
ಮುಂಬೈ: ವಿಮಾನದಲ್ಲಿ ಎಕನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡು ಬ್ಯುಸಿನೆಸ್ ಕ್ಲಾಸ್ ಸೀಟು ಬೇಕೆಂದು ಪಟ್ಟುಹಿಡಿದು ವಿದೇಶೀ ಮಹಿಳೆಯೊಬ್ಬಳು ಅರೆನಗ್ನಳಾಗಿ (Semi Naked Lady) ಅಶ್ಲೀಲ ವರ್ತನೆ ತೋರಿದ ಘಟನೆ ಏರ್ ವಿಸ್ತಾರ ವಿಮಾನವೊಂದರಲ್ಲಿ ನಿನ್ನೆ ಸೋಮವಾರ ನಡೆದಿದೆ. ಏರ್ ವಿಸ್ತಾರದ ಯುಕೆ 256 ವಿಮಾನ ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದಾಗ ಈ ಘಟನೆ ನಡೆದಿರುವುದು ವರದಿಯಾಗಿದೆ. ಇಟಲಿಯ ಪಾವೊಲಾ ಪೆರಿಚಿಯೋ (Paola Perruccio) ಎಂಬ ಮಹಿಳೆ ಆರೋಪಿಯಾಗಿದ್ದು, ಸದ್ಯ ಈಕೆ ಬಂಧನವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ.
ವಿಮಾನದಲ್ಲಿ ಪಾವೊಲಾ ಅವರು ಎಕನಾಮಿ ಕ್ಲಾಸ್ ಟಿಕೆಟ್ (ಸಾಮಾನ್ಯ ದರ್ಜೆ) ಪಡೆದಿದ್ದರು. ತನಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಆಗಿ ಪರಿವರ್ತಿಸಿಕೊಡಬೇಕೆಂದು ಆಕೆ ವಿಮಾನದೊಳಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಸಿಬ್ಬಂದಿ ಒಪ್ಪದಿದ್ದಾಗ ಈ ಮಹಿಳೆ ಕೋಪೋದ್ರಿಕ್ತಗೊಂಡು ಹಲ್ಲೆ ಮಾಡಿ ಉಗುಳಿದ್ದಾರೆ. ನಂತರ ತನ್ನ ಕೆಲ ವಸ್ತ್ರಗಳನ್ನು ಕಳಚಿ ರಂಪಾಟ ಮಾಡಿದ್ದಾರೆ. ಅರೆನಗ್ನಳಾಗಿಯೇ ವಿಮಾನದೊಳಗೆ ಅಡ್ಡಾಡಿದ್ದಾರೆ. ಸಿಬ್ಬಂದಿ ಪ್ರಕಾರ ಈಕೆ ಕುಡಿದ ಮತ್ತಿನಲ್ಲಿದ್ದರೆನ್ನಲಾಗಿದೆ. ಈ ಘಟನೆ ಬಳಿಕ ಪೊಲೀಸರು ಈಕೆಯನ್ನು ಬಂಧಿಸಿದರಾದರೂ ಕೋರ್ಟ್ನಲ್ಲಿ ಜಾಮೀನು ಸಿಕ್ಕಿದೆ.
ವಿಮಾನದೊಳಗೆ ಇಂಥ ಹತ್ತು ಹಲವು ವಿಚಿತ್ರ ಘಟನೆಗಳು ಬಹಳಷ್ಟು ಬಾರಿ ವರದಿಯಾಗುತ್ತಿರುತ್ತವೆ. ಇತ್ತೀಚೆಗೆ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಘಟನೆ ಬಹಳ ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕ ಈ ವಿಮಾನ ಸಂಸ್ಥೆಯು ಮದ್ಯಸೇವನೆ ನಿಯಮಗಳಲ್ಲಿ ಬದಲಾವಣೆ ತಂದಿದೆ. ಪ್ರಯಾಣಿಕರು ತಾವು ತಂದ ಆಲ್ಕೋಹಾಲ್ ಸೇವನೆಗೆ ಅವಕಾಶ ಕೊಡಬಾರದು. ವಿಮಾನ ಸಿಬ್ಬಂದಿ ಕೊಡುವ ಮದ್ಯ ಮಾತ್ರ ಪ್ರಯಾಣಿಕರು ಸೇವಿಸಬಹುದು ಎನ್ನುವ ನಿಯಮ ಇದು.
Published On - 10:10 am, Tue, 31 January 23