India China Border: ಚೀನಾಕ್ಕೆ ಭೂಭಾಗ ಬಿಟ್ಟುಕೊಟ್ಟಿಲ್ಲ; ರಾಹುಲ್ ಗಾಂಧಿ ಆರೋಪಕ್ಕೆ ಸ್ಪಷ್ಟನೆ ನೀಡಿದ ರಕ್ಷಣಾ ಇಲಾಖೆ

1962ರಿಂದಲೇ ಚೀನಾ ಭಾರತದ 43 ಸಾವಿರ ಚದರ ಕಿ.ಮೀ. ಭೂಭಾಗವನ್ನು ಅತಿಕ್ರಮಿಸಿದೆ. ಆದರೆ, ಈಗಿನ ಒಪ್ಪಂದದ ಪ್ರಕಾರ ಯಾವುದೇ ಭೂಭಾಗ ಚೀನಾಕ್ಕೆ ಸೇರಿಲ್ಲ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

India China Border: ಚೀನಾಕ್ಕೆ ಭೂಭಾಗ ಬಿಟ್ಟುಕೊಟ್ಟಿಲ್ಲ; ರಾಹುಲ್ ಗಾಂಧಿ ಆರೋಪಕ್ಕೆ ಸ್ಪಷ್ಟನೆ ನೀಡಿದ ರಕ್ಷಣಾ ಇಲಾಖೆ
ಪಾಂಗಾಂಗ್ ಸರೋವರದಿಂದ ಯುದ್ಧಟ್ಯಾಂಕ್​ಗಳನ್ನು ಹಿಂಪಡೆಯುವ ಒಪ್ಪಂದದ ನಂತರ ಕೈಕುಲುಕುತ್ತಿರುವ ಭಾರತ-ಚೀನಾ ಸೈನಿಕರು
Follow us
guruganesh bhat
| Updated By: ಸಾಧು ಶ್ರೀನಾಥ್​

Updated on: Feb 12, 2021 | 6:05 PM

ದೆಹಲಿ: ಚೀನಾದ ಜತೆಗಿನ ಸಂಘರ್ಷ ನಿಲ್ಲಿಸಲು ಮಾಡಿಕೊಂಡ ಒಪ್ಪಂದದಲ್ಲಿ ಭಾರತ ಯಾವುದೇ ಭೂ ಭಾಗವನ್ನು ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಬೆಳಗ್ಗೆಯಷ್ಟೇ ಪಾಂಗಾಂಗ್ ತ್ಸೋ ಸರೋವರದ ಬಳಿಯ ಒಪ್ಪಂದದ ಮೂಲಕ ದೇಶದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾಗಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪಕ್ಕೆ ಸ್ವತಃ ರಕ್ಷಣಾ ಇಲಾಖೆಯೇ ಸ್ಪಷ್ಟನೆ ನೀಡಿದೆ.(India China border)

1962ರಲ್ಲೇ ಚೀನಾ ಭಾರತದ 43 ಸಾವಿರ ಚದರ ಕಿ.ಮೀ. ಭೂಭಾಗವನ್ನು ಅತಿಕ್ರಮಿಸಿದೆ. ಈಗಿನ ಒಪ್ಪಂದದ ಪ್ರಕಾರ ಯಾವುದೇ ಭೂಭಾಗ ಚೀನಾಕ್ಕೆ ಸೇರಿಲ್ಲ ಎಂದು ಹೇಳಿರುವ ರಕ್ಷಣಾ ಇಲಾಖೆ ಭಾರತದ ಪ್ರಕಾರ ಫಿಂಗರ್ 8ರಲ್ಲಿ ಗಡಿರೇಖೆ ಇರಬೇಕು. ಹೀಗಾಗಿ ಫಿಂಗರ್ 8ರವರೆಗೆ ಗಡಿ ಪಹರೆ ಕಾಯುವ ಹಕ್ಕನ್ನು ಭಾರತ ಹೊಂದಿದ್ದು, ಈಗಿನ ಒಪ್ಪಂದದಲ್ಲಿಯೂ ಇದನ್ನು ಪ್ರತಿಪಾದಿಸಿದ್ದೇವೆ ಎಂದು ರಕ್ಷಣಾ ಇಲಾಖೆ ಬಿಡುಗಡೆಗೊಳಿಸಿದ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಫಿಂಗರ್ 3 ಬಳಿ ಭಾರತದ ಶಾಶ್ವತ ಪೋಸ್ಟ್ ಇದ್ದು, ಧನ್​​ಸಿಂಗ್ ಥಾಪ ಭಾರತದ ಶಾಶ್ವತ ಪೋಸ್ಟ್ ಆಗಿದೆ. ಈ ಶಾಶ್ವತ ಪೋಸ್ಟ್‌ನಲ್ಲಿ ಭಾರತದ ಸೇನೆ ನಿಯೋಜನೆ ಮಾಡಲಾಗಿದ್ದು ಗಡಿಯ ಯಥಾಸ್ಥಿತಿ ಏಕಪಕ್ಷೀಯ ಬದಲಾವಣೆ ತಡೆದಿದ್ದೇವೆಯೇ ಹೊರತು, ಭೂಭಾಗವನ್ನು ಬಿಟ್ಟುಕೊಟ್ಟಿಲ್ಲ ಎಂದ ರಕ್ಷಣಾ ಇಲಾಖೆ ಹೇಳಿದೆ.

ರಾಹುಲ್ ಗಾಂಧಿ ಆರೋಪವೇನು? ಭಾರತೀಯ ಸೇನೆ ಲಡಾಕ್​ನ ಫಿಂಗರ್​ 4 ಬಳಿ ಬೀಡುಬಿಡಬೇಕಿತ್ತು. ಆದರೆ, ನಿನ್ನೆ ಕೇಂದ್ರ ರಕ್ಷಣಾ ಸಚಿವರ ಹೇಳಿಕೆಯ ಪ್ರಕಾರ ಫಿಂಗರ್ 4ರಿಂದ ಫಿಂಗರ್ 3 ಗೆ ಭಾರತೀಯ ಸೇನೆ ಮರಳಿದೆ. ಫಿಂಗರ್ 4ರ ಪ್ರದೇಶದಿಂದ ಸೇನೆಯನ್ನು ಹಿಂಪಡೆದದ್ದು ಚೀನಾಕ್ಕೆ ಆ ಪ್ರದೇಶವನ್ನು ಬಿಟ್ಟುಕೊಟ್ಟಂತಾಗಿದೆ. ಇದು ಹುತಾತ್ಮ ಸೈನಿಕರಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅಪಚಾರ ಎಸಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಚೀನಾಗೆ ತಿರುಗೇಟು ನೀಡಲು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಆಗುತ್ತಿಲ್ಲ. ಫಿಂಗರ್ 4 ಪ್ರದೇಶವನ್ನು ಚೀನಾ ಆಕ್ರಮಿಸಲು ಚೀನಾಕ್ಕೆ ಅವಕಾಶ ಮಾಡಿಕೊಟ್ಟಂತಾಗಿದ್ದು, ಈ ಬಗ್ಗೆ ಕೇಂದ್ರ ಉತ್ತರ ನೀಡಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು.

ಇದನ್ನೂ ಓದಿ: India China Border Conflict | ಗಡಿ ಸಂಘರ್ಷ ಕೊನೆ, 9 ಹಂತದ ಮಾತುಕತೆ ಬಳಿಕ ಗಡಿಯಿಂದ ಕಾಲ್ತೆಗೆಯಲು ನಿರ್ಧರಿಸಿದ ಚೀನಾ: ರಕ್ಷಣಾ ಸಚಿವ ರಾಜನಾಥ್ ಸಿಂಗ್