Terrorist Attack: ಬದ್ಗಾಮ್ನ ಸರ್ಕಾರಿ ಕಚೇರಿಯಲ್ಲಿ ಉಗ್ರರ ದಾಳಿ; ಕಾಶ್ಮೀರಿ ಪಂಡಿತನ ಹತ್ಯೆ
ಬದ್ಗಾಮ್ನಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಎಂಬ ನೌಕರನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ, ಕೊಲೆ ಮಾಡಿದ್ದಾರೆ.
ಬದ್ಗಾಮ್: ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ (Budgam) ಜಿಲ್ಲೆಯಲ್ಲಿ ಇಂದು ಮಧ್ಯಾಹ್ನ ಕಂದಾಯ ಇಲಾಖೆಯ ನೌಕರನ ಮೇಲೆ ಉಗ್ರರು (Terrorist Attack) ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾಶ್ಮೀರಿ ಪಂಡಿತ್ನನ್ನು ನಂತರ ಶ್ರೀನಗರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯನ್ನು ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಎಂದು ಗುರುತಿಸಲಾಗಿದೆ.
‘ಕಾಶ್ಮೀರ ಟೈಗರ್ಸ್’ ಉಗ್ರಗಾಮಿ ಸಂಘಟನೆ ತಾವೇ ಈ ದಾಳಿಯನ್ನು ನಡೆಸಿದ್ದಾಗಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಘಟನೆಯ ನಂತರ ಕಾಶ್ಮೀರ ವಲಯದ ಪೊಲೀಸರು ಟ್ವೀಟ್ ಮಾಡಿದ್ದಾರೆ. ಬದ್ಗಾಮ್ನಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ರಾಹುಲ್ ಭಟ್ ಎಂಬ ನೌಕರನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ.” ಎಂದು ಕಾಶ್ಮೀರದ ಪೊಲೀಸ್ ಇಲಾಖೆ ತಿಳಿಸಿದೆ.
ಈ ಘಟನೆಯ ನಂತರ, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ, ಕಾಶ್ಮೀರದ ಜನರಿಗೆ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಭದ್ರತೆಯನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
#Terrorists fired upon one employee namely Shri Rahul Bhat from #minority community in Tehsildar office Chadoora, #Budgam. He has been shifted to hospital.@JmuKmrPolice
— Kashmir Zone Police (@KashmirPolice) May 12, 2022
“ಕಾಶ್ಮೀರಿ ಪಂಡಿತ್ ಹತ್ಯೆಯ ಬಗ್ಗೆ ಕೇಳಿ ತುಂಬಾ ದುಃಖವಾಗಿದೆ. ಈ ಹತ್ಯೆಯು ಇತರರಲ್ಲಿ ಭಯವನ್ನು ಉಂಟುಮಾಡುತ್ತದೆ. ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ಕಾಶ್ಮೀರದ ನಕಲಿ ಗುಲಾಬಿ ಚಿತ್ರವನ್ನು ಪ್ರಸ್ತುತಪಡಿಸುವಲ್ಲಿ ಸರ್ಕಾರ ನಿರತವಾಗಿದೆ. ಕಾಶ್ಮೀರದಲ್ಲಿ ಏನೂ ಸರಿಯಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಶ್ವನಿ ಹಂಡಾ, ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸಲು ವಿಫಲವಾದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಳೆದ ತಿಂಗಳು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟೋಗಾಮ್ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತ್ ಅಂಗಡಿಯವನ ಮೇಲೆ ಇಬ್ಬರು ಮೋಟಾರ್‌ಸೈಕಲ್‌ನಲ್ಲಿ ಬಂದ ಭಯೋತ್ಪಾದಕರು ಗುಂಡು ಹಾರಿಸಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕಾಶ್ಮೀರ ಕಣಿವೆಯು ಹಲವಾರು ನಾಗರಿಕ ಹತ್ಯೆಗಳಿಂದ ತತ್ತರಿಸಿತು, ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿರಿಸಿಕೊಂಡಿತ್ತು. ಪ್ರಮುಖ ಕಾಶ್ಮೀರಿ ಪಂಡಿತ್ ಮತ್ತು ಶ್ರೀನಗರದ ಅತ್ಯಂತ ಪ್ರಸಿದ್ಧ ಔಷಧಾಲಯದ ಮಾಲೀಕ ಮಖನ್ ಲಾಲ್ ಬಿಂದ್ರೂ ಅವರನ್ನು ಅಕ್ಟೋಬರ್ 5ರಂದು ಅವರ ಅಂಗಡಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಇದರ ಬೆನ್ನಲ್ಲೇ ಶ್ರೀನಗರದ ಬೀದಿ ಆಹಾರ ವ್ಯಾಪಾರಿ ವೀರೇಂದ್ರ ಪಾಸ್ವಾನ್ ಮತ್ತು ಸರ್ಕಾರಿ ಶಾಲೆಯ ಪ್ರಾಂಶುಪಾಲರಾದ ಸುಪಿಂದರ್ ಕೌರ್ ಸೇರಿದಂತೆ ಇತರರ ಸಾವು ಸಂಭವಿಸಿತ್ತು.
ಇತರೆ ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Thu, 12 May 22