Accident | ಬೆಳಗಿನ ಜಾವ ಆಕ್ಸಿಡೆಂಟ್: ನಿಂತಿದ್ದ ತೈಲ ಟ್ಯಾಂಕರ್ಗೆ ಕಾರ್ ಡಿಕ್ಕಿ, ಭೀಕರ ಅಪಘಾತದಲ್ಲಿ 6 ವಿದ್ಯಾರ್ಥಿಗಳ ಸಾವು
Madhya Pradesh Accident: ಅಪಘಾತವು ನಸುಕಿನ ವೇಳೆಯಲ್ಲಿ ನಡೆದಿರುವುದರಿಂದ ಚಾಲಕನಿಗೆ ನಿದ್ರೆ ಮಂಪರು ಆವರಿಸಿರುವುದು ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ಜೊತೆಗೆ, ಅತಿಯಾದ ವೇಗ ಮತ್ತು ಅಜಾಗರೂಕತೆಯೂ ಅಪಘಾತಕ್ಕೆ ದಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಭೋಪಾಲ್: ನಿಂತಿದ್ದ ಟ್ಯಾಂಕರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್ನ ತಲವಾಲಿ ಚಾಂದ್ ಬಳಿ ನಡೆದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿರುವುದಾಗಿ ಅಂದಾಜಿಸಲಾಗಿದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಂತಿದ್ದ ತೈಲ ಸಾಗಣೆ ಟ್ಯಾಂಕರ್ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತರಾಗಿದ್ದಾರೆ.
ಮೃತ ಯುವಕರೆಲ್ಲರೂ ಇಂದೋರ್ನ ನಿವಾಸಿಗಳಾಗಿದ್ದು, 18 ರಿಂದ 28 ವರ್ಷ ಪ್ರಾಯದವರೆಂದು ತಿಳಿದುಬಂದಿದೆ. ಈ ಯುವಕರ ತಂಡವು ಇಂದೋರ್ನ ಹೊರ ಪ್ರಾಂತ್ಯದಲ್ಲಿರುವ ಮಾಂಗ್ಲಿಯಾದಿಂದ ತಮ್ಮ ನಗರಕ್ಕೆ ಮರಳುತ್ತಿದ್ದರು ಎಂದು ಲಸುದಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಮೃತರನ್ನು ರಿಶಿ ಪವಾರ್, ಸೂರಜ್, ಚಂದ್ರಭಾನ್ ರಘುವಂಶಿ, ಸೋನು ಜತ್, ಸುಮಿತ್ ಸಿಂಗ್ ಮತ್ತು ದೇವ್ ಎಂದು ಗುರುತಿಸಲಾಗಿದೆ.
ಅಪಘಾತವು ನಸುಕಿನ ವೇಳೆಯಲ್ಲಿ ನಡೆದಿರುವುದರಿಂದ ಚಾಲಕನಿಗೆ ನಿದ್ರೆ ಮಂಪರು ಆವರಿಸಿರುವುದು ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ಜೊತೆಗೆ, ಅತಿಯಾದ ವೇಗ ಮತ್ತು ಅಜಾಗರೂಕತೆಯೂ ಅಪಘಾತಕ್ಕೆ ದಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿರುವರಾದರೂ ಬದುಕಿ ಬಾಳಬೇಕಿದ್ದ ಆರು ಯುವಕರು ಹೀಗೆ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿರುವುದು ಅತ್ಯಂತ ಖೇದಕರ ಸಂಗತಿ.
ಇದನ್ನೂ ಓದಿ: ಬಸ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆ; 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
Published On - 10:56 am, Tue, 23 February 21