ಶ್ರೀನಗರ: ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಗುಪ್ಕರ್ ಮೈತ್ರಿಕೂಟವು ಚುನಾವಣೆ ಗೆಲ್ಲುವ ಸೂಚನೆ ನೀಡಿದೆ. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಈ ತಿಂಗಳು ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಸಮಿತಿ ಚುನಾವಣೆ ನಡೆದಿತ್ತು. ಒಟ್ಟು 280 ವಾರ್ಡ್ ಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಿನ್ನೆ ಬೆಳಿಗ್ಗೆಯಿಂದ ನಡೆಯುತ್ತಿದೆ.
ಇಂದು ಬೆಳಗ್ಗೆ 9.30ಕ್ಕೆ ಜಮ್ಮು ಕಾಶ್ಮೀರ ರಾಜ್ಯ ಚುನಾವಣಾ ಪ್ರಾಧಿಕಾರ ನೀಡಿದ ಮಾಹಿತಿಯಂತೆ, ಗುಪ್ಕರ್ ಮೈತ್ರಿಕೂಟವು 110 ಸ್ಥಾನಗಳನ್ನು ಗೆಲ್ಲುವ ಮೂಲಕ ಜಮ್ಮು ಕಾಶ್ಮೀರ ಜಿಲ್ಲಾ ಅಭಿವೃದ್ಧಿ ಸಮಿತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 74 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ. ಈ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಕಾಂಗ್ರೆಸ್ 26 ಸ್ಥಾನಗಳನ್ನು ಪಡೆದುಕೊಂಡಿದೆ.
ಜಮ್ಮು ಕಾಶ್ಮೀರದ ಫಾರೂಕ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಮೆಹಬೂಬ್ ಮುಫ್ತಿ ನೇತೃತ್ವದ ಪಿಡಿಪಿ ಹಾಗೂ ಸಿಪಿಐ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಗುಪ್ಕರ್ ಮೈತ್ರಿಕೂಟದ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಕಾಂಗ್ರೆಸ್ ತಾನು ಗುಪ್ಕರ್ ಮೈತ್ರಿಕೂಟದ ಭಾಗವಲ್ಲ ಎಂದು ಚುನಾವಣೆಗೂ ಮುನ್ನ ಘೋಷಿಸಿತ್ತು.
ಜಮ್ಮು ಕಾಶ್ಮೀರದ ಅಪ್ನಿ ಪಾರ್ಟಿಯು 12 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ. ಪಕ್ಷೇತರ ಸೇರಿದಂತೆ ಇತರೆ ಅಭ್ಯರ್ಥಿಗಳು ಒಟ್ಟು 49 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪಿಡಿಎಫ್, ಎನ್ಪಿಪಿ ಹಾಗೂ ಬಿಎಸ್ಪಿ ಪಕ್ಷಗಳು ತಲಾ 1 ಸ್ಥಾನಗಳಲ್ಲಿ ವಿಜಯ ಸಾಧಿಸಿವೆ. ಇನ್ನೂ ಕೆಲವು ಸ್ಥಾನಗಳ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.
ಗುಪ್ಕರ್ ಮೈತ್ರಿಕೂಟದ ನಾಯಕರು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮತ್ತೆ ನೀಡಬೇಕೆಂಬ ಬೇಡಿಕೆಯನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದ್ದರು. ಹೀಗಾಗಿ ಕಾಂಗ್ರೆಸ್ ಗುಪ್ಕರ್ ಮೈತ್ರಿಕೂಟದ ಹೊರಗೆ ಉಳಿದು ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧೆ ಮಾಡಿತ್ತು. ಬಿಜೆಪಿ ಪಕ್ಷವು ಕಾಶ್ಮೀರದಲ್ಲಿ ಕಮಲ ಅರಳಿಸಲು ಹೋರಾಟ ನಡೆಸಿತ್ತು. ಕಾಂಗ್ರೆಸ್ ಪಕ್ಷವು ತನ್ನ ಆಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಿತ್ತು.
Jammu and Kashmir DDC elections tally at 9.30 am:
BJP- 74
National Conference – 67
Independent – 49
J&K PDP: 27
Congress: 26
Apni Party: 12(Data source: J&K State Election Authority) pic.twitter.com/z5KHPm3pAV
— ANI (@ANI) December 23, 2020
ಜಮ್ಮು ಕಾಶ್ಮೀರದ ಡಿಡಿಸಿ ಚುನಾವಣಾ ಫಲಿತಾಂಶ: ಕಾಶ್ಮೀರದಲ್ಲೂ ಖಾತೆ ತೆರೆದ ಬಿಜೆಪಿ
Published On - 11:38 am, Wed, 23 December 20