ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ (Sidhu Moose Wala) ಅವರ ಭೀಕರ ಕೊಲೆ ಅಲ್ಲಿನ ಬಹಳಷ್ಟು ಕಲಾವಿದರಲ್ಲಿ, ಗಾಯಕರಲ್ಲಿ ಭೀತಿ ಮತ್ತು ಆತಂಕ ಮೂಡಿಸಿದೆ. ಮನ್ಕೀರತ್ ಔಲಾಖ್ (Mankirt Aulakh) ಹೆಸರಿನ ಮತ್ತೊಬ್ಬ ಗಾಯಕ ತನಗೂ ಬೆದರಿಕೆ ಕರೆಗಳು ಬರುತ್ತಿವೆ ಅಂತ ಹೇಳಿ ಭದ್ರತೆ ಕೋರಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ 31-ವರ್ಷ ವಯಸ್ಸಿನ ಮನ್ಕೀರತ್ ತನಗೆ ಜೀವ ಬೆದರಿಕೆ ಇರುವುದರಿಂದ ಸೆಕ್ಯುರಿಟಿ ಹೆಚ್ಚಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮೂಸಾ ಕೊಲೆಯ ಹೊಣೆ ಹೊತ್ತಿರುವ ಲಾರೆನ್ ಬಿಷ್ಣೋಯಿಯ (Lawrence Bishnoi) ಎದುರಾಳಿ ಗ್ಯಾಂಗ್ ದೇವಿಂದರ್ ಬಂಭಿಹಾನ ಗ್ಯಾಂಗ್ ನಿಂದ ಮನ್ಕೀರತ್ ಅವರಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮೂಲಗಳಿಂದ ಗೊತ್ತಾಗಿದೆ.
ಪಂಜಾಬ್ ಸರ್ಕಾರವು ಸಿಧು ಮೂಸೆ ವಾಲಾಗೆ ನೀಡಿದ ಭದ್ರತೆಯನ್ನು ಕೊಂಚ ಕಡಿಮೆ ಮಾಡಿದ ಮರುದಿನವೇ ರಾಜ್ಯದ ಮಾನಸ ಜಿಲ್ಲೆಯಲ್ಲಿ ತಮ್ಮ ಎಸ್ ಯುವಿ ಒಂದನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ಮೂಸೆವಾಲಾ ಮೇಲೆ ಸ್ವಯಂಚಾಲಿತ ರೈಫಲ್ ಒಂದರಿಂದ 30 ಸುತ್ತು ಗುಂಡು ಹಾರಿಸಲಾಗಿತ್ತು.
ಕೆನಡಾನಲ್ಲಿ ನೆಲೆಸಿರುವ ಗೋಲ್ಡಿ ಬ್ರಾರ್ ಹೆಸರಿನ ಗ್ಯಾಂಗ್ ಸ್ಟರ್ ಮೂಸೆ ವಾಲಾ ಅವರು ಹತ್ಯೆಯ ಹೊಣೆ ಹೊತ್ತಿದ್ದಾನೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆ ನಿಕಟ ಸಂಪರ್ಕ ಹೊಂದಿರುವ ಬ್ರಾರ್, ಇನ್ನೊಬ್ಬ ಗ್ಯಾಂಗ್ಸ್ಟರ್ ವಿಕ್ಕಿ ಮಿದ್ದುಖೇರಾ ಸಾವಿನ ಸೇಡು ತೀರಿಸಿಕೊಳ್ಳಲು ಮೂಸೆ ವಾಲಾರನ್ನು ಹತ್ಯೆ ಮಾಡಿಸಿರುವುದಾಗಿ ತನ್ನ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಹೇಳಿಕೊಂಡಿದ್ದಾನೆ.
ಮನ್ಕೀರತ್ ಔಲಾಖ್ ಅವರಿಗೆ ಈ ಗ್ಯಾಂಗಿನ ಪ್ರತಿಸ್ಪರ್ಧಿಯಾಗಿರುವ ದೇವಿಂದರ್ ಬಾಂಭಿಹಾನ ಗ್ಯಾಂಗ್ ನಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ವರದಿಯಾಗಿದೆ. ಚಂಡೀಗಢ್, ಮೊಹಾಲಿ ಮತ್ತು ಪಂಚಕುಲಾನಲ್ಲಿ ದೇವಿಂದರ್ ಬ್ಲ್ಯಾಕ್ ಮೇಕ್ ಮತ್ತು ಬೆದರಿಕೆ ಮೂಲಕ ಜನರಿಂದ ಹಣ ಸುಲಿಗೆ ಮಾಡುವ ರಾಕೆಟ್ ನಡೆಸುತ್ತಿದ್ದ ಮತ್ತು 2016 ರಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮರಣವನ್ನಪ್ಪಿದ್ದ.
ದೇವಿಂದರ್ ಸಾವಿನ ಬಳಿಕ ಅವನ ಸಹಚರರಾದ ದಿಲ್ಪ್ರೀತ್ ಮತ್ತು ಸುಖ್ಪ್ರೀತ್ ಅಲಿಯಸ್ ಬುದ್ಧಾ ಜೈಲಿನಲ್ಲಿದ್ದುಕೊಂಡೇ ಗ್ಯಾಂಗ್ ನ ನಿರ್ವಹಣೆ ಮಾಡುತ್ತಿದ್ದಾರೆ.
ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ನ್ಯಾಯಾಲಯವೊದರಲ್ಲಿ ನಡೆದ ಶೂಟ್ ಔಟ್ ನಲ್ಲಿ ಗ್ಯಾಂಗ್ಸ್ಟರ್ ಜೆತೆಂದರ್ ಗೋಗಿಯ ಹತ್ಯೆ ನಿಯೋಜಿಸಿದ್ದು ಬಾಂಭಿಹಾ ಗ್ಯಾಂಗ್ ಸದಸ್ಯರು ಎಂದು ಹೇಳಲಾಗುತ್ತಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.