ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭೂಪೇಂದ್ರ ಪಟೇಲ್ (Bhupendra Patel) ಅವರು ಇಂದು ಮಧ್ಯಾಹ್ನ 2.20 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ವಿಜಯ್ ರೂಪಾನಿ ರಾಜೀನಾಮೆ ನೀಡಿದ ಬೆನ್ನಲ್ಲೇ ಭೂಪೇಂದ್ರ ಪಟೇಲ್ರನ್ನು ಸಿಎಂ ಆಗಿ, ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಬಿಜೆಪಿ ಆಯ್ಕೆ ಮಾಡಿದೆ. ಇಂದು ನಡೆಯಲಿರುವ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೃಹ ಸಚಿವ ಅಮಿತ್ ಶಾ ಸೇರಿ ಇನ್ನೂ ಕೆಲವು ಕೇಂದ್ರ ಸಚಿವರು ಆಗಮಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಭೂಪೇಂದ್ರ ಸಿಂಗ್ ಅವರು ಉಪಮುಖ್ಯಮಂತ್ರಿ ನಿತಿನ್ ಪಟೇಲ್ರನ್ನು ಇಂದು ಅಹ್ಮದಾಬಾದ್ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಳಿಕ ಸ್ವಾಮಿ ನಾರಾಯಣ ಗುರುಕುಲಕ್ಕೆ ತೆರಳಿ ಅಲ್ಲಿನ ಸಾಧು-ಸಂತರ ಆಶೀರ್ವಾದವನ್ನು ಪಡೆದು, ಗೋಪೂಜೆ ನೆರವೇರಿಸಿದ್ದಾರೆ.
ಭೂಪೇಂದ್ರ ಪಟೇಲ್ ಭೇಟಿಯ ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ‘ಭೂಪೇಂದ್ರ ಅವರು ನನಗೆ ಹಳೇ ಸ್ನೇಹಿತರು. ಅವರೀಗ ಮುಖ್ಯಮಂತ್ರಿ ಹುದ್ದೆಗೆ ಏರಿದ್ದು ಖುಷಿಕೊಟ್ಟಿದೆ. ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಭೂಪೇಂದ್ರ ಪಟೇಲ್ರನ್ನು ಮುಖ್ಯಮಂತ್ರಿ ಮಾಡಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ಇವರೂ ಕೂಡ ನನ್ನ ಮಾರ್ಗದರ್ಶನ ಕೇಳಿದ್ದಾರೆ. ಸಂಪೂರ್ಣ ಸಹಕಾರ ಕೊಡುತ್ತೇನೆ. 18 ವರ್ಷ ಆಗಿದ್ದಾಗಿನಿಂದಲೂ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅದನ್ನು ಮುಂದುವರಿಸುತ್ತೇನೆ. ನನಗೆ ಪಾರ್ಟಿಯಲ್ಲಿ ಯಾವುದೇ ಹುದ್ದೆ ಸಿಕ್ಕರೂ, ಸಿಗದಿದ್ದರೂ ತೊಂದರೆಯಿಲ್ಲ. ಪಕ್ಷದಲ್ಲಿ ಮುಂದುವರಿಯುತ್ತೇನೆ’ ಎಂದಿದ್ದಾರೆ. ಹಾಗೇ, ಇಂದು ಅಮಿತ್ ಶಾ ಅವರು ಗುಜರಾತ್ಗೆ ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಏರ್ಪೋರ್ಟ್ಗೆ ಹೋಗುತ್ತಿದ್ದೇನೆ ಎಂದೂ ತಿಳಿಸಿದ್ದಾರೆ.
ರಾಜ್ಯಪಾಲರ ಟ್ವೀಟ್
ಹೊಸ ಮುಖ್ಯಮಂತ್ರಿ ಆಯ್ಕೆ ನಡೆದ ಬಳಿಕ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವೃತ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಭೂಪೇಂದ್ರ ಪಟೇಲ್ ಅವರು ಸರ್ಕಾರ ರಚನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅವರ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, ಪ್ರಮಾಣ ವಚನ ಸ್ವೀಕಾರಕ್ಕೆ ಆಹ್ವಾನ ನೀಡಲಾಗಿದೆ. ಸೆಪ್ಟೆಂಬರ್ 13ರಂದು ಮಧ್ಯಾಹ್ನ 2.20ಕ್ಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೊದಲ ಬಾರಿ ಶಾಸಕನಾಗಿದ್ದರೂ ಅದೃಷ್ಟ
ಭೂಪೇಂದ್ರ ಪಟೇಲ್ ಇದೇ ಮೊದಲ ಬಾರಿ ಶಾಸಕನಾಗಿದ್ದರೂ ಮುಖ್ಯಮಂತ್ರಿ ಹುದ್ದೆ ಸಿಕ್ಕಿದೆ. ಅಂದರೆ ಹೆಚ್ಚುಬಾರಿ ಶಾಸಕರಾದವರಿಗೆ ಮಾತ್ರ ಈ ಹುದ್ದೆ ಸಿಗುತ್ತದೆ ಎಂಬ ನಂಬಿಕೆಯನ್ನು ಬಿಜೆಪಿ ಸುಳ್ಳು ಮಾಡಿದೆ. ಗುಜರಾತ್ನ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿರುವ ಭೂಪೇಂದ್ರ ಪಟೇಲ್ಗೆ ರಾಜ್ಯಪಾಲರು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. 182 ಕ್ಷೇತ್ರಗಳಿರುವ ಗುಜರಾತ್ನಲ್ಲಿ 2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 99 ಸೀಟ್ ಗೆದ್ದಿತ್ತು. ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಹಾಗೇ, 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಮ್ಮೆ ಗುಜರಾತ್ ಗೆಲ್ಲುವ ತವಕದಲ್ಲಿ ಬಿಜೆಪಿ ಇದೆ. ಅದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: UP Assembly Election 2022: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ನೇತೃತ್ವ ವಹಿಸಲಿದ್ದಾರೆ ಪ್ರಿಯಾಂಕಾ ಗಾಂಧಿ
(Gujarat New CM Bhupendra Patel oath taking ceremony today)
Published On - 12:41 pm, Mon, 13 September 21