Rajya Sabha: ಇ-ನಾಮ್ ವ್ಯವಸ್ಥೆಯಲ್ಲಿ ಕೋಟ್ಯಂತರ ರೈತರು ನೋಂದಣಿ ಮಾಡಿದ್ದಾರೆ: ನಿರ್ಮಲಾ ಸೀತಾರಾಮನ್
Discussion on Budget In Rajya Sabha: ಇ-ನಾಮ್ ವ್ಯವಸ್ಥೆಯಲ್ಲಿ ಕೋಟ್ಯಂತರ ರೈತರು ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಹಲವು ನಗರಗಳ ಮಾರುಕಟ್ಟೆ ಸಣ್ಣ ರೈತರಿಗೆ ಸಿಗುತ್ತಿದೆ ಎಂದು ರಾಜ್ಯಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿ: ಕೇಂದ್ರ ಬಜೆಟ್ ಬಗ್ಗೆ ನಡೆದ ಚರ್ಚೆಗೆ ರಾಜ್ಯಸಭೆಯಲ್ಲಿ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲಾಕ್ಡೌನ್ ವೇಳೆ ಜನರಿಗೆ ಅಗತ್ಯವಿರುವ ಎಲ್ಲವನ್ನೂ ಸರ್ಕಾರದಿಂದ ಒದಗಿಸಲಾಯಿತು. ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಪ್ರತಿಪಕ್ಷಗಳಲ್ಲಿರುವ ಕೆಲವರಿಗೆ ಸರ್ಕಾರವನ್ನು ಕಾರಣವೇ ಇಲ್ಲದೆ ಟೀಕಿಸುವುದು ಅಭ್ಯಾಸವಾಗಿ ಹೋಗಿದೆ. ಬಡವರ ಪರವಾಗಿ ಕೆಲಸ ಮಾಡಿದರೂ, ಈ ಸರ್ಕಾರ ಕೇವಲ ಶ್ರೀಮಂತರಪರವಾಗಿದೆ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ. ಪಿಎಂ ಆವಾಸ್ ಯೋಜನೆಯಡಿ ಲಕ್ಷಾಂತರ ಮನೆಗಳನ್ನು ನಿರ್ಮಿಸಲಾಗಿದೆ, ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ನಲ್ಲಿ 9 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಇವರನ್ನೆಲ್ಲಾ ಶ್ರೀಮಂತರೂ ಎನ್ನುತ್ತಾರಾ ಪ್ರತಿಪಕ್ಷಗಳು? ನಮ್ಮ ಸರ್ಕಾರ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತ ಕೆಲಸಗಳನ್ನು ಮಾಡಿದೆ ಎಂದು ಹೇಳಿದ ನಿರ್ಮಲಾ ಸಚಿವರು ದಾಮಾದ್ಗಾಗಿ ನಾವು ಮಾಡಿಲ್ಲ ಎಂದಿದ್ದಾರೆ. ಮಾತಿನ ಮಧ್ಯೆ ದಾಮಾದ್ (ಅಳಿಯ) ಪದ ಬಳಕೆಗೆ ಕಾಂಗ್ರೆಸ್ ಪಕ್ಷದ ಟೀಕೆ ವ್ಯಕ್ತ ಪಡಿಸಿದ್ದು ರಾಜ್ಯ ಸಭೆಯಲ್ಲಿ ಗದ್ದಲವುಂಟಾಗಿದೆ
ಇ-ನಾಮ್ ವ್ಯವಸ್ಥೆಯಲ್ಲಿ ಕೋಟ್ಯಂತರ ರೈತರು ನೋಂದಾಯಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಹಲವು ನಗರಗಳ ಮಾರುಕಟ್ಟೆ ಸಣ್ಣ ರೈತರಿಗೆ ಸಿಗುತ್ತಿದೆ. ಯುಪಿಐ ಮೂಲಕ ಆಗಸ್ಟ್-ಜನವರಿಗೆ ನಡುವೆ ₹ 6 ಲಕ್ಷ ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಪಿಎಂ ಪಸಲ್ ಬಿಮಾ ಯೋಜನೆಯಡಿ 9 ಕೋಟಿ ರೈತರು ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರೂ ಸಣ್ಣ ಮತ್ತು ಅತಿಸಣ್ಣ ರೈತರೇ ಆಗಿದ್ದಾರೆ. ಮುದ್ರಾ ಯೋಜನೆಯಡಿಯಲ್ಲಿ ₹ 27,000 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಈ ಸಾಲವನ್ನು ಯಾರು ತಗೊಳ್ತಾರೆ?
ಇದು ಸರ್ಕಾರದ ಪ್ರಯತ್ನ, ಯಾರು ನಿಜವಾದ ಫಲಾನುಭವಿಗಳು ಎಂದು ಗುರುತಿಸಿ ಸೌಲಭ್ಯ ಕೊಡುತ್ತಿದ್ದೇವೆ. ಬಡವರು, ದಲಿತರು, ಬುಡಕಟ್ಟು ವರ್ಗಗಳಿಗೆ ಅಗತ್ಯ ಸೌಲಭ್ಯ ಒದಗಿಸುತ್ತಿದ್ದೇವೆ. ಉಜ್ವಲಾ ಯೋಜನೆ ಹಲವು ಮಹಿಳೆಯರಿಗೆ ಅನುಕೂಲವಾಗಿದೆ. ಇದನ್ನು ಇನ್ನೂ ಒಂದು ಕೋಟಿ ಫಲಾನುಭವಿಗಳಿಗೆ ವಿಸ್ತರಿಸಿದ್ದೇವೆ.
ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಾವು ಪರಿಣಾಮಕಾರಿಯಾಗಿ ಉದ್ಯೋಗ ಕಲ್ಪಿಸಿದ್ದೇವೆ. ನಾವು ಆರ್ಥಿಕತೆಗೆ ಉತ್ತೇಜನ ನೀಡಲು, ಮೂಲ ಸೌಕರ್ಯ ಒದಗಿಸಲು ನನ್ನ ಬಜೆಟ್ ಯತ್ನಿಸಿದೆ. ಕೊರೊನಾ ಪಿಡುಗಿನಿಂದ ನಾನು ಕಂಗಾಲಾಗಿಲ್ಲ. ನಮ್ಮ ಸುಧಾರಣಾ ಕ್ರಮಗಳು ಜಾರಿಯಲ್ಲಿವೆ.
ಇದನ್ನೂ ಓದಿ: Parliament: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಜೆಟ್ನಿಂದ ಬಡವರ ಬದುಕು ಸುಧಾರಣೆ: ಅನುರಾಗ್ ಠಾಕೂರ್
ವಿಳಂಬವಾಗಿದೆ ಆದರೆ ಧೈರ್ಯವಾಗಿ ಕೆಲಸ ಮಾಡ್ತಿದೆ ಎಂದು ಬಜೆಟ್ ಬಗ್ಗೆ ಪ್ರಮುಖ ಮಾಧ್ಯಮವೊಂದು ಸಂಪಾದಕೀಯ ಬರೆದಿದೆ. ಸರ್ಕಾರದ ಲೆಕ್ಕದಲ್ಲಿ ಪಾರದರ್ಶಕತೆ ತರುತ್ತಿದ್ದೇವೆ. ಹಿಂದಿನ ವಿತ್ತ ಸಚಿವರು ಅನುಮಾನದ ಅಂಕಿಅಂಶಗಳು ಎಂದು ಉಲ್ಲೇಖಿಸಿದ್ದರು. ನಾನು ಎಂದಿಗೂ ಹಾಗೆ ಹೇಳುವುದಿಲ್ಲ.
ಅನೇಕ ಪತ್ರಿಕೆಗಳು ನಮ್ಮ ಬಂಡವಾಳ ಹೂಡಿಕೆ ಹಿಂತೆಗೆತವನ್ನು ಶ್ಲಾಘಿಸಿವೆ. ನಾವು 1991ರ ಆರ್ಥಿಕ ಸುಧಾರಣೆಗಳು ತುಂಬಾ ಮುಖ್ಯ. ಅದರ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ಅದಾದ ನಂತರ ಕಾಂಗ್ರೆಸ್ ಪಕ್ಷವು ಹೈಬ್ರಿಡ್ ಸಮಾಜವಾದಕ್ಕೆ ಮಾರುಹೋಯಿತು. ಲೈಸೆನ್ಸ್ ಕೋಟಾ ರಾಜ್ ಆರ್ಥಿಕತೆ ನಡೆಯಿತು.
ಸಮಾಜವಾದದಿಂದ ಒಂದೇ ಸಲಕ್ಕೆ ಜಾಗತೀಕರಣಕ್ಕೆ ಮುಕ್ತವಾಯಿತು. ಇದರ ನಡುವೆ ಸಾಕಷ್ಟು ವಿಚಾರಗಳಲ್ಲಿ ಗೊಂದಲಗಳು ಆದವು. ಇಂಥ ವಿಚಾರಗಳನ್ನು ಸರಿಪಡಿಸಲು ನಾವು ಶ್ರಮಿಸುತ್ತಿದ್ದೇವೆ. ತೆರಿಗೆದಾರರನ್ನು ನಾವು ಗೌರವಿಸುತ್ತೇವೆ. ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಿದ್ದೇವೆ. ರೈಲು-ಕೃಷಿಯ ವಿಚಾರದಲ್ಲಿ ನಮಗೆ ಗಮನವಿದೆ. ರಕ್ಷಣೆ ವಿಚಾರದಲ್ಲಿ ನಾವು ಹಿಂಜರಿಕೆ ಮಾಡಿಲ್ಲ. ಅಗತ್ಯ ಅನುದಾನ ನೀಡಿದ್ದೇವೆ. ಗಡಿ ಸಂಘರ್ಷಗಳ ಮತ್ತು ಉದ್ವಿಗ್ನತೆಯ ಅರಿವು ನಮಗಿದೆ. ರಕ್ಷಣಾ ವೆಚ್ಚರದಲ್ಲಿ ಸ್ಥಿರತೆ ಕಾಪಾಡಿಕೊಳ್ಳಲು ಗಮನ ಕೊಟ್ಟಿದ್ದೇವೆ. ಅನುದಾನ ಕಡಿಮೆ ಮಾಡಿಲ್ಲ. ಸದಸ್ಯರ ಆಕ್ಷೇಪಗಳನ್ನು ನಾನು ಗೌರವಿಸುತ್ತೇನೆ. ಸಕಾರಾತ್ಮಕವಾಗಿ ಉತ್ತರಿಸಲು ಪ್ರಯತ್ನಿಸುತ್ತೇನೆ.
ಇದನ್ನೂ ಓದಿ: Budget 2021 ವಿಶ್ಲೇಷಣೆ | ಭಾರತಕ್ಕೆ ಬೇಕಾಗಿತ್ತು ಜನಸಾಮಾನ್ಯರ ಬಜೆಟ್
ಆರೋಗ್ಯ ಕ್ಷೇತ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುದಾನ ಕಡಿಮೆ ಮಾಡಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ನಮ್ಮ ಕೆಲಸಗಳನ್ನು ಶ್ಲಾಘಿಸಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯದ ವಿಚಾರದಲ್ಲಿ ಭಾರತ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ. ಎಲ್ಲರಿಗೂ ಆರೋಗ್ಯ ಎಂಬ ಆಶಯ ಈಡೇರಿಸಲು ಶುದ್ಧ ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಆರೋಗ್ಯ ಇಲಾಖೆಗೆ, ಆಯುಷ್ ಇಲಾಖೆ ಅನುದಾನ ಹೆಚ್ಚಿಸುವುದರ ಜೊತೆಗೆ ಆರೋಗ್ಯ ಸಂಶೋಧನೆಗೆ ಈ ವರ್ಷ ₹ 2663 ಕೋಟಿ ಅನುದಾನ ಒದಗಿಸಲಾಗಿದೆ.
ರಕ್ಷಣಾ ಅನುದಾನ ರಕ್ಷಣಾ ಇಲಾಖೆಗೆ ಒದಗಿಸಿದ ಅನುದಾನವನ್ನು ಮೂರು ರೀತಿ ವಿಂಗಡಿಸಿದ್ದೇವೆ. ರೆವಿನ್ಯೂ, ಕ್ಯಾಪಿಟಲ್ ಮತ್ತು ಪೆನ್ಷನ್ ಖರ್ಚಿಗಾಗಿ ಪ್ರತ್ಯೇಕ ಅನುದಾನಗಳನ್ನು ಒದಗಿಸಿದ್ದೇವೆ
2020-21ರಲ್ಲಿ ಒದಗಿಸಿದ್ದ ಅನುದಾನದ ವಿವರ – ₹ 2 ಲಕ್ಷ ಕೋಟಿ ರೆವಿನ್ಯೂ, – ₹ 1.13 ಕೋಟಿ ಕ್ಯಾಪಿಟಲ್ – ₹ 1. 33 ಕೋಟಿ ಪಿಂಚಣಿ
2021-22ರಲ್ಲಿ ಒದಗಿಸಿರುವ ಅನುದಾನದ ವಿವರ – 2.12 ಲಕ್ಷ ಕೋಟಿ – 1.35 ಲಕ್ಷ ಕೋಟಿ – 1.15 ಲಕ್ಷ ಕೋಟಿ
ರಕ್ಷಣೆಯನ್ನು ನಾನು ನಿರ್ಲಕ್ಷಿಸಿಲ್ಲ. ಭಾಷಣದಲ್ಲಿ ಹೆಚ್ಚು ಮಾತನಾಡಿಲ್ಲ ಎಂದು ಆರೋಪಿಸುತ್ತಿರುವವರು ಬಜೆಟ್ ಪ್ರತಿಯನ್ನು ಮತ್ತೊಮ್ಮೆ ನೋಡಬೇಕು.
ಕೃಷಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ₹ 1.15 ಲಕ್ಷ ಕೋಟಿಯನ್ನು 10 ಕೋಟಿಗೂ ಹೆಚ್ಚು ರೈತರಿಗೆ ನೇರವಾಗಿ ವರ್ಗಾಯಿಸಿದ್ದೇವೆ. ಪಶ್ಚಿಮ ಬಂಗಾಳದ ರೈತರಿಗೆ ಈ ಸೌಲಭ್ಯ ಒದಗಿಸಲು ಅಲ್ಲಿನ ಸರ್ಕಾರ ಸಹಕರಿಸಲಿಲ್ಲ. ಹೀಗಾಗಿ ಮುಂದಿನ ವರ್ಷದ ಅಂಕಿಸಂಖ್ಯೆಗಳು ಹೆಚ್ಚುಕಡಿಮೆಯಾದವು. ಇದು ನಮ್ಮ ತಪ್ಪಲ್ಲ.
Watch Live: Smt @nsitharaman replies to the debate on the Union Budget 2021-22 in the Rajya Sabha https://t.co/zjNnNVnIRX
— NSitharamanOffice (@nsitharamanoffc) February 12, 2021
ಉದ್ಯೋಗ ಖಾತ್ರಿ ವರ್ಷದಿಂದ ವರ್ಷಕ್ಕೆ ಕೆಲ ಪಕ್ಷಗಳು ಉದ್ಯೋಗ ಖಾತ್ರಿ ಯೋಜನೆ ನಮ್ಮದು ಎನ್ನುತ್ತಿದ್ದಾರೆ. ಅದನ್ನು ನೀವು ಕೆಟ್ಟದಾಗಿ ಅನುಷ್ಠಾನಕ್ಕೆ ತಂದಿದ್ದಿರಿ. ನಾವು ಅದರ ಲೋಪಗಳನ್ನು ಸರಿಪಡಿಸಿದೆವು. ಅದಕ್ಕಾಗಿ ಮೀಸಲಿಡುತ್ತಿದ್ದ ಹಣವನ್ನು ಸಂಪೂರ್ಣವಾಗಿ ಬಳಸುತ್ತಿರಲಿಲ್ಲ. ಮೋದಿ ಪ್ರಧಾನಿಯಾದ ನಂತರ ಆ ಯೋಜನೆಯಲ್ಲಿದ್ದ ಲೋಪಗಳನ್ನು ಸರಿಪಡಿಸಿದರು. ಯೋಜನೆಯನ್ನು ಬಲಪಡಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಅನುದಾನದ ಬಳಕೆಯೂ ಕಡಿಮೆಯಾಗುತ್ತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೀಸಲಿಟ್ಟ ಅನುದಾನದ ಬಳಕೆಗೆ ಹೆಚ್ಚು ಒತ್ತು ನೀಡಿದೆವು. 2020-21ರಲ್ಲಿ ಮೀಸಲಿಟ್ಟ ಅನುದಾನ ₹ 61 ಸಾವಿರ ಕೋಟಿ. ಹೆಚ್ಚುವರಿಯಾಗಿ ಬಂದ ಬೇಡಿಕೆ ಪರಿಗಣಿಸಿ ₹ 1 ಲಕ್ಷಕ್ಕೂ ಹೆಚ್ಚು ಅನುದಾನ ಒದಗಿಸಿದೆವು. ಈ ಪೈಕಿ ₹ 98 ಸಾವಿರ ಕೋಟಿ ಬಳಕೆಯಾಗಿದೆ. ಇದೊಂದು ದಾಖಲೆಯೂ ಹೌದು. ಈ ವರ್ಷ ₹ 73 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಇದರ ಬಗ್ಗೆ ಭಾವುಕತೆ ಬಿಟ್ಟು, ವಾಸ್ತವ ಸ್ಥಿತಿಯನ್ನು ಆಧರಿಸಿ ಮಾತನಾಡಿ ಎಂದು ಸದಸ್ಯರನ್ನು ವಿನಂತಿಸುತ್ತೇನೆ.
ಇದನ್ನೂ ಓದಿ: Parliament: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಮಂಡಿ ವ್ಯವಸ್ಥೆಯನ್ನು ನಾಶ ಮಾಡಲಿದೆ: ರಾಹುಲ್ ಗಾಂಧಿ
ಉದ್ಯೋಗಾವಕಾಶ ಗರೀಬ್ ಕಲ್ಯಾಣ್ ಯೋಜನೆಯಡಿ ನಾವು ಹಲವು ಒಂದು ನಿರ್ದಿಷ್ಟ ಗುಂಪಿಗೆ ಸೇರಿದವರ ಉದ್ಯೋಗಿಗಳ ಇಪಿಎಫ್ ಖಾತೆಗಳಿಗೆ ಉದ್ಯೋಗದಾತರು ಮತ್ತು ಉದ್ಯೋಗಿಗಳ ವಂತಿಕೆ ಪಾವತಿಸಿದೆವು. ವಲಸೆ ಕಾರ್ಮಿಕರಿಗಾಗಿ ₹ 50 ಸಾವಿರ ಕೋಟಿ ನೇರವಾಗಿ ಪಾವತಿಸಿದೆವು. ಪಿಎಂ ಸ್ವರ್ಣ ನಿಧಿ ಯೋಜನೆಯಡಿ ಫುಟ್ಪಾತ್ ವ್ಯಾಪಾರಿಗಳಿಗೆ ನೆರವಾದೆವು. ಮಾರ್ಚ್ 1ರಿಂದ ಸೆಪ್ಟೆಂಬರ್ 30ರ ಒಳಗೆ ತೆಗೆದುಹಾಕಿದ್ದ ಕೆಲಸಗಾರರನ್ನು ಮತ್ತೆ ತೆಗೆದುಕೊಂಡರೆ ಅವರ ಮುಂದಿನ ಎರಡು ವರ್ಷಗಳ ಪಿಎಫ್ ವಂತಿಕೆಯನ್ನು ಪಾವತಿಸುವ ಭರವಸೆ ನೀಡಿದ್ದೇವೆ. ಸಾಕಷ್ಟು ಮಂದಿಗೆ ಇದರಿಂದ ಅನುಕೂಲವಾಗಿದೆ.
ಸಮಯ ನೆನಪಿಸಿದ ವೆಂಕಯ್ಯ ನಾಯ್ಡು
ನಿರ್ಮಲಾ ಭಾಷಣಕ್ಕೆ ತಡೆಯೊಡ್ಡಿದ್ದ ಸಭಾಪತಿ ವೆಂಕಯ್ಯ ನಾಯ್ಡು, ಭಾಷಣವನ್ನು 3 ಗಂಟೆಯ ಒಳಗೆ ಮುಗಿಸಿ. 4ಕ್ಕೆ ಲೋಕಸಭೆ ಅಧಿವೇಶನ ಆರಂಭವಾಗಲಿದೆ. ನನಗೆ ಸದಸ್ಯರ ಆರೋಗ್ಯವೂ ಮುಖ್ಯ ಎಂದು ಹೇಳಿದರು. ಸದಸ್ಯರು ‘ದೇಶದ ಆರ್ಥಿಕ ಆರೋಗ್ಯದ ಕಥೆಯೇನು’ ಎಂದು ನಗಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೆಂಕಯ್ಯ ನಾಯ್ಡು, ‘ಜನರಿದ್ದರೆ ಆರ್ಥಿಕತೆ, ಜನರು ಆರೋಗ್ಯವಾಗಿದ್ದರೆ ಆರ್ಥಿಕ ಆರೋಗ್ಯವೂ ಚೆನ್ನಾಗಿರುತ್ತೆ’ ಎಂದು ಮುಗುಳ್ನಕ್ಕರು. ಭಾಷಣವನ್ನು ಶೀಘ್ರ ಮುಗಿಸುವ ಭರವಸೆಯಿಂದಿಗೆ ಹಣಕಾಸು ಸಚಿವರು ಮತ್ತೆ ಮಾತು ಆರಂಭಿಸಿದರು.
ಸಣ್ಣ ಮತ್ತು ಮಧ್ಯಮ ಉದ್ದಿಮೆ
ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ತೆರಿಗೆ ಮತ್ತು ಸಾಲ ವಸೂಲಿ ವಿಚಾರದಲ್ಲಿಯೂ ಸಾಕಷ್ಟು ರಿಯಾಯಿತಿಗಳನ್ನು ನೀಡಲಾಗಿದೆ. ಈ ಬಜೆಟ್ ಆತ್ಮನಿರ್ಭರ್ ಭಾರತದ ಕನಸು ನನಸು ಮಾಡಬೇಕೆಂಬ ಬಜೆಟ್. ತೆರಿಗೆದಾರರ ಹಣವನ್ನು ನಾವು ಗೌರವಿಸುತ್ತೇವೆ. ಈ ಹಣ ವೆಚ್ಚ ಮಾಡುವ ವಿಚಾರದಲ್ಲಿ ನಾವು ಬಾಧ್ಯಸ್ಥರು ಎಂದು ಅಂದುಕೊಂಡಿದ್ದೇವೆ. ಎಲ್ಲ ಹಣವನ್ನೂ ಬಜೆಟ್ ಲೆಕ್ಕದಲ್ಲಿ ತರುತ್ತಿದ್ದೇವೆ. ದೇಶಕ್ಕೆ ನಾವು ಉತ್ತರದಾಯಿಯಾಗಿದ್ದೇವೆ.
ಈ ಬಜೆಟ್ನ ಮುಖ್ಯ ಅಂಕಿಅಂಶಗಳ ಬಗ್ಗೆ ಅನುಮಾನವಿದೆ ಎಂದು ಮಾಜಿ ಹಣಕಾಸು ಸಚಿವರಾಗಿದ್ದವರು ಟೀಕಿಸಿದ್ದಾರೆ. ಈ ಅನುಮಾನಕ್ಕೆ ನಾನು ಉತ್ತರಿಸಲೇಬೇಕಿದೆ. ಹಿಂದೆ ಕೇವಲ ಪುಸ್ತಕಗಳಲ್ಲಿ ಲೆಕ್ಕ ಹೊಂದಾಣಿಕೆ ಮಾಡಿ ಬಂಡವಾಳ ವೆಚ್ಚದ ಹೆಚ್ಚಳವನ್ನು ದೇಶದ ಮುಂದಿಡುತ್ತಿದ್ದರು. ಆದರೆ ವಾಸ್ತವದಲ್ಲಿ ಹಾಗೆ ಆಗುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಲೆಕ್ಕದ ಪುಸ್ತಕದಲ್ಲಿ ಏನಿದೆಯೋ ಅದು ನಮ್ಮ ಖಜಾನೆ ಸ್ಥಿತಿಗತಿಯಲ್ಲಿಯೂ ಇದೆ. ಖಜಾನೆ ಸ್ಥಿತಿಗತಿಗೂ ದೇಶದ ಆರ್ಥಿಕತೆಗೂ ಹೊಂದಾಣಿಕೆ ಆಗುತ್ತಿದೆ. ಆರ್ಬಿಐ-ಎಸ್ಬಿಐಗಳನ್ನು ನಾವು ಲೆಕ್ಕ ಹೊಂದಾಣಿಕೆಗೆ ಬಳಸಿಕೊಳ್ಳುತ್ತಿಲ್ಲ.
ಅರುಣ್ ಜೇಟ್ಲಿ ಅರ್ಥ ಸಚಿವರಾದ ಹೊಸತರಲ್ಲಿ ಪೆಟ್ರೋಲಿಯಂ ಕಂಪನಿಗಳ ಬಿಲ್ ತುಂಬಬೇಕಾದ ಪರಿಸ್ಥಿತಿಯಿತ್ತು. ಅರುಣ್ ಜೇಟ್ಲಿ Under Provisioning (ಕಡಿಮೆ ಆನುದಾನ) ಎಂಬ ಪದವನ್ನು ನಿರ್ದಿಷ್ಟವಾಗಿ ಬಳಸಿ, ಸರಿಪಡಿಸಿದರು. ನನಗೆ ಈಗಲೂ ಕಡಿಮೆ ಅನುದಾನ ಎನ್ನುವುದು ಅತಿಮುಖ್ಯ ಎನ್ನಿಸುತ್ತಿದೆ. ನಮ್ಮ ವಿರೋಧ ಪಕ್ಷಗಳೂ ಇದೇ ಪದವನ್ನು ಹಿಡಿದು ನಮ್ಮನ್ನು ಟೀಕಿಸುತ್ತಿವೆ. ಅನುದಾನದ ಲೆಕ್ಕಾಚಾರವನ್ನು ಸರಿಪಡಿಸಿದ್ದು ನಮ್ಮ ಸರ್ಕಾರ, ಅರುಣ್ ಜೇಟ್ಲಿ. ಅವರು ತೆಗೆದುಕೊಂಡ ನಿರ್ಧಾರದಿಂದ ತೈಲೋತ್ಪಾದನೆ ಕಂಪನಿಗಳ ಬಾಕಿ ಒತ್ತಡ ಕಡಿಮೆಯಾಯಿತು. ದೇಶದ ಆರ್ಥಿಕತೆ ಸುಧಾರಿಸಿತು.
ಇದನ್ನೂ ಓದಿ: Budget 2021 | ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಉಲ್ಲೇಖಿಸಿದ 6 ಪ್ರಮುಖ ಅಂಶಗಳು
ಸದನದಲ್ಲಿ ಗದ್ದಲ ವಿತ್ತ ಸಚಿವರು Under Provisioning (ಕಡಿಮೆ ಆನುದಾನ) ಪದ ಬಳಸಿದಾಗ ಸದನದಲ್ಲಿ ಗದ್ದಲ ಹೆಚ್ಚಾಯಿತು. ಸಭಾಪತಿ ವೆಂಕಯ್ಯನಾಯ್ಡು ಮಧ್ಯಪ್ರವೇಶಿಸಿ, ‘ಮೇಡಂ ಅಂದ್ರೆ ಒಬ್ಬರೇ ಅಲ್ಲ. ಇಲ್ಲಿ ಹಲವು ಮೇಡಂಗಳಿದ್ದಾರೆ’ ಎಂದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.
ಮಾಜಿ ವಿತ್ತ ಸಚಿವರು ನಿಮ್ಮನ್ನು ಅನುಕರಿಸಲು ಯತ್ನಿಸಿ ವಿಫಲರಾಗಿದ್ದಾರೆ. ಅವರು Text, Pretext, Context ನಂಥ ಪ್ರಾಸ ಪದಗಳನ್ನು ಬಳಸಿ ಗಮನ ಸೆಳೆಯಲು ಯತ್ನಿಸಿದರು. ಆದರೆ ಅವರು ಕೆಟ್ಟರೀತಿಯಲ್ಲಿ ಅನುಕರಿಸಲು ಯತ್ನಿಸಿ, ಯಾವುದೇ ಪರಿಣಾಮ ಬೀರಲಿಲ್ಲ. ಮಾಜಿ ವಿತ್ತ ಸಚಿವರು ತಮ್ಮ ಭಾಷಣದಿಂದ ಏನನ್ನೂ ಹೇಳಲಿಲ್ಲ. ‘Prepared for the rich, of the rich and by the rich’ ಎಂಬ ಅವರ ಆರೋಪವನ್ನು ಒಪ್ಪಲು ಸಾಧ್ಯವೇ ಇಲ್ಲ. ಪದಗಳ ಆಟದಲ್ಲಿ ವಾಸ್ತವವನ್ನು ನಿರಾಕರಿಸಲು ಸಾಧ್ಯವಿಲ್ಲ.
ಕಪಿಲ್ ಸಿಬಲ್ ಮತ್ತು ಬಿನೋಯ್ ವಿಶ್ವನ್ ಪ್ರತಿಕ್ರಿಯೆ ಕೃಷಿಗೆ, ಶಿಕ್ಷಣಕ್ಕೆ ಅನುದಾನ ಕಡಿಮೆ ಮಾಡಿದ್ದು ಏಕೆ ಎಂದು ಸದನಕ್ಕೆ ಉತ್ತರಿಸಿ. ರಕ್ಷಣೆಗೆ ಮೀಸಲಿಟ್ಟ ಅನುದಾನದಲ್ಲಿ ರಕ್ಷಣಾ ಪಿಂಚಣಿ ಹೆಚ್ಚು ಮಾಡಲಿಲ್ಲ ಏಕೆ? ಎಂದು ಕಪಿಲ್ ಸಿಬಲ್ ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಮೀಸಲಿಟ್ಟಿದ್ದ ಅನುದಾನ ಕಡಿಮೆಯಾಗಿದೆ ಏಕೆ? ಎಂದು ಬಿನೋಯ್ ವಿಶ್ವನ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಪಿಂಚಣಿ ಹೆಚ್ಚಿಸಲು ಕೇವಲ ಭಾರತ ಸರ್ಕಾರ ಒಂದರ ಹೊಣೆಗಾರಿಕೆಯಲ್ಲ. ಸಾಕಷ್ಟು ವಿಚಾರಗಳನ್ನು ನಾವು ಪರಿಗಣಿಸಬೇಕಾಗುತ್ತದೆ. ಬೆಂಬಲ ಬೆಲೆಗೆ ಯಾವುದೇ ಅನುದಾನ ಕಡಿಮೆಯಾಗಿಲ್ಲ. 82 ಬೆಳೆಗಳನ್ನು ಗುರುತಿಸಿದ್ದೇವೆ. ಸುಳ್ಳು ನಿರೂಪಣೆಗಳನ್ನು ನಂಬಬೇಡಿ, ಹರಡಬೇಡಿ ಎಂದಿದ್ದಾರೆ. 8ನೇ ಮಾರ್ಚ್ 2021ರವರೆಗೆ ರಾಜ್ಯಸಭೆ ಅಧಿವೇಶನ ಮುಂದೂಡಿಲಾಗಿದೆ.
Published On - 2:35 pm, Fri, 12 February 21