ಕಾಶ್ಮೀರಿ ಪಂಡಿತ್ ರಾಹುಲ್ ಭಟ್ನನ್ನು ಕೊಂದಿದ್ದ ಇಬ್ಬರು ಉಗ್ರರು ಸೇರಿ ಮೂವರು ಭಯೋತ್ಪಾದಕರ ಎನ್‌ಕೌಂಟರ್
ಇಂದು ಬಂಡಿಪೊರಾದ ಬ್ರಾರ್ ಅರಗಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಹುಲ್ ಭಟ್ನನ್ನು ಕೊಂದ ಇಬ್ಬರು ಉಗ್ರರು ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ನಲ್ಲಿ ಗುರುವಾರ ನಡೆದ ಉಗ್ರರ ದಾಳಿಯಲ್ಲಿ ಕಾಶ್ಮೀರಿ ಪಂಡಿತ್ (Kashmiri Pandit) ಸಮುದಾಯದ ರಾಹುಲ್ ಭಟ್ನನ್ನು ಹತ್ಯೆ ಮಾಡಲಾಗಿತ್ತು. ಇಂದು ಬಂಡಿಪೊರಾದ ಬ್ರಾರ್ ಅರಗಮ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಹುಲ್ ಭಟ್ನನ್ನು ಕೊಂದ ಇಬ್ಬರು ಉಗ್ರರು ಸೇರಿದಂತೆ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಈ ಮೂವರಲ್ಲಿ ಇಬ್ಬರು ಗುರುವಾರ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಮೇಲಿನ ದಾಳಿಯಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರದ ಪೊಲೀಸರು ಶುಕ್ರವಾರ ಮಧ್ಯಾಹ್ನ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಬಂಡಿಪೊರಾದ ಬ್ರಾರ್ (ಅರಗಮ್) ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಹೆಚ್ಚಿನ ವಿವರಗಳನ್ನು ತಿಳಿಸಲಾಗುವುದು.” ಎಂದು ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಸಲಿಂದರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು. ಇನ್ನಿಬ್ಬರು ಪಾರಾಗಿದ್ದಾರೆ. ಕಾಶ್ಮೀರದ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರಕಾರ, ಬುಧವಾರ ತಪ್ಪಿಸಿಕೊಂಡ ಇಬ್ಬರು ಶುಕ್ರವಾರದ ಎನ್‌ಕೌಂಟರ್‌ನಲ್ಲಿ ಸಿಕ್ಕಿಬಿದ್ದಿದ್ದರು.
#Encounter has started at Brar (Aragam), area of #Bandipora. Police and security forces are on the job. Further details shall follow.@JmuKmrPolice
— Kashmir Zone Police (@KashmirPolice) May 13, 2022
“ಮೇ 11ರಂದು ಸಲೀಂದರ್ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಇತ್ತೀಚೆಗೆ ನುಸುಳಿದ್ದಾರೆ” ಎಂದು ಅಧಿಕಾರಿ ತಿಳಿಸಿದ್ದಾರೆ.
ಗುರುವಾರ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ನೌಕರನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಹುಲ್ ಭಟ್ ಎಂಬ ಕಾಶ್ಮೀರಿ ಪಂಡಿತ್ನನ್ನು ನಂತರ ಶ್ರೀನಗರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ‘ಕಾಶ್ಮೀರ ಟೈಗರ್ಸ್’ ಉಗ್ರಗಾಮಿ ಸಂಘಟನೆ ತಾವೇ ಈ ದಾಳಿಯನ್ನು ನಡೆಸಿದ್ದಾಗಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ