ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ: ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ TMC ಸಂಸದ ದಿನೇಶ್ ತ್ರಿವೇದಿ
ಈ ಬೆಳವಣಿಗೆಯಿಂದ ಬಿಜೆಪಿ ಲಾಭ ಪಡೆಯಲು ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗೀಯ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದಾದರೆ ಸ್ವಾಗತ ಎಂದಿದ್ದಾರೆ.
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ (West Bengal Assembly Election 2021) ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಪಕ್ಷದ ಪ್ರಮುಖರು ಎನಿಸಿಕೊಂಡಿರುವವರು ಒಬ್ಬರಾದ ಮೇಲೆ ಒಬ್ಬರಂತೆ ರಾಜೀನಾಮೆ ಪತ್ರ ಹಾಕಿ ಬಿಜೆಪಿ ಸೇರುತ್ತಿದ್ದಾರೆ. ಇಂದು ಕೂಡ ಇದೇ ಮಾದರಿಯ ಬೆಳವಣಿಗೆ ನಡೆದಿದ್ದು, ರಾಜ್ಯಸಭಾ ಸದಸ್ಯತ್ವಕ್ಕೆ ದಿನೇಶ್ ತ್ರಿವೇದಿ ರಾಜೀನಾಮೆ ನೀಡಿದ್ದಾರೆ. ಅವರ ಮುಂದಿನ ನಡೆ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ.
ಈ ಬಗ್ಗೆ ಮಾತನಾಡಿರುವ ದಿನೇಶ್ ತ್ರಿವೇದಿ, ನನ್ನನ್ನು ರಾಜ್ಯಸಭೆಗೆ ಕಳುಹಿಸಿದ್ದಕ್ಕಾಗಿ ನಾನು ಪಕ್ಷಕ್ಕೆ ಕೃತಜ್ಞನಾಗಿದ್ದೇನೆ. ಆದರೆ, ನಮ್ಮ ರಾಜ್ಯದಲ್ಲಿ ಮಿತಿಮೀರಿ ಹಿಂಸಾಚಾರ ನಡೆಯುತ್ತಿದೆ. ಆ ಬಗ್ಗೆ ಇಲ್ಲಿ ಮಾತನಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದು ನನಗೆ ಉಸಿರುಗಟ್ಟಿಸುವಂತಾಗಿದೆ. ಇಲ್ಲಿ ಕುಳಿತುಕೊಂಡು ಏನು ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡು ಎಂದು ನನ್ನ ಮನಃಸಾಕ್ಷಿ ಹೇಳಿದೆ. ಈ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.
ನಾನು ಒಬ್ಬಂಟಿಯಲ್ಲ. ಮಮತಾ ಬ್ಯಾನರ್ಜಿಯನ್ನು ನೋಡಿ ನಾನು ಪಕ್ಷಕ್ಕೆ ಸೇರಿದ್ದೆ. ಆದರೆ, ಈಗ ಟಿಎಂಸಿ ಕೇವಲ ಅವರ ಪಕ್ಷವಾಗಿ ಉಳಿದಿಲ್ಲ ಎಂದು ದಿನೇಶ್ ತ್ರಿವೇದಿ ಹೇಳಿದ್ದಾರೆ.
ಇದನ್ನೂ ಓದಿ: ಹಂಬ ಹಂಬ, ರಂಬ ರಂಬ, ಕಂಬ ಕಂಬ..! ಮತ್ತೆ ಟ್ರೋಲ್ ಆದ ಮಮತಾ ಬ್ಯಾನರ್ಜಿ
ಈ ಬೆಳವಣಿಗೆಯಿಂದ ಬಿಜೆಪಿ ಲಾಭ ಪಡೆಯಲು ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ವರ್ಗೀಯ, ತ್ರಿವೇದಿ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದಾದರೆ ನಾವು ಅವರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ. ದಿನೇಶ್ ತ್ರಿವೇದಿ ಮಾತ್ರವಲ್ಲ, ಟಿಎಂಸಿಯಿಂದ ಯಾರೆಲ್ಲ ನಮ್ಮ ಪಕ್ಷಕ್ಕೆ ಬರಲು ಬಯಸುತ್ತಾರೋ ಅವರೆಲ್ಲರಿಗೂ ನಾವು ಸ್ವಾಗತ ಕೋರುತ್ತೇವೆ ಎಂದು ಹೇಳಿದ್ದಾರೆ. ಈ ಮೊದಲು ಟಿಂಎಸಿ ನಾಯಕರಾದ, ರಾಜೀವ್ ಬ್ಯಾನರ್ಜಿ, ಸೋವನ್ ಚಟರ್ಜಿ, ಸುವೆಂದು ಅಧಿಕಾರಿ ಮತ್ತು ಲಕ್ಷ್ಮಿ ರತನ್ ಶುಕ್ಲಾ ರಾಜೀನಾಮೆ ನೀಡಿದ್ದರು.