Gyanvapi masjid controversy: ಕೋರ್ಟ್ ನೇಮಿಸಿದ ಕಮೀಷನರುಗಳಿಂದ ವಿಡಿಯೋ ಸರ್ವೇ ನಾಳೆ ಆರಂಭ, ಪ್ರಕ್ರಿಯೆ ಹೇಗೆ ನಡೆಯಲಿದೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: May 13, 2022 | 5:28 PM

ಕೋರ್ಟ್ ಕಮೀಷನರ್ ಆಗಿ ನೇಮಕಗೊಂಡಿದ್ದ ಅಜಯ ಮಿಶ್ರಾ ಜೊತೆಗೆ ಇನ್ನಿಬ್ಬರನ್ನು ಕಮೀಷರ್ ಗಳಾಗಿ ಕೋರ್ಟ್ ನೇಮಿಸಿದೆ. ಹೀಗಾಗಿ ಇಂದಿನಿಂದಲೇ ಕಾಶೀ ವಿಶ್ವನಾಥ್ ದೇವಾಲಯದ ಪಕ್ಕದ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಗ್ರಾಫಿ ಸಹಿತ ಸರ್ವೇ ನಡೆಯುವ ನಿರೀಕ್ಷೆ ಇತ್ತು. ಆದರೇ, ವಾರಾಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಮಿಶ್ರಾ ವಿವಾದಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೂ ಇಂದು ಸಭೆ ನಡೆಸಿದ್ದಾರೆ.

Gyanvapi masjid controversy: ಕೋರ್ಟ್ ನೇಮಿಸಿದ ಕಮೀಷನರುಗಳಿಂದ ವಿಡಿಯೋ ಸರ್ವೇ ನಾಳೆ ಆರಂಭ, ಪ್ರಕ್ರಿಯೆ ಹೇಗೆ ನಡೆಯಲಿದೆ ಗೊತ್ತಾ?
ಜ್ಞಾನವಾಪಿ ಮಸೀದಿ: ಕೋರ್ಟ್ ನೇಮಿಸಿದ ಕಮೀಷನರುಗಳಿಂದ ವಿಡಿಯೋ ಸರ್ವೇ ನಾಳೆ ಆರಂಭ, ಪ್ರಕ್ರಿಯೆ ಹೇಗೆ ನಡೆಯಲಿದೆ ಗೊತ್ತಾ?
Follow us on

ಉತ್ತರ ಪ್ರದೇಶದ ವಾರಾಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೇ ವಿವಾದ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಆದರೆ, ಸುಪ್ರೀಂಕೋರ್ಟ್, ಮಸೀದಿಯ ಸರ್ವೇಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ನೀಡಬೇಕೆಂಬ ಮನವಿಯನ್ನು ತಕ್ಷಣವೇ ಪುರಸ್ಕರಿಸಿಲ್ಲ. ಮತ್ತೊಂದೆಡೆ ಸ್ಥಳೀಯ ನ್ಯಾಯಾಲಯದ ಆದೇಶದ ಪ್ರಕಾರ, ನಾಳೆಯಿಂದ ಜ್ಞಾನವಾಪಿ ಮಸೀದಿಯಲ್ಲಿ ಕೋರ್ಟ್ ನೇಮಿಸಿದ ಕಮೀಷನರ್ ಗಳಿಂದ ಸರ್ವೇ ಕಾರ್ಯ ಆರಂಭವಾಗಲಿದೆ.

ನಾಳೆಯಿಂದ ಮಸೀದಿಯ ವಿಡಿಯೋಗ್ರಫಿ ಸರ್ವೇ
ಅಯೋಧ್ಯೆ, ಕಾಶೀ, ಮಥುರಾ ಮೂರು ಕೂಡ ಬಿಜೆಪಿಯ ಅಜೆಂಡಾದಲ್ಲಿರುವ ಪುಣ್ಯ ಕ್ಷೇತ್ರಗಳು. ಈಗಾಗಲೇ ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ವಿವಾದ ಸುಪ್ರೀಂಕೋರ್ಟ್ ತೀರ್ಪಿನಿಂದ ಬಗೆಹರಿದಿದೆ. ಈಗ ಕಾಶೀ, ಮಥುರಾ ಮಾತ್ರ ಬಾಕಿ ಇವೆ. ಈಗ ಕಾಶೀಯ ಮಹಿಳಾ ಭಕ್ತರೇ ಸ್ಥಳೀಯ ಕೋರ್ಟ್ ನಲ್ಲಿ ಕಾಶೀ ವಿಶ್ವನಾಥ ದೇವಾಲಯದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿ ಇದೆ. ಇದರ ಪೂಜೆಗೆ ಅವಕಾಶ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರಿಂದ ಇದನ್ನ ಸರಿಯಾಗಿ ತಿಳಿದುಕೊಳ್ಳಲು ಸ್ಥಳೀಯ ಕೋರ್ಟ್, ನಿನ್ನೆ ಮತ್ತೊಮ್ಮೆ ಕೋರ್ಟ್ ನೇಮಿಸಿರುವ ಕಮೀಷನರ್ ಗಳಿಂದ ಸರ್ವೇಗೆ ಆದೇಶ ನೀಡಿದೆ.

ಕೋರ್ಟ್ ಕಮೀಷನರ್ ಆಗಿ ನೇಮಕಗೊಂಡಿದ್ದ ಅಜಯ ಮಿಶ್ರಾ ಜೊತೆಗೆ ಇನ್ನಿಬ್ಬರನ್ನು ಕಮೀಷರ್ ಗಳಾಗಿ ಕೋರ್ಟ್ ನೇಮಿಸಿದೆ. ಹೀಗಾಗಿ ಇಂದಿನಿಂದಲೇ ಕಾಶೀ ವಿಶ್ವನಾಥ್ ದೇವಾಲಯದ ಪಕ್ಕದ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋ ಗ್ರಾಫಿ ಸಹಿತ ಸರ್ವೇ ನಡೆಯುವ ನಿರೀಕ್ಷೆ ಇತ್ತು. ಆದರೇ, ವಾರಾಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಮಿಶ್ರಾ ವಿವಾದಕ್ಕೆ ಸಂಬಂಧಪಟ್ಟ ಎಲ್ಲರೊಂದಿಗೂ ಇಂದು ಸಭೆ ನಡೆಸಿದ್ದಾರೆ. ಎಲ್ಲರೂ ಶಾಂತಿ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ನಾಳೆಯಿಂದ ಸರ್ವೇ ನಡೆಯಲಿದೆ ಎಂದು ವಾರಾಣಾಸಿ ಜಿಲ್ಲಾಧಿಕಾರಿ ಕೌಶಲ್ ರಾಜ್ ಮಿಶ್ರಾ ಹೇಳಿದ್ದಾರೆ. ನಾಳೆ ಕೋರ್ಟ್ ನಿಂದ ನೇಮಕಗೊಂಡ ಕಮೀಷನರ್ ಗಳು ಜ್ಞಾನವಾಪಿ ಮಸೀದಿಯಲ್ಲಿ ಶೃಂಗಾರ ಗೌರಿ ಸೇರಿದಂತೆ ಎಲ್ಲ ಸ್ಥಳಗಳ ವಿಡಿಯೋಗ್ರಾಫಿ ಸಹಿತ ಸರ್ವೇ ನಡೆಸಲಿದ್ದಾರೆ. ಈ ಸರ್ವೇಗೆ ಜಿಲ್ಲಾಡಳಿತ ಪೊಲೀಸ್ ಭದ್ರತೆ ಒದಗಿಸಲಿದೆ.

ಇದರ ಮಧ್ಯೆಯೇ ಇಂದು ಜ್ಞಾನವಾಪಿ ಮಸೀದಿಯ ಸರ್ವೇ ವಿವಾದವು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮಸೀದಿಯ ಆಡಳಿತ ಮಂಡಳಿ ಈ ಹಿಂದೆಯೇ ಅಲಹಾಬಾದ್ ಹೈಕೋರ್ಟ್ ನಲ್ಲಿ ಸ್ಥಳೀಯ ಕೋರ್ಟ್ ಸರ್ವೇ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿತ್ತು, ಆದರೇ ಹೈಕೋರ್ಟ್ ಸರ್ವೇಗೆ ತಡೆಯಾಜ್ಞೆ ನೀಡಿರಲಿಲ್ಲ. ಹೀಗಾಗಿ ಇಂದು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಹಿರಿಯ ವಕೀಲ ಹುಜೆಫಾ ಅಹ್ಮದಿ ಸುಪ್ರೀಂಕೋರ್ಟ್ ನ ಸಿಜೆ ಎನ್.ವಿ. ರಮಣ ಪೀಠದಲ್ಲಿ ಅರ್ಜಿಯ ಬಗ್ಗೆ ಪ್ರಸ್ತಾಪಿಸಿ ಮಸೀದಿಯ ಸರ್ವೇಗೆ ನೀಡಿರುವ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು. ಯಥಾಸ್ಥಿತಿ ಕಾಪಾಡಿಕೊಳ್ಳಲು ಆದೇಶ ನೀಡಬೇಕು. 1991ರ ಧಾರ್ಮಿಕ ಆಚರಣೆಯ ಸ್ಥಳಗಳ ಕಾಯಿದೆಗೆ ವಿರುದ್ಧವಾಗಿ ಸರ್ವೇಗೆ ಆದೇಶ ನೀಡಲಾಗಿದೆ.

ಇಂದೇ ಸರ್ವೇ ಆರಂಭವಾಗುತ್ತೆ ಎಂದು ಹುಜೆಫಾ ಅಹ್ಮದಿ ಸುಪ್ರಿಂಕೋರ್ಟ್ ಸಿಜೆ ಅವರಿಗೆ ಮನವಿ ಮಾಡಿದ್ದರು. ಆದರೇ, ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಎನ್.ವಿ. ರಮಣ, ಇದರ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನಾವು ನೀವು ಸಲ್ಲಿಸಿರುವ ಅರ್ಜಿಯನ್ನು ನೋಡುತ್ತೇವೆ. ಅರ್ಜಿಯ ಬಗ್ಗೆ ತಿಳಿದುಕೊಳ್ಳದೇ ನಾವು ಹೇಗೆ ಆದೇಶ ನೀಡಲಿ ಎಂದು ಮರುಪ್ರಶ್ನಿಸಿದ್ದರು. ಆದರೇ, ಅರ್ಜಿಯನ್ನು ವಿಚಾರಣಾ ಕೇಸ್ ಗಳ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಹಿರಿಯ ವಕೀಲ ಹುಜೆಫಾ ಅಹ್ಮದಿ ಮನವಿ ಮಾಡಿದ್ದರು. ಆಗ ಅರ್ಜಿಯನ್ನು ವಿಚಾರಣಾ ಕೇಸ್ ಗಳ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಸುಪ್ರೀಂಕೋರ್ಟ್ ಸಿಜೆ ಹೇಳಿದ್ದಾರೆ.

ಇಂದು ಜ್ಞಾನವಾಪಿ ಮಸೀದಿಯ ಸರ್ವೇಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಜೊತೆಗೆ ಯಥಾ ಸ್ಥಿತಿ ಕಾಪಾಡಿಕೊಳ್ಳಬೇಕೆಂಬ ಮನವಿಯನ್ನು ಪುರಸ್ಕರಿಸಿ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ ನಾಳೆ ನಿಗದಿಯಂತೆ ಜ್ಞಾನವಾಪಿ ಮಸೀದಿಯ ಸರ್ವೇ ಕಾರ್ಯವನ್ನು ಕೋರ್ಟ್ ನಿಂದ ನೇಮಕಗೊಂಡ ಕಮೀಷನರ್ ಗಳು ನಡೆಸಲು ಯಾವುದೇ ಅಡ್ಡಿ ಇಲ್ಲ. ವಾರಾಣಾಸಿ ಸ್ಥಳೀಯ ಕೋರ್ಟ್ ಮೇ, 17ರೊಳಗೆ ಸರ್ವೇ ಪೂರ್ಣಗೊಳಿಸಿ ವರದಿ ಸಲ್ಲಿಸಲು ಕಮೀಷನರ್ ಗಳಿಗೆ ಸೂಚಿಸಿದೆ. ನಾಳೆಯಿಂದ ಸರ್ವೇ ಆರಂಭಿಸಿ ಮೂರು ದಿನಗಳಲ್ಲಿ ಸರ್ವೇ ಪೂರ್ಣಗೊಳಿಸಿ ಕೋರ್ಟ್ ಗೆ ವರದಿ ಸಲ್ಲಿಸಬೇಕಾಗಿದೆ.