ಉತ್ತರ ಪ್ರದೇಶದ ವಾರಣಾಸಿಯ ಕಾಶೀ ವಿಶ್ವನಾಥ ಮಂದಿರದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯು, ದೇವಾಲಯ. ಹೀಗಾಗಿ ಈಗಿನ ಮಸೀದಿ ಜಾಗವನ್ನು ಸರ್ವೇ ನಡೆಸಬೇಕು, ಮಸೀದಿ ಜಾಗವನ್ನು ಹಿಂದೂಗಳಿಗೆ ನೀಡಬೇಕು ಎಂದು ಹಿಂದೂ ಸಮುದಾಯದ ಐವರು ಮಹಿಳೆಯರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಮಸೀದಿ ಜಾಗದ ವಿಡಿಯೋ ಸರ್ವೇಗೆ ಆದೇಶ ನೀಡಿತ್ತು. ಈಗ ಕೋರ್ಟ್ ಕಮೀಷನರ್ ಗಳು ನಡೆಸಿದ್ದ ಸರ್ವೇಯ ವಿಡಿಯೋ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಈ ವಿಡಿಯೋದಲ್ಲಿ ಮಸೀದಿಯೊಳಗಡೆ ಏನೇನಿದೆ, ಹಿಂದೂ ದೇವಾಲಯದ ಗುರುತುಗಳು ಪತ್ತೆಯಾಗಿವೆಯೇ ಎಂಬುದರ ಡೀಟೈಲ್ಸ್ ಇಲ್ಲಿದೆ ನೋಡಿ.
ಸರ್ವೇಯ ವಿಡಿಯೋದಲ್ಲಿ ದೇವಾಲಯದ ಗುರುತು ಪತ್ತೆ -ಮಸೀದಿಯೊಳಗಡೆ ಶಿವಲಿಂಗ, ನಂದಿ ವಿಗ್ರಹ, ಕಳಸ, ತ್ರಿಶೂಲ ಪತ್ತೆ!
ದೇಶದಲ್ಲಿ 16ನೇ ಶತಮಾನದಲ್ಲಿ ಮೋಘಲರ ಆಳ್ವಿಕೆ ಇದ್ದಾಗ ಹಿಂದೂ ದೇವಾಲಯಗಳನ್ನು ಕೆಡವಿ, ಅವುಗಳ ಸ್ಥಳದಲ್ಲೇ ಮಸೀದಿ ನಿರ್ಮಾಣ ಮಾಡಲಾಗಿದೆ. ಇಂಥವುಗಳ ಪೈಕಿ ವಾರಣಾಸಿಯ ಜ್ಞಾನವಾಪಿ ಮಸೀದಿ ಕೂಡ ಒಂದು. ಜ್ಞಾನವಾಪಿ ಮಸೀದಿಯು 16ನೇ ಶತಮಾನಕ್ಕೂ ಮೊದಲು ಹಿಂದೂ ದೇವಾಲಯ ಆಗಿತ್ತು ಎಂದು ಐವರು ಹಿಂದೂ ಮಹಿಳೆಯರು ವಾರಾಣಾಸಿಯ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮಸೀದಿ ಇರುವ ಜಾಗವನ್ನು ದೇವಾಲಯಕ್ಕೆ ನೀಡಬೇಕು. ಜ್ಞಾನವಾಪಿ ಮಸೀದಿಯೊಳಗಡೆ ಶೃಂಗಾರ ಗೌರಿ ದೇವಾಲಯ ಇದೆ. ನಿತ್ಯ ಅದರ ಪೂಜೆಗೆ ಅವಕಾಶ ಕೊಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ಕೋರ್ಟ್ ಇದರ ಸತ್ಯಾಸತ್ಯತೆ ಪರೀಕ್ಷೆಗಾಗಿ ಜ್ಞಾನವಾಪಿ ಮಸೀದಿಯ ವಿಡಿಯೋ ಸರ್ವೇಗೆ ಆದೇಶ ನೀಡಿತ್ತು. ಅದರಂತೆ ಕೋರ್ಟ್ ಕಮೀಷನರ್ ವಿಶಾಲ್ ಸಿಂಗ್ ಸರ್ವೇ ನಡೆಸಿ ಕೋರ್ಟ್ ಗೆ ವರದಿ ಸಲ್ಲಿಸಿದ್ದರು. ವಿಡಿಯೋ ಸರ್ವೇಯ ವರದಿಯನ್ನು ಸೋಮವಾರ ಹಿಂದೂ ಪರ ವಕೀಲರಿಗೆ ನೀಡಲಾಗಿತ್ತು. ಬಳಿಕ ವಿಡಿಯೋ ಸರ್ವೇಯ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ.
ಸರ್ವೇಯ ವಿಡಿಯೋದಲ್ಲಿ ಏನೇನಿದೆ? ಮಸೀದಿಯೊಳಗಡೆ ಏನೇನಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಅದನ್ನು ಈಗ ನಾವು ಮಾಧ್ಯಮಗಳಿಗೆ ಸೋರಿಕೆಯಾದ ವಿಡಿಯೋ ಸಹಿತ ವಿವರಿಸುತ್ತೇವೆ. ಜ್ಞಾನವಾಪಿ ಮಸೀದಿಯ ಸರ್ವೇ ವಿಡಿಯೋ ಸೋರಿಕೆಯಾಗಿದೆ. ಸೋರಿಕೆಯಾದ ವಿಡಿಯೋದಲ್ಲಿ ಮಸೀದಿಯೊಳಗಡೆ ಶಿವಲಿಂಗ ಇರೋದು ಪತ್ತೆಯಾಗಿದೆ. ಶಿವಲಿಂಗದ ಜಾಗದಲ್ಲಿ ನೀರು ತುಂಬಿಕೊಂಡಿತ್ತು. ಈ ನೀರನ್ನು ಮೊದಲಿಗೆ ಮೋಟಾರ್ ಪಂಪ್ ಸೆಟ್ ಮೂಲಕ ಹೊರ ಹಾಕಿ ಸರ್ವೇ ನಡೆಸಲಾಗಿದೆ. ಈ ವೇಳೆ ಒಳಭಾಗದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ. ಬಳಿಕ ಶಿವಲಿಂಗವನ್ನು ಸಂಪೂರ್ಣ ಸ್ವಚ್ಚಗೊಳಿಸಿ ಅಳತೆ ಹಾಕಲಾಗಿದೆ. ಜೊತೆಗೆ ಮಸೀದಿಯೊಳಗೆ ನಂದಿ ವಿಗ್ರಹ ಕೂಡ ಪತ್ತೆಯಾಗಿದೆ. ಶಿವಲಿಂಗದ ಕಡೆ ನಂದಿ ವಿಗ್ರಹ ಮುಖ ಮಾಡಿದೆ. ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ಕಳಸ ಕೂಡ ಪತ್ತೆಯಾಗಿದೆ. ದೇಗುಲದ ಮೇಲಿರುವ ಕಳಸದಂಥ ಕುರುಹು ಪತ್ತೆಯಾಗಿದೆ.
ಜೊತೆಗೆಯ ಜ್ಞಾನವಾಪಿ ಮಸೀದಿಯ ಗೋಡೆಗಳಲ್ಲಿ ಹಿಂದೂ ದೇವಾಲಯದ ವಾಸ್ತುಶಿಲ್ಪ ಕೂಡ ಪತ್ತೆಯಾಗಿದೆ. ಮುಸ್ಲಿಂರು ನಮಾಜ್‌ಗೂ ಮುನ್ನ ವಜುಖಾನ್ ಮಾಡುತ್ತಿದ್ದ ಸ್ಥಳದಲ್ಲೇ ಶಿವಲಿಂಗ ಪತ್ತೆಯಾಗಿದೆ. ಜ್ಞಾನವಾಪಿ ಮಸೀದಿಯಲ್ಲಿ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ಹಿಂದೂ ದೇಗುಲದ ಕಂಬ, ಗೋಡೆಗಳು , ಹಿಂದೂ ದೇವಾಲಯದ ವಾಸ್ತುಶಿಲ್ಪ ಕೂಡ ಪತ್ತೆಯಾಗಿವೆ. ಹಿಂದೂ ದೇಗುಲದ ಕೆತ್ತನೆಯು ಗೋಡೆಯಲ್ಲಿ ಪತ್ತೆಯಾಗಿದೆ. ಕಂಬ, ಗೋಡೆಗಳು ಹಿಂದೂ ದೇವಾಲಯದ ಕೆತ್ತನೆಯನ್ನು ಹೊಂದಿವೆ. ಮಸೀದಿ ಕೆಲ ಗೋಡೆಗಳಲ್ಲಿ ತ್ರಿಶೂಲ ಚಿಹ್ನೆ ಕೂಡ ಪತ್ತೆಯಾಗಿದೆ.
ಇವೆಲ್ಲವೂ ಜ್ಞಾನವಾಪಿ ಮಸೀದಿಯು ಈ ಹಿಂದೆ ಹಿಂದೂ ದೇವಾಲಯವೇ ಆಗಿತ್ತು ಎಂಬುದಕ್ಕೆ ಪುಷ್ಟಿ ನೀಡುತ್ತಿದೆ. ಹಿಂದೂ ಮಹಿಳಾ ಅರ್ಜಿದಾರರ ವಾದಕ್ಕೆ ಪುಷ್ಟಿ ನೀಡುತ್ತಿದೆ. ಹೀಗಾಗಿ ಹಿಂದೂ ಪರ ವಕೀಲರು ಕೂಡ ಶಿವಲಿಂಗ ಪತ್ತೆಯಾಗಿರುವ ಸ್ಥಳವನ್ನು ಸಂರಕ್ಷಿಸಬೇಕು. ಅಲ್ಲಿ ವಜುಖಾನಾ ಮಾಡಲು ಅವಕಾಶ ಕೊಡಬಾರದು ಎಂದು ಕೋರ್ಟ್ ಗೆ ಮನವಿ ಮಾಡಿದ್ದರು. ಈಗಾಗಲೇ ಸುಪ್ರೀಂಕೋರ್ಟ್ ಕೂಡ ಶಿವಲಿಂಗ ಪತ್ತೆಯಾದ ಸ್ಥಳವನ್ನ ಸಂರಕ್ಷಿಸಬೇಕೆಂದು ವಾರಾಣಾಸಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಕೋರ್ಟ್ ಕಮೀಷನರ್ ಗಳ ಸರ್ವೇ ವಿಡಿಯೋದ ಆಧಾರದ ಮೇಲೆಯೇ ಹಿಂದೂ ಪರ ವಕೀಲರು ವಾರಾಣಾಸಿ ಕೋರ್ಟ್ ನಲ್ಲಿ ವಾದಿಸಲಿದ್ದಾರೆ. ಮಸೀದಿಯ ಜಾಗವನ್ನ ಹಿಂದೂಗಳಿಗೆ ನೀಡಬೇಕು ಎಂದು ವಾದಿಸುವುದಕ್ಕೆ ಈಗ ಹೆಚ್ಚಿನ ಬಲ ಬಂದಿದೆ.
ಸರ್ವೇ ವಿಡಿಯೋ ಸೋರಿಕೆ ವಿರುದ್ಧ ಅರ್ಜಿ
ಸರ್ವೇಯ ವಿಡಿಯೋ ಮಾಧ್ಯಮಗಳಿಗೆ ಸೋರಿಕೆಯಾಗಿದ್ದರ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ವಿಡಿಯೋ ಸೋರಿಕೆಯ ಬಗ್ಗೆ ಸಿಬಿಐ ತನಿಖೆಯಾಗಬೇಕೆಂದು ಮುಸ್ಲಿಂ ಸಮುದಾಯದ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಈ ಅರ್ಜಿಯನ್ನು ಜುಲೈ 4 ರಂದು ವಿಚಾರಣೆ ನಡೆಸುವುದಾಗಿ ವಾರಾಣಾಸಿಯ ಜಿಲ್ಲಾ ಕೋರ್ಟ್ ಹೇಳಿದೆ. ಆದರೇ, ಹಿಂದೂ ಪರ ವಕೀಲರು ತಾವು ಸರ್ವೇ ವಿಡಿಯೋವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿಲ್ಲ. ಸರ್ವೇ ವಿಡಿಯೋ ಇನ್ನೂ ಸೀಲ್ ಆಗಿಯೇ ಇದೆ. ಈ ಸೀಲ್ ಸಹಿತ ಸರ್ವೇ ವಿಡಿಯೋವನ್ನು ಮತ್ತೆ ಕೋರ್ಟ್ ಗೆ ಸಲ್ಲಿಸುತ್ತೇವೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾರೆ. ಸರ್ವೇ ವಿಡಿಯೋ ಮಾಧ್ಯಮಗಳಿಗೆ ಸೋರಿಕೆಯ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾರೆ.
Published On - 8:45 pm, Tue, 31 May 22