ಇಂದು ದೇವೇಗೌಡರೊಟ್ಟಿಗೆ ಇಡ್ಲಿ-ವಡೆ ತಿಂದೆ ಎಂದ ಸುಬ್ರಹ್ಮಣಿಯನ್​ ಸ್ವಾಮಿ; ಗೌಡರು ರಾಜ್ಯಸಭಾ ಸೀಟ್​ ಭರವಸೆ ಕೊಟ್ಟರಾ ಎಂಬುದು ಪ್ರಶ್ನೆ !

| Updated By: Lakshmi Hegde

Updated on: Nov 30, 2021 | 4:04 PM

ಅಂದಹಾಗೆ ಇತ್ತೀಚೆಗೆಷ್ಟೇ ಸುಬ್ರಹ್ಮಣಿಯನ್​ ಸ್ವಾಮಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದರು. ಹಾಗೇ, ಮಮತಾ ಬ್ಯಾನರ್ಜಿಯವರನ್ನು ಸಿಕ್ಕಾಪಟೆ ಹೊಗಳಿದ್ದರು.

ಇಂದು ದೇವೇಗೌಡರೊಟ್ಟಿಗೆ ಇಡ್ಲಿ-ವಡೆ ತಿಂದೆ ಎಂದ ಸುಬ್ರಹ್ಮಣಿಯನ್​ ಸ್ವಾಮಿ; ಗೌಡರು ರಾಜ್ಯಸಭಾ ಸೀಟ್​ ಭರವಸೆ ಕೊಟ್ಟರಾ ಎಂಬುದು ಪ್ರಶ್ನೆ !
ಸುಬ್ರಹ್ಮಣಿಯನ್ ಸ್ವಾಮಿ ಮತ್ತು ಎಚ್​.ಡಿ.ದೇವೇಗೌಡ
Follow us on

ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ (H.D.Deve Gowda) ಇಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ(Subramanian Swamy)ಯವರನ್ನೂ ಭೇಟಿಯಾಗಿದ್ದಾರೆ. ದೇವೇಗೌಡರು ಸುಬ್ರಹ್ಮಣಿಯನ್​ ಸ್ವಾಮಿಯವರ ಭೇಟಿ ಮಾಡಿದ ವಿಷಯ ಗೊತ್ತಾಗಿದ್ದು ಸ್ವಾಮಿಯವರ ಟ್ವೀಟ್​ನಿಂದ. ಇಂದು ಬೆಳಗ್ಗೆ 10.40ರ ಹೊತ್ತಿಗೆ ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್​ ಸ್ವಾಮಿ, ನಾನು ಇಂದು ಮುಂಜಾನೆ, ನನ್ನ ಬಹುಕಾಲದ ಉತ್ತಮ ಸ್ನೇಹಿತರಾದ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದೆ. ಅವರು ಇಂದು ಬೆಳಗ್ಗೆ ಬ್ರೇಕ್​ಫಾಸ್ಟ್​ಗೆ ನನ್ನನ್ನು ಆಹ್ವಾನಿಸಿದ್ದರು. ಬ್ರೇಕ್​ ಫಾಸ್ಟ್​​ನಲ್ಲಿ ಇಡ್ಲಿ, ದೋಸಾ, ವಡಾ ಇತ್ತು. ಉಪಾಹಾರ ಸೇವಿಸುತ್ತ ಹಳೆಯ ದಿನಗಳ ಬಗ್ಗೆ, ಭವಿಷ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದೆವು ಎಂದು ಹೇಳಿದ್ದರು.

ಸುಬ್ರಹ್ಮಣಿಯನ್​ ಸ್ವಾಮಿಯವರ ಈ ಟ್ವೀಟ್​ಗಿಂತಲೂ ಅದಕ್ಕೆ ಬಂದ ಕಾಮೆಂಟ್​ಗಳೇ ಸುದ್ದಿಯಾಗಿವೆ. ಇವರಿಬ್ಬರ ಭೇಟಿಯನ್ನು ಜನರು ಹಗುರಾಗಿ ಭಾವಿಸಿದರಾ ಎಂಬ ಅನುಮಾನವೂ ಆ ಕಾಮೆಂಟ್​ಗಳನ್ನು ನೋಡಿದಾಕ್ಷಣ ಬಾರದೆ ಇರದು. ಇವರ ಟ್ವೀಟ್​ಗೆ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಸರ್​, ಸಾಂಬಾರ್ ಹೆಂಗಿತ್ತು? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ಇಡ್ಲಿ-ವಡಾ-ದೋಸಾ ನಿಜಕ್ಕೂ ಚಹಾಗಿಂತಲೂ ಉತ್ತಮ. ಯಾಕೆಂದರೆ ಚಹಾ ಮಾರಾಟವಾಗುವುದಿಲ್ಲ ಎಂದಿದ್ದಾರೆ. ಅದರಲ್ಲೂ ಇನ್ನೊಬ್ಬರಂತೂ ದೇವೇಗೌಡರು ನಿಮಗೆ ರಾಜ್ಯ ಸಭಾ ಸೀಟ್​ನ ಭರವಸೆ ಕೊಟ್ಟರಾ ಎಂದೂ ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ಸರ್​, ನಿಮ್ಮ ರಾಜ್ಯಸಭೆ ಸಂಸದನ ಅವಧಿ ಶೀಘ್ರದಲ್ಲೇ ಮುಗಿಯುತ್ತದೆ. ಹಾಗಾಗಿ ನೀವು ಬೇರೊಂದು ಅವಕಾಶ ಹುಡುಕುತ್ತಿದ್ದೀರಿ ಅಲ್ಲವಾ ಎಂದೂ ಕೇಳಿದ್ದಾರೆ.

ಬಹುತೇಕರಂತೂ ಸುಬ್ರಹ್ಮಣಿಯನ್​ ಸ್ವಾಮಿ ಇದೀಗ ರಾಜ್ಯಸಭಾ ಸಂಸದನ ಅವಧಿ ಮುಗಿದ ಬಳಿಕ ಏನು ಮಾಡುವುದು ಎಂಬ ಚಿಂತೆಯಲ್ಲೇ ಇದ್ದಾರೆ. ಹಾಗಾಗಿ ಎಲ್ಲ ಪಕ್ಷಗಳ ನಾಯಕರನ್ನೂ ಭೇಟಿಯಾಗುತ್ತಿದ್ದಾರೆ ಎಂದೇ ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ಸ್ವಾಮಿ ಸ್ವತಃ ಬಿಜೆಪಿ ಪಕ್ಷದವರಾದರೂ ಸದಾ ತಮ್ಮ ಸರ್ಕಾರ, ಪ್ರಧಾನಿ ಮೋದಿ ಆಡಳಿತವನ್ನು ಟೀಕಿಸುತ್ತಲೇ ಬಂದವರು. ಇತ್ತೀಚೆಗೆ ಕೂಡ ಮೋದಿ ಸರ್ಕಾರಕ್ಕೆ ರಿಪೋರ್ಟ್ ಕಾರ್ಡ್ ಕೊಟ್ಟ ಸುಬ್ರಹ್ಮಣಿಯನ್​ ಸ್ವಾಮಿ, ಪ್ರಧಾನಿ ಮೋದಿ ಸರ್ಕಾರ ತನ್ನ ಆಡಳಿತದ ಪ್ರತಿ ಕ್ಷೇತ್ರದಲ್ಲೂ ಫೇಲ್​ ಆಗಿದೆ ಎಂದಿದ್ದರು. ಹೀಗಾಗಿ ರಾಜ್ಯಸಭಾ ಅವಧಿ ಮುಗಿದ ಬಳಿಕ ಅವರಿಗೆ ಮತ್ತೆ ಬಿಜೆಪಿಯಲ್ಲಿ ಸ್ಥಾನ ಸಿಗುವುದಿಲ್ಲ. ಹಾಗಾಗಿ ಬೇರೆ ಪಕ್ಷ ನೋಡಿಕೊಳ್ಳುವ ಕಾತರ, ಹೋರಾಟದಲ್ಲಿಯೇ ಇದ್ದಾರೆ ಎಂಬುದು ನೆಟ್ಟಿಗರ ಮಾತಾಗಿದೆ.

ಅಂದಹಾಗೆ ಇತ್ತೀಚೆಗೆಷ್ಟೇ ಸುಬ್ರಹ್ಮಣಿಯನ್​ ಸ್ವಾಮಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದರು. ಹಾಗೇ, ಮಮತಾ ಬ್ಯಾನರ್ಜಿಯವರನ್ನು ಸಿಕ್ಕಾಪಟೆ ಹೊಗಳಿದ್ದರು. ಅಷ್ಟೇ ಅಲ್ಲ, ಅವರನ್ನು ಜಯಪ್ರಕಾಶ್​ ನಾರಾಯಣ್​, ಮೊರಾರ್ಜಿ ದೇಸಾಯಿ, ರಾಜೀವ್​ ಗಾಂಧಿಯವರೊಂದಿಗೆ ಹೋಲಿಸಿ, ಅಪರೂಪದ ರಾಜಕಾರಣಿ ಎಂದಿದ್ದರು. ನೀವು ಟಿಎಂಸಿ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಈಗಾಗಲೇ ಮಮತಾ ಬ್ಯಾನರ್ಜಿಯೊಂದಿಗೆ ಇದ್ದೇನೆ, ಮತ್ತೆ ಪಕ್ಷ ಸೇರುವ ಅಗತ್ಯವೇನಿಲ್ಲ ಎಂದೂ ಹೇಳಿದ್ದರು.

ಇದನ್ನೂ ಓದಿ: ಡಿಸೆಂಬರ್​ ಪೂರ್ತಿ ಮನರಂಜನೆಯ​ ಸುಗ್ಗಿ; ಪ್ರತಿ ವಾರವೂ ಬಿಗ್​ ರಿಲೀಸ್​: ಇಲ್ಲಿದೆ ಪೂರ್ತಿ ಲಿಸ್ಟ್​

Published On - 4:00 pm, Tue, 30 November 21