ಗರ್ಭಿಣಿ ಪತ್ನಿಯ ಕೊಲೆಗೂ ಮುನ್ನ ಗೂಗಲ್‌ನಲ್ಲಿ ಆತ್ಮಹತ್ಯೆಯ ಶಿಕ್ಷೆ ಬಗ್ಗೆ ಹುಡುಕಿದ್ದ ಪತಿ!

ಗರ್ಭಿಣಿ ಪತ್ನಿಯ ಚಾರಿತ್ರ್ಯ ಶಂಕಿಸಿ ಬಲವಂತವಾಗಿ ರಸಗೊಬ್ಬರದ ವಿಷಕಾರಿ ದ್ರಾವಣ ಕುಡಿಸಿ, ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಗೂಗಲ್ ಸರ್ಚ್ ಬಳಸಿ ಕೃತ್ಯ ಎಸಗಿದ ದಾರುಣ ಘಟನೆ ಗುಜರಾತ್‌ನ ಖೇಡಾ ಜಿಲ್ಲೆಯ ಮಹುಧಾ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. 13 ವಾರಗಳ ಗರ್ಭಿಣಿಯಾಗಿದ್ದ ಅರುಣಾಬೆನ್ ಸೋಧಾ ಹತ್ಯೆಗೊಳಗಾದ ದುರದೃಷ್ಟಕರ ಮಹಿಳೆ. ಅಕ್ಟೋಬರ್ 17ರಂದು ಅರುಣಾಬೆನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಮೃತರ ಕುಟುಂಬಸ್ಥರು ಸಾವಿನ ಕುರಿತು ತೀವ್ರ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಾಗ ಹತ್ಯೆಯ ಅಸಲಿ ಸತ್ಯ ಹೊರಬಿದ್ದಿದೆ.

ಗರ್ಭಿಣಿ ಪತ್ನಿಯ ಕೊಲೆಗೂ ಮುನ್ನ ಗೂಗಲ್‌ನಲ್ಲಿ ಆತ್ಮಹತ್ಯೆಯ ಶಿಕ್ಷೆ ಬಗ್ಗೆ ಹುಡುಕಿದ್ದ ಪತಿ!
ಅರುಣಾಬೆನ್ ಸೋಧಾ

Updated on: Oct 22, 2026 | 10:36 PM

ಖೇಡಾ, ಅಕ್ಟೋಬರ್ 22: ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬಿಂಬಿಸಲಾಗಿದ್ದ ಪ್ರಕರಣವು ತನಿಖೆಯ ಬಳಿಕ ಭೀಕರ ಕೊಲೆಯೆಂಬುದು ಬಯಲಾಗಿದೆ. ಪತಿ ಹಾಗೂ ಆತನ ಕುಟುಂಬಸ್ಥರೇ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿ, ನಂತರ ಕಾನೂನಿನಿಂದ ತಪ್ಪಿಸಿಕೊಳ್ಳಲು ಅದನ್ನು ಆತ್ಮಹತ್ಯೆಯಂತೆ ಬಿಂಬಿಸಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಅಕ್ಟೋಬರ್ 17ರಂದು ಖೇಡಾ ಜಿಲ್ಲೆಯ ಮಹುಧಾ ಪ್ರದೇಶದಲ್ಲಿ ಅರುಣಾಬೆನ್ ಸೋಧಾ ಎಂಬುವವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆದರೆ, ಆ ಮಹಿಳೆಯ ಕುಟುಂಬಸ್ಥರು ಈ ಸಾವಿನ ಸುತ್ತಲಿನ ಅನುಮಾನಗಳ ಕುರಿತು ತೀವ್ರ ಸಂದೇಹ ವ್ಯಕ್ತಪಡಿಸಿದ್ದರು.

ಈ ಘಟನೆಯ ರಾತ್ರಿ 13 ವಾರಗಳ ಗರ್ಭಿಣಿಯಾಗಿದ್ದ ಅರುಣಾಬೆನ್ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದು, ತಮ್ಮನ್ನು ವೈದ್ಯರ ಬಳಿ ಕರೆದೊಯ್ಯುವಂತೆ ಪತಿ ಮಿತುಲ್ ಬಳಿ ಪದೇಪೇದೆ ಗೋಗರೆದಿದ್ದಾರೆ. ಆದರೆ ಪತಿ ಮಿತುಲ್ ಆಕೆಯ ಮಾತನ್ನು ನಿರ್ಲಕ್ಷಿಸಿ ತನ್ನ ಮೊಬೈಲ್‌ನಲ್ಲೇ ನಿರತನಾಗಿದ್ದನು.

ಇದನ್ನೂ ಓದಿ: ಗುರುಗ್ರಾಮದಲ್ಲಿ ಮಹಿಳೆಯ ಬರ್ಬರ ಕೊಲೆ; ಕೈ ಕಟ್ಟಿ, ಬಾಯಿಗೆ ಟೇಪ್ ಅಂಟಿಸಿದ ಸ್ಥಿತಿಯಲ್ಲಿ ಬಾತ್‌ರೂಮ್‌ನಲ್ಲಿ ಶವ ಪತ್ತೆ

ಗೂಗಲ್‌ನಲ್ಲಿ ಸರ್ಚ್ ಮಾಡಿದ ಪತಿ:

ನೋವು ತಾಳಲಾರದೆ ಅರುಣಾಬೆನ್ ಆಕ್ರೋಶದಿಂದ “ಹಾಗಾದರೆ ನಾನೇ ಸತ್ತುಹೋಗುತ್ತೇನೆ” ಎಂದಾಗ, ಪತಿ ಮಿತುಲ್ ತನ್ನ ಪತ್ನಿ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡರೆ ಪತಿಗೆ ಕಾನೂನು ಪ್ರಕಾರ ಜೈಲು ಶಿಕ್ಷೆ ಅಥವಾ ಜವಾಬ್ದಾರಿ ಇರುತ್ತದೆಯೇ ಎಂದು ಮಿತುಲ್ ಮೊಬೈಲ್‌ನಲ್ಲಿ ಗೂಗಲ್ ಸರ್ಚ್ ಮಾಡಿದ್ದಾನೆ. ಇದರ ಬೆನ್ನಲ್ಲೇ ಪತ್ನಿಯನ್ನು ಕೊಲೆ ಮಾಡಲು ಆತ ಸಂಚು ಹೂಡಿದ್ದಾನೆ.

ಕ್ರೂರ ಕೃತ್ಯ ಎಸಗಿದ ಕುಟುಂಬ:

ಪೊಲೀಸರ ತನಿಖೆಯ ಪ್ರಕಾರ, ಅರುಣಾಬೆನ್ ಅವರ ಬಾಯಿಗೆ ಬಟ್ಟೆ ತುರುಕಿ ಕಿರುಚದಂತೆ ತಡೆದ ಅತ್ತೆ ಮತ್ತು ನಾದಿನಿ ಆಕೆಯ ಕೈ-ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ನಂತರ ಪತಿ ಮಿತುಲ್ ಮನೆಯಲ್ಲಿದ್ದ ನ್ಯಾನೋ ಯೂರಿಯಾ ಎಂಬ ವಿಷಕಾರಿ ರಾಸಾಯನಿಕವನ್ನು ಬಲವಂತವಾಗಿ ಆಕೆಯ ಬಾಯಿಗೆ ಹೊಯ್ದಿದ್ದಾನೆ. ಅದಾದ ಕೆಲವೇ ನಿಮಿಷಗಳಲ್ಲಿ ಉಸಿರುಗಟ್ಟಿ ಅರುಣಾಬೆನ್ ಹಾಗೂ ಅವರ ಗರ್ಭದಲ್ಲಿದ್ದ ಮಗು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಅಂತ್ಯಕ್ರಿಯೆ ಸ್ಥಳದಿಂದ ಶವ ವಶಕ್ಕೆ ಪಡೆದ ಪೊಲೀಸರು: ಮಂಚದಿಂದ ಬಿದ್ದು ಸತ್ತಿದ್ಳು ಅಂದಿದ್ದ ಮಗ; ರಿಪೋರ್ಟ್‌ನಿಂದ ಕೊಲೆ ರಹಸ್ಯ ರಿವೀಲ್

ಈ ಕೊಲೆಯ ನಂತರ ಕೃತ್ಯವನ್ನು ಮುಚ್ಚಿಹಾಕಲು, ಶವವನ್ನು ಹಿಂಭಾಗದ ಕೋಣೆಯ ಕಿಟಕಿಗೆ ನೈಲಾನ್ ಹಗ್ಗದಿಂದ ನೇತುಹಾಕಿ ಆತ್ಮಹತ್ಯೆಯಂತೆ ಬಿಂಬಿಸಲು ಆರೋಪಿಗಳು ಯತ್ನಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಬಯಲಾದ ಸತ್ಯ:

ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಕುತ್ತಿಗೆಯ ಮೇಲಿನ ನೇಣಿನ ಹಗ್ಗದ ಗುರುತುಗಳು ಸಾವಿನ ನಂತರ ಉಂಟಾಗಿರುವುದು ಮತ್ತು ದೇಹದಲ್ಲಿ ವಿಷಕಾರಿ ರಾಸಾಯನಿಕದ ಅಂಶವಿರುವುದು ಪತ್ತೆಯಾಗಿದೆ. ಯೂರಿಯಾ ಸೇವನೆಯಿಂದ ಉತ್ಪತ್ತಿಯಾದ ವಿಷಕಾರಿ ಅಮೋನಿಯಾ ಅನಿಲದಿಂದ ಉಸಿರುಗಟ್ಟಿ ಸಾವು ಸಂಭವಿಸಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ವೈದ್ಯಕೀಯ ವರದಿಗಳ ಆಧಾರದ ಮೇಲೆ ಪೊಲೀಸರು ಮೃತಳ ಪತಿ ಮಿತುಲ್ ಸೋಧಾ ಹಾಗೂ ಆತನ ಸಹೋದರ ವಿಪುಲ್ ಸೋಧಾ ಅವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಅತ್ತೆ ಹಾಗೂ ನಾದಿನಿಯ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us