರ ಈ ಅವಕಾಶದಿಂದ ವಂಚಿತವಾಗಿದೆ.
ದೆಹಲಿ: ಗುಜರಾತ್ನ ಜನತೆ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳದಂತೆ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಡೆದಿವೆ ಎಂದು ರೈತ ನಾಯಕ ರಾಕೇಶ್ ಟಿಕಾಯತ್ (Rakesh Tikait) ಕಿಸಾನ್ ಮಹಾಪಂಚಾಯತ್ನಲ್ಲಿ ಹೇಳಿದ್ದಾರೆ. ದೇಶದ ಜನರು ಸ್ವತಂತ್ರವಾಗಿ ತಮಗೆ ಅನಿಸಿದ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯ ಪಡೆದರೂ ಗುಜರಾತ್ನ ಜನತೆ ಮಾತ್ರ ಈ ಅವಕಾಶದಿಂದ ವಂಚಿತವಾಗಿದೆ. ಹೀಗಾಗಿ ಗುಜರಾತ್ಗೆ ತೆರಳಿ ಚಳುವಳಿ ಆರಂಭಿಸುವುದಾಗಿ ಅವರು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಪ್ರತಿಭಟನೆ ನಿಲ್ಲಿಸಿ ಮನೆಗೆ ಮರಳುವುದಿಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಮತ್ತೊಮ್ಮೆ ಘರ್ಜಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ಸಿಂಗು ಗಡಿಯೇ ನನ್ನ ಕಚೇರಿಯಾಗಲಿದೆ. ಸರ್ಕಾರ ಹೇಳಿದ ದಿನವೇ ಮಾತುಕತೆ ನಡೆಸಲು ಸಿದ್ಧವಿರುವುದಾಗಿಯೂ ಅವರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಗಳನ್ನು ಹಿಂಪಡೆಯದೇ ದೆಹಲಿಯ ಗಡಿಗಳಿಂದ ಮರಳುವುದಿಲ್ಲ. ಸರ್ಕಾರ ತನ್ನ ಪಟ್ಟು ಸಡಿಲಿಸಲು ಒಂದು ವರ್ಷವನ್ನೇ ತೆಗೆದುಕೊಂಡರೂ ಸರಿ, ತಮ್ಮ ಬೇಡಿಕೆಗಳು ಈಡೇರದೇ ಕುಳಿತ ಜಾಗದಿಂದ ಕದಲುವುದಿಲ್ಲ ಎಂದು ಅವರು ಪುನರುಚ್ಛಿಸಿದ್ದಾರೆ.
ರೈತರಿಗೆ ರಾಹುಲ್ ಗಾಂಧಿ ಬೆಂಬಲ ದೇಶದಲ್ಲಿ ಕೃಷಿ ಕಾಯ್ದೆಗಳು ಜಾರಿಯಾದರೆ ಇಡೀ ದೇಶ ಕೇವಲ ಇಬ್ಬರ ನಿಯಂತ್ರಣಕ್ಕೆ ಬರುವ ಅಪಾಯ ಎದುರಾಗಲಿದೆ. ದೇಶವನ್ನು ಉಳಿಸುವ ಪ್ರಯತ್ನದಲ್ಲಿ ತೊಡಗಿರುವ ರೈತರಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರೈತ ಹೋರಾಟವನ್ನು ಅಂಧಕಾರದಲ್ಲಿ ಕಾಣಿಸಿದ ಬೆಳಕಿನ ದೊಂದಿಗೆ ಹೋಲಿಸಿರುವ ರಾಹುಲ್, ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲುವಂತೆ ದೇಶದ ಜನರಿಗೆ ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ವ್ಯಕ್ತಿ-ವ್ಯಕ್ತಿತ್ವ | ರೈತ ಹೋರಾಟದ ಹಿಂದಿನ ಶಕ್ತಿ ರಾಕೇಶ್ ಟಿಕಾಯತ್
Published On - 8:13 pm, Fri, 12 February 21