ಅಸ್ಸಾಂನ ಗುವಾಹಟಿಯಲ್ಲಿ ಭೀಕರ ಗುಂಡಿನ ದಾಳಿ! ಹೋಟೆಲ್ ಬಿಲಾಸ್ ಇನ್ ಒಡತಿ ಸೇರಿ ಐವರ ಸಾವು, ಆರೋಪಿ ಅರೆಸ್ಟ್
ಅಸ್ಸಾಂನ ಗುವಾಹಟಿಯ ಉಲುಬಾರಿ ಪ್ರದೇಶದಲ್ಲಿರುವ ಹೋಟೆಲ್ ಬಿಲಾಸ್ ಇನ್ ಬಳಿ ಸೋಮವಾರ ರಾತ್ರಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಆಸ್ತಿ ವಿವಾದ ಹಾಗೂ ಲೀಸ್ ಒಪ್ಪಂದದ ಕಲಹವೇ ಈ ದುರ್ಘಟನೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದು, ಕೃತ್ಯವೆಗಗಿಸಿದ ಆರೋಪಿಯನ್ನು ಕೇವಲ ಒಂದು ಗಂಟೆಯೊಳಗೆ ಬಂಧಿಸಿ ಶಸ್ತ್ರಾಸ್ತ್ರ ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಈ ಕುರಿತು ತೀವ್ರ ತನಿಖೆ ಮುಂದುವರಿದಿದೆ.

ಮುಖ್ಯಾಂಶಗಳು
- ಅಸ್ಸಾಂನ ಗುವಾಹಟಿಯಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಐವರು ಸ್ಥಳದಲ್ಲೇ ಸಾವು.
- ಹೋಟೆಲ್ ಲೀಸ್ ಒಪ್ಪಂದ ಹಾಗೂ ಆಸ್ತಿ ವಿವಾದವೇ ಈ ಮಾರಣಾಹಾಮಿಕ ದಾಳಿಗೆ ಕಾರಣ.
- ದಾಳಿ ನಡೆದ ಕೇವಲ ಒಂದು ಗಂಟೆಯೊಳಗೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗುವಾಹಟಿ, ಅಕ್ಟೋಬರ್ 27: ಅಸ್ಸಾಂನ ರಾಜಧಾನಿ ಗುವಾಹಟಿಯ ಉಲುಬಾರಿ ಪ್ರದೇಶದ ಬೋರಾ ಸರ್ವಿಸ್ ಸಮೀಪವಿರುವ ಹೋಟೆಲ್ ಬಿಲಾಸ್ ಇನ್ ಬಳಿ ಸೋಮವಾರ ರಾತ್ರಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಹೋಟೆಲ್ ಓನರ್ ಹೆಲೆನಾ ಬರಾಲಿ ಮತ್ತು ಆಕೆಯ ಮಗ, ದೇಬರ್ಶಿ ಕಶ್ಯಪ್, ನಾರಾಯಣ್ ದಾಸ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಕೇವಲ ಒಂದು ಗಂಟೆಯೊಳಗೆ ದಾಳಿಕೋರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ತಿ ವಿವಾದವೇ ರಕ್ತಪಾತಕ್ಕೆ ಪ್ರಮುಖ ಕಾರಣ
ಗುವಾಹಟಿ ಪೊಲೀಸ್ ಕಮಿಷನರ್ ಪಾರ್ಥ ಸಾರಥಿ ಮಹಂತ ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ರಾತ್ರಿ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಹೋಟೆಲ್ ಗುತ್ತಿಗೆ ಒಪ್ಪಂದ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರ ಕಡೆಯವರು ಹಾಗೂ ಗುತ್ತಿಗೆ ಪಡೆದವರ ನಡುವಿನ ವಾಗ್ವಾದವೇ ಈ ಮಾರಣಾಹಾಮಿಕ ದಾಳಿಗೆ ಕಾರಣ ಎಂದು ಶಂಕಿಸಲಾಗಿದೆ.
ಆರೋಪಿಯನ್ನು ಘನಕಾಂತ ಗೊಗೊಯ್ ಎಂದು ಗುರುತಿಸಲಾಗಿದ್ದು, ಪೊಲೀಸರು ಕೃತ್ಯಕ್ಕೆ ಬಳಸಿದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಣ ಕಳೆದುಕೊಂಡಿರುವ ಐವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮತ್ತೊಬ್ಬರು ಹಾಗೂ ಗಾಯಗೊಂಡಿರುವ ವ್ಯಕ್ತಿ ಅದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ ಕಾರಿನ ಮೇಲೇರಿ ಗಾಜು ಪುಡಿ ಪುಡಿ ಮಾಡಿದ ಮಹಿಳೆ; ಅಸ್ಸಾಂ ಘಟನೆಯ ತನಿಖೆಯಲ್ಲಿ ಬೆಳಕಿಗೆ ಬಂತು ಡ್ರಗ್ಸ್ ಲಿಂಕ್
ಆಸ್ಪತ್ರೆಯ ಮಾಹಿತಿ ಹಾಗೂ ಮುಂದಿನ ತನಿಖೆ
ಮೃತ ನಾರಾಯಣ್ ದಾಸ್ (48) ತುಟಿಯ ಭಾಗದಲ್ಲಿ ಗಾಯವಾಗಿದ್ದು, ಫೈರಿಂಗ್ ನಡೆದಾಗ ಗುಂಡು ಅವರ ದೇಹವನ್ನು ಪ್ರವೇಶಿಸಿದೆ. ಆದರೆ ಅವರ ದೇಹದಿಂದ ಬುಲೆಟ್ ಹೊರಬಂದ ಗಾಯಗಳು ಇಲ್ಲ. ದಾಳಿಯಲ್ಲಿ ಗಾಯಗೊಂಡಿರುವ ಸತ್ಯೇಂದ್ರ ಪಾಠಕ್ (42) ಎಂಬುವವರಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದು, ಪ್ರಸ್ತುತ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (GMCH) ಪ್ರಿನ್ಸಿಪಾಲ್ ಡಾ. ಬಾಬುಲ್ ಕುಮಾರ್ ಬೆಜ್‌ಬರುವಾ ತಿಳಿಸಿದ್ದಾರೆ.
ಪೊಲೀಸರು ಈ ಘಟನೆಯ ಕುರಿತು ವೈಜ್ಞಾನಿಕ ಹಾಗೂ ಆಳವಾದ ತನಿಖೆಯನ್ನು ಕೈಗೊಂಡಿದ್ದಾರೆ. ಹೋಟೆಲ್ ಲೀಸ್ ಒಪ್ಪಂದದ ಹಿಂದಿನ ಒಳಸಂಚು ಮತ್ತು ವೈಯಕ್ತಿಕ ದ್ವೇಷದ ಆಯಾಮಗಳ ಬಗ್ಗೆಯೂ ಕೂಲಂಕಷವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಕಾನೂನು ಕ್ರಮವನ್ನು ಕಠಿಣವಾಗಿ ಜರುಗಿಸಲಾಗುವುದು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




