ರಾಜ್ಯಸಭೆಗೆ ಹೊರ ರಾಜ್ಯದವರ ಆಯ್ಕೆಗೆ ಬೇಸರ ವ್ಯಕ್ತಪಡಿಸಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀನಾಮೆ
ದು ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಅನ್ಯಾಯ ಎಂದು ಕರೆದಿರುವ ದೇಶ್ಮುಖ್, ಉತ್ತರ ಪ್ರದೇಶದ ನಾಯಕ ಇಮ್ರಾನ್ ಪ್ರತಾಪ್‌ಘರ್ಹಿ ಅವರನ್ನು ಮಹಾರಾಷ್ಟ್ರದಿಂದ ಪಕ್ಷ ಆಯ್ಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಂಬೈ: ರಾಜ್ಯಸಭೆ ಚುನಾವಣೆಯಲ್ಲಿ (Rajya Sabha) ಹೊರಗಿನವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿ ಮಹಾರಾಷ್ಟ್ರದ (Maharashtra) ಕಾಂಗ್ರೆಸ್ ನಾಯಕ ಆಶಿಶ್ ದೇಶ್ಮುಖ್ (Ashish Deshmukh) ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಅನ್ಯಾಯ ಎಂದು ಕರೆದಿರುವ ದೇಶ್ಮುಖ್, ಉತ್ತರ ಪ್ರದೇಶದ ನಾಯಕ ಇಮ್ರಾನ್ ಪ್ರತಾಪ್‌ಘರ್ಹಿ ಅವರನ್ನು ಮಹಾರಾಷ್ಟ್ರದಿಂದ ಪಕ್ಷ ಆಯ್ಕೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಮತ್ತೋರ್ವ ಹಿರಿಯ ಕಾಂಗ್ರೆಸ್ ನಾಯಕಿ ನಗ್ಮಾ ನಿನ್ನೆ ಪ್ರತಾಪ್‌ಘರ್ಹಿಯನ್ನು ಮೇಲ್ಮನೆಗೆ ಆಯ್ಕೆ ಮಾಡಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. “ಹೊರಗಿನ ಅಭ್ಯರ್ಥಿಯನ್ನು ತರುವುದರಿಂದ ಪಕ್ಷಕ್ಕೆ ಬೆಳವಣಿಗೆಯ ದೃಷ್ಟಿಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದು ಮಹಾರಾಷ್ಟ್ರದ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಡುವ ಅನ್ಯಾಯ ಎಂದು ಅವರು ಹೇಳಿದರು. ಅದೇ ವೇಳೆ ತಾವು ಕಾಂಗ್ರೆಸ್ ಪಕ್ಷದೊಂದಿಗೆ “ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ” ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಸೋಮವಾರ ಬಿಡುಗಡೆ ಮಾಡಿದೆ. ಅದರಲ್ಲಿ 34ರ ಹರೆಯದ ಕವಿ,ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಘರ್ಹಿ ಅವರ ಹೆಸರು ನೋಡಿ ಕಾಂಗ್ರೆಸ್ಸಿಗರೇ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
2019ರಲ್ಲಿ ಪ್ರತಾಪ್‌ಘರ್ಹಿ ಕಾಂಗ್ರೆಸ್ ಟಿಕೆಟ್ ನಿಂದ ಮೊರಾದಬಾದ್ ನಲ್ಲಿ ಲೋಕಸಭಾ ಚುನಾವಣೆ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಮುಂದೆ ಸೋತಿದ್ದರು. ಸ್ಥಳೀಯ ನಾಯಕರನ್ನು ಕಣಕ್ಕಿಳಿಸುವುದು ಪಕ್ಷವನ್ನು ಬಲಪಡಿಸುತ್ತಿತ್ತು. ಆದರೆ ನಾಯಕತ್ವವು ಬೇರೆ ರಾಜ್ಯದಿಂದ ನಾಯಕರನ್ನು ತಂದಿದೆ ಎಂದು ದೇಶ್ಮುಖ್ ವಾದಿಸಿದ್ದಾರೆ.
SoniaJi our Congress president had personally committed to accommodating me in RS in 2003/04 whn I joined Congressparty on her behest we weren’t in power thn.Since then it’s been 18Yrs they dint find an opportunity Mr Imran is accommodated in RS frm Maha I ask am I less deserving
— Nagma (@nagma_morarji) May 30, 2022
ರಾಜಸ್ಥಾನ ಮೂಲದ ಪವನ್ ಖೇಡಾ ಅವರ ಹೆಸರು ಕೂಡಾ ರಾಜ್ಯಸಭಾ ಪಟ್ಟಿಯಲ್ಲಿ ಇರಲಿಲ್ಲ. ಈ ಬಗ್ಗೆ ಅವರು”ನನ್ನ ತಪಸ್ಸಿನಲ್ಲಿ ಏನಾದರೂ ಕೊರತೆಯಿದೆ” ಎಂದು ಸೋಮವಾರ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ನಗ್ಮಾ ನನ್ನ ಬದಲು ಪ್ರತಾಪ್‌ಘರ್ಹಿ ಅವರನ್ನು ಪರಿಗಣಿಸಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ. ಇಮ್ರಾನ್ ಭಾಯ್ ಮುಂದೆ ನಮ್ಮ 18 ವರ್ಷಗಳ ತಪಸ್ಸು ಕೂಡ ಕಡಿಮೆಯಾಯಿತು’ ಎಂದಿದ್ದಾರೆ ನಗ್ಮಾ.
ನಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ ಅವರು 2003/04 ರಲ್ಲಿ ನನಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸಲು ವೈಯಕ್ತಿಕವಾಗಿ ಬದ್ಧರಾಗಿದ್ದರು. ಅವರ ಆದೇಶದ ಮೇರೆಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ನಾವು ಅಧಿಕಾರದಲ್ಲಿ ಇರಲಿಲ್ಲ. ಅಂದಿನಿಂದ 18 ವರ್ಷಗಳು ಕಳೆದಿವೆ, ನನಗೆ ಅವಕಾಶ ಸಿಕ್ಕಿಲ್ಲ, ಇಮ್ರಾನ್‌ಗೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ. ನನ್ನ ಅರ್ಹತೆಯೇನು ಕಡಿಮೆಯೇ ಎಂದು ನಾನು ಕೇಳುತ್ತಿದ್ದೇನೆ ಎಂದು ನಗ್ಮಾ ಟ್ವೀಟ್ ಮಾಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:15 pm, Tue, 31 May 22