Mallikarjun Kharge ವ್ಯಕ್ತಿ-ವ್ಯಕ್ತಿತ್ವ | ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆದು ಬಂದ ಹಾದಿ

Mallikarjun Kharge ವ್ಯಕ್ತಿ-ವ್ಯಕ್ತಿತ್ವ | ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆದು ಬಂದ ಹಾದಿ
ಮಲ್ಲಿಕಾರ್ಜುನ ಖರ್ಗೆ

Mallikarjun Kharge: ಗಾಂಧಿ ಕುಟುಂಬಕ್ಕೆ ಸದಾ ನಿಷ್ಠರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರ ನಿಷ್ಠೆ, ತಾಳ್ಮೆ ಮತ್ತು ಆಡಳಿತ ನಿರ್ವಹಿಸುವ ಜಾಣತನ ಮತ್ತು ಯಾವುದೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸಂಯಮವೇ ಅವರನ್ನು ಇತರ ನಾಯಕರಿಗಿಂತ ವಿಭಿನ್ನ ಎಂಬಂತೆ ಮಾಡಿದೆ.

Rashmi Kallakatta

|

Feb 12, 2021 | 7:14 PM

ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ ಹುದ್ದೆ ಒಲಿದಿದೆ. ಗುಲಾಂ ನಬಿ ಆಜಾದ್​ ಸದಸ್ಯ ಅವಧಿ ಮುಕ್ತಾಯಗೊಂಡ ಬಳಿಕ ಕಾಂಗ್ರೆಸ್ ಪಕ್ಷವು ಈ ಮಹತ್ವದ ಜವಾಬ್ದಾರಿಯನ್ನು ಖರ್ಗೆ ಅವರ ಹೆಗಲಿಗೆ ಹೊರೆಸಿದೆ. ಲೋಕಸಭೆಯಲ್ಲಿ ನಿಚ್ಚಳ ಬಹುಮತ ಪಡೆದಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಸ್ವಲ್ಪವಾದರೂ ಕಡಿವಾಣ ಹಾಕುವ ಸಾಧ್ಯತೆಯಿದ್ದರೆ ಅದು ರಾಜ್ಯಸಭೆಯಲ್ಲಿ ಮಾತ್ರ. ಸರ್ಕಾರದ ಲೋಪಗಳನ್ನು ಎತ್ತಿತೋರಿಸಿ, ಕಿವಿಹಿಂಡಿ ಬುದ್ಧಿಹೇಳುವ ರಾಜ್ಯಸಭೆಗೆ ‘ಚಿಂತಕರ ಚಾವಡಿ’ ಎಂಬ ಶ್ರೇಯವೂ ಇದೆ. ಈ ಬುದ್ಧಿವಂತರ ಸದನದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡುವ ಸೋನಿಯಾ ಗಾಂಧಿ ನಿರ್ಧಾರವು ಇದೇ ಕಾರಣಕ್ಕಾಗಿ ದೇಶದ ಗಮನ ಸೆಳೆದಿದೆ.

ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ 2004ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡಿತ್ತು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್​ಗೆ ಜೆಡಿಎಸ್​ ನಾಯಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹಾಯ ಬೇಕಿತ್ತು. ಕೃಷ್ಣ ಸಂಪುಟದ ಪ್ರಭಾವಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಖ್ಯಮಂತ್ರಿ ಗಾದಿಗೆ ಪ್ರಮುಖವಾಗಿ ಕೇಳಿ ಬಂದಿದ್ದು ನಿಜವಾದರೂ, ಮುಖ್ಯಮಂತ್ರಿ ಆದವರು ಮಾತ್ರ  ಧರಂ ಸಿಂಗ್. ಜೆಡಿಎಸ್​ಗೆ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗುವುದು ಬೇಕಿರಲಿಲ್ಲ.

ಎಸ್.ಎಂ. ಕೃಷ್ಣ  ಸರ್ಕಾರದಲ್ಲಿ ಅನುಭವಿ, ಹಿರಿಯ ನಾಯಕರಾಗಿದ್ದ ಖರ್ಗೆ ಅವರಿಗೆ ಈ ನಿರ್ಧಾರದಿಂದ ಸಹಜವಾಗಿಯೇ ನಿರಾಶೆಯಾಗಿತ್ತು. ಈ ಅಸಮಾಧಾನದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ತಿಳಿಸಿ, ಸಚಿವ ಸ್ಥಾನ ಸ್ವೀಕರಿಸಬೇಡಿ ಎಂದು ಖರ್ಗೆ ಬೆಂಬಲಿಗರು ಸಲಹೆ ನೀಡಿದ್ದರು.

ಆದರೆ ಖರ್ಗೆ ತನ್ನ ಬೆಂಬಲಿಗರ ಸಲಹೆ ಸ್ವೀಕರಿಸಲಿಲ್ಲ, ನಾನು ಪಕ್ಷದ ನಿರ್ಧಾರಕ್ಕೆ ಬದ್ಧ, ಗಾಂಧಿ ಕುಟುಂಬಕ್ಕೆ ಮುಜುಗರವುಂಟು ಮಾಡಲಾರೆ ಎಂದು ಖರ್ಗೆ ಸ್ಪಷ್ಟವಾಗಿ ನುಡಿದರು. ಧರಂ ಸಿಂಗ್ ಸಚಿವ ಸಂಪುಟದಲ್ಲಿ ಸಾರಿಗೆ ಮತ್ತು ಜಲಸಂಪನ್ಮೂಲ ಇಲಾಖೆಯ ಸಚಿವರಾದ ಖರ್ಗೆ, ‘ನನಗೂ ಒಂದು ದಿನ ಬಂದೇ ಬರುತ್ತದೆ’ ಎಂದು ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದರು.

ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಖರ್ಗೆ, ವೀರಪ್ಪನ್ ಹಿಡಿತದಿಂದ ಡಾ. ರಾಜ್ ಕುಮಾರ್ ಅವರನ್ನು ಬಿಡಿಸಿಕೊಂಡು ಬರುವ  ವಿಚಾರದಲ್ಲಿ ಅವರು ತೋರಿದ ಬದ್ಧತೆ, ಪೊಲೀಸ್ ಇಲಾಖೆಯ ಮೇಲೆ ಸಾಧಿಸಿದ್ದ ಹಿಡಿತ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು. ಕರ್ತವ್ಯನಿಷ್ಠ ಅಧಿಕಾರಿಗಳನ್ನು ಗುರುತಿಸಿ, ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಈ ಯಾವ ಅಂಶಗಳೂ ಅವರನ್ನು ಮುಖ್ಯಮಂತ್ರಿ ಗಾದಿಯ ಬಳಿಗೆ ಒಯ್ಯಲು ನೆರವಿಗೆ ಬರಲಿಲ್ಲ.

ಸಿದ್ದರಾಮಯ್ಯ  ಮುಖ್ಯಮಂತ್ರಿಯಾಗುವ ಮೊದಲು ಮತ್ತು ಕಳೆದ ಬಾರಿ ಮೈತ್ರಿ ಸರ್ಕಾರದಲ್ಲಿ  ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಮೊದಲು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು  ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬಂದಿತ್ತು. ಈವರೆಗೆ ಒಟ್ಟು ಮೂರು ಬಾರಿ ಮುಖ್ಯಮಂತ್ರಿ ಗಾದಿಗೆ ಖರ್ಗೆ ಹೆಸರು ಪ್ರಸ್ತಾಪವಾಗಿ ಹಿಂದೆ ಸರಿದಿತ್ತು.

ಕಾಂಗ್ರೆಸ್ 2008ರಲ್ಲಿ ಖರ್ಗೆ ಅವರ ನೇತೃತ್ವದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಿಸಿತು. ಒಂದು ವೇಳೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದರೆ ಖರ್ಗೆ ಮುಖ್ಯಮಂತ್ರಿಯಾಗುವುದು ಸಾಧ್ಯವಿತ್ತು. ಆದರೆ ಆದದ್ದೇ ಬೇರೆ. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಮುಂದೆ ಕಾಂಗ್ರೆಸ್ ಪರಾಭವಗೊಂಡಿತು. ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಅವರ ಸಹೋದ್ಯೋಗಿಗಳೇ ಟೀಕಿಸಿದರೂ ಖರ್ಗೆ ಮೌನವಾಗಿದ್ದರು.

ಇದನ್ನೂ  ಓದಿ:  ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಒಲಿದ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಮಾನ

Mallikarjun kharge

ಮಲ್ಲಿಕಾರ್ಜುನ ಖರ್ಗೆ

ಸ್ವಂತ ಸಾಮರ್ಥ್ಯದಿಂದ ರಾಜಕಾರಣಿಯಾಗಿ ಬೆಳೆದರು ಗುಲ್ಬರ್ಗಾದಲ್ಲಿ ಗಿರಣಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ತಂದೆಯ ಮಗನಾಗಿ 21ನೇ ಜುಲೈ 1942ರಂದು ದಲಿತ ಕುಟುಂಬವೊಂದರಲ್ಲಿ ಖರ್ಗೆ ಜನಿಸಿದರು. 1972ರಲ್ಲಿ ಮೊದಲ ಬಾರಿ ವಿಧಾನಸಭಾ ಚುನಾವಣೆ ಗೆದ್ದರು. ಗಾಂಧಿ ಕುಟುಂಬಕ್ಕೆ ಸದಾ ನಿಷ್ಠರಾಗಿದ್ದರು. ನಿಷ್ಠೆ, ತಾಳ್ಮೆ, ಆಡಳಿತಾತ್ಮಕ ಅನುಭವ ಮತ್ತು ಯಾವುದೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಜಾಣ್ಮೆಯೇ ಅವರನ್ನು ಇತರ ನಾಯಕರಿಗಿಂತಲೂ ವಿಭಿನ್ನ ಎಂಬಂತೆ ಮಾಡಿವೆ.

ಸಂಯಮಿ ರಾಜಕಾರಿಣಿ ಎಂದು ಖರ್ಗೆ ಅವರನ್ನು ಅವರ ವಿರೋಧಿಗಳೂ ಶ್ಲಾಘಿಸುತ್ತಾರೆ. ಹೊಂದಿರುವ ಖರ್ಗೆ ಅವರು ತಮ್ಮನ್ನು ತಾವು ದಲಿತ ನಾಯಕ ಎಂದು ಕರೆದುಕೊಳ್ಳಲು ಇಷ್ಟಪಡುವುದಿಲ್ಲ. ಬೇರೆಯವರು ಹಾಗೆಂದು ಕರೆದರೂ ಅವರಿಗೆ ಸಿಟ್ಟು ಬರುತ್ತದೆ.

‘ನಾನು ದಲಿತ ಎನ್ನುವುದು ನಿಜ. ನಾನು ನನ್ನ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಬೆಳೆದಿದ್ದೇನೆ. ಎಲ್ಲ ಜಾತಿ ಮತ್ತು ಧರ್ಮಗಳೂ ನನಗೆ ಬೆಂಬಲ ನೀಡಿವೆ. ನನ್ನನ್ನು ಕಾಂಗ್ರೆಸ್ ನಾಯಕ ಎಂದು ಹೇಳಿ, ಜನನಾಯಕ ಎಂದು ಹೇಳಿ ಒಪ್ಪಿಕೊಳ್ಳುತ್ತೇನೆ, ನಾನು ದಲಿತರಿಗೆ ಮಾತ್ರವೇ ನಾಯಕ ಅಲ್ಲ. ಇದೊಂದು ಅವಮಾನ ಎಂದು ನಾನು ಭಾವಿಸುತ್ತೇನೆ. ನಾನು ಸಮರ್ಥನಾಗಿರುವುದರಿಂದ ನನಗೆ ಮಹತ್ತರವಾದುದು ಸಿಗಬೇಕು.  ನಾನು ದಲಿತನಾದ ಕಾರಣಕ್ಕೆ ಅಲ್ಲ’ ಎಂದು ಖರ್ಗೆ ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ಹೇಳಿದ್ದರು.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನಾಗಿ ಖರ್ಗೆಯವರನ್ನು ಆಯ್ಕೆ ಮಾಡಿತ್ತು. ಆಗ ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳು ಖರ್ಗೆಯವರ ಜಾತಿಯನ್ನೇ ಪ್ರಮುಖ ವಿಷಯವಾಗಿಸಿಕೊಂಡಿದ್ದವು. ಕೆಲವರು ಖರ್ಗೆಯವರನ್ನು ಲೇವಡಿ ಮಾಡಿದ್ದರು. ಆದರೆ ತಾಳ್ಮೆಯಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದ ಖರ್ಗೆ, ಲೋಕಸಭೆಯಲ್ಲಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಸದನದಲ್ಲಿ ಖರ್ಗೆ ನಡವಳಿಕೆ ಬಗ್ಗೆ ಪ್ರಧಾನಿಯವರೇ ಶ್ಲಾಘಿಸಿದ್ದರು.

ಇದನ್ನೂ ಓದಿ: ಕೃಷಿಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಪ್ರಧಾನಿ ಮಾತಾಡಲೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ ಅಸಮಧಾನ

Mallikarjun Kharge

ಮಲ್ಲಿಕಾರ್ಜುನ ಖರ್ಗೆ ನಾಯಕರೊಂದಿಗೆ

1972ರಲ್ಲಿ ರಾಜಕೀಯ ಪ್ರವೇಶ ಕಾನೂನು ಪದವಿ ಪೂರೈಸಿದ್ದ ಖರ್ಗೆ 27ನೇ ಹರೆಯದಲ್ಲಿ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸಿದರು. 1972ರಲ್ಲಿ ಚುನಾವಣೆ ಗೆದ್ದು ಶಾಸಕರಾಗಿದ್ದ ಖರ್ಗೆ ಅವರ ಸಾಮರ್ಥ್ಯವನ್ನು ನೋಡಿ ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸು ಸಚಿವ ಸ್ಥಾನ ನೀಡಿದ್ದರು. ಕರ್ನಾಟಕದ ಪ್ರಮುಖ ರಾಜಕಾರಣಿಗಳಾದ ಎಸ್.ಎಂ, ಕೃಷ್ಣ, ಎಸ್.ಬಂಗಾರಪ್ಪ, ಎಂ.ವೀರಪ್ಪ ಮೊಯ್ಲಿ, ಕೆ.ಎಚ್.ರಂಗನಾಥ್, ಎಂ.ವೈ.ಘೋರ್ಪಡೆಯವರು ಆಗ ಸಚಿವ ಸಂಪುಟದಲ್ಲಿದ್ದರು. 1972ರಿಂದ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಪ್ರತೀ ಕಾಂಗ್ರೆಸ್ ಸರ್ಕಾರದಲ್ಲಿ ಖರ್ಗೆ ಸಚಿವರಾಗಿದ್ದರು.

ಇಂದಿರಾಗಾಂಧಿ ಅವರ ಕಾಲದಲ್ಲಿ ಕರ್ನಾಟಕ ಕಾಂಗ್ರೆಸ್​ನಲ್ಲಿ ಖರ್ಗೆ ಕಿರಿಯ ನೇತಾರರರಾಗಿದ್ದರು. ರಾಜೀವ್ ಗಾಂಧಿಯವರ ಕಾಲದಲ್ಲಿ ರಾಜಕಾರಣದಲ್ಲಿ ಮತ್ತಷ್ಟು ಪಳಗಿದ ಅವರು 1990ರ ನಂತರ ಪ್ರಮುಖ ರಾಜಕಾರಣಿಯಾಗಿ ಗುರುತಿಸಿಕೊಂಡರು. ಉತ್ತಮ ಆಡಳಿತ ನಿರ್ವಹಣೆ ಚಾತುರ್ಯವಿದ್ದ ಖರ್ಗೆ ಕೇಂದ್ರ ಮತ್ತು ರಾಜ್ಯದಲ್ಲಿ ಹಲವಾರು ಸ್ಥಾನಗಳನ್ನು ನಿಭಾಯಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ, ವಿಪಕ್ಷ ನೇತಾರ, ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಸಚಿವ, ಕೇಂದ್ರ ಸಚಿವ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ, ಪಕ್ಷದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.

2006ರಲ್ಲಿ ಜೆಡಿಎಸ್ ನಾಯಕ ಸಿದ್ದರಾಮಯ್ಯ ಅವರನ್ನು ಪಕ್ಷದ ಹೈಕಮಾಂಡ್ ಕಣಕ್ಕಿಳಿಸಿದಾಗ, ತಾನು ಮುಖ್ಯಮಂತ್ರಿಯಾಗುವ ಸಾಧ್ಯತೆ ಇಲ್ಲ ಎಂದು ಖರ್ಗೆ ಅವರಿಗೆ ತಿಳಿದಿತ್ತು. 2009ರಲ್ಲಿ ಖರ್ಗೆ ದೆಹಲಿಗೆ ಹೋಗಿ ನೆಲೆಸಿದರು. ಅಲ್ಲಿಗೆ ಹೋಗಲು ಮನಸ್ಸು ಇಲ್ಲದೇ ಇದ್ದರೂ ಪಕ್ಷದ ನಿರ್ಧಾರವನ್ನು ಗೌರರಿಸಿ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡರು. ಯುಪಿಎ-2 ಸರ್ಕಾರದಲ್ಲಿ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2019ರ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್  ಜಾಧವ್ ಎದುರು ಕಲಬುರ್ಗಿ ಕ್ಷೇತ್ರದಿಂದ ಖರ್ಗೆ ಪರಾಭವಗೊಂಡಿದ್ದರು. ನಂತರ  ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.

1972ರಿಂದ 2008ರವರೆಗೆ ಸತತವಾಗಿ 9 ವಿಧಾನಸಭಾ ಚುನಾವಣೆಗಳನ್ನು ಗೆದ್ದ ಖರ್ಗೆ ಸತತವಾಗಿ ಎರಡು ಲೋಕಸಭಾ ಚುನಾವಣೆಗಳನ್ನು ಗೆದ್ದಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್  ಜಾಧವ್ ಎದುರು ಕಲಬುರ್ಗಿ ಕ್ಷೇತ್ರದಿಂದ ಖರ್ಗೆ ಪರಾಭವಗೊಂಡಿದ್ದರು. ನಂತರ ಇವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು.

ಕಾಂಗ್ರೆಸ್​ನ ಉನ್ನತ ವಲಯದಲ್ಲಿ ಸೋನಿಯಾ ನಿಷ್ಠರು ಎಂದೇ ಖರ್ಗೆ ಅವರನ್ನು ಗುರುತಿಸಲಾಗುತ್ತದೆ. 2014ರ ಲೋಕಸಭೆಗೆ ಸೋನಿಯಾ ಗಾಂಧಿ ಖರ್ಗೆ ಅವರನ್ನು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ  ಘೋಷಿಸಿದ್ದರು. ಈ ನಿರ್ಧಾರವನ್ನು ರಾಹುಲ್ ಗಾಂಧಿ ಪೂರ್ಣ ಮನಸ್ಸಿನಿಂದ ಒಪ್ಪಿರಲಿಲ್ಲ ಎಂದು ಆಗ ಹೇಳಲಾಗಿತ್ತು.

ಬಹುಶಃ, ಇದೊಂದು ಪ್ರಸಂಗ ಸಾಕು. ಕಾಂಗ್ರೆಸ್ ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾತ್ರ ಏನು ಎಂದು ಸೂಚಿಸಲು. ಅಂದಿಗೂ, ಇಂದಿಗೂ ಖರ್ಗೆ ಕಾಂಗ್ರೆಸ್ ಪಕ್ಷದ ಕಟ್ಟಾಳು. ಇದೇ ಕಾರಣಕ್ಕೆ ಇದೀಗ ಅವರಿಗೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಒಲಿದು ಬಂದಿದೆ.

Follow us on

Related Stories

Most Read Stories

Click on your DTH Provider to Add TV9 Kannada