Harappan Civilization Food Culture: ಹರಪ್ಪ ನಾಗರಿಕತೆ ಕಾಲದ 4000 ವರ್ಷಗಳ ಹಿಂದಿನ ಬಹುಧಾನ್ಯಗಳ ಲಾಡು ಪತ್ತೆ

|

Updated on: Mar 29, 2021 | 5:07 PM

4000 ವರ್ಷಗಳ ಹಿಂದಿನ ಹರಪ್ಪ ನಾಗರಿಕತೆ ಕಾಲದ ಬಹುಧಾನ್ಯಗಳ ಲಾಡು ಪತ್ತೆಯಾಗಿದೆ. ಭಾರತದ ಭವ್ಯ ಇತಿಹಾಸವನ್ನು ಗುರುತಿಸುವಲ್ಲಿ ಇದು ಪ್ರಮುಖವಾಗಲಿದೆ ಎಂದು ಇತಿಹಾಸತಜ್ಞರು ಅಭಿಪ್ರಾಯ ಪಡುತ್ತಾರೆ.

Harappan Civilization Food Culture: ಹರಪ್ಪ ನಾಗರಿಕತೆ ಕಾಲದ 4000 ವರ್ಷಗಳ ಹಿಂದಿನ ಬಹುಧಾನ್ಯಗಳ ಲಾಡು ಪತ್ತೆ
4000 ವರ್ಷಗಳಷ್ಟು ಹಳೆಯ ಹರಪ್ಪ ನಾಗರಿಕತೆ ಕಾಲದ ಲಾಡು (ಎಡ ಚಿತ್ರ) ಹರಪ್ಪ ನಾಗರಿಕತೆ ಉತ್ಖನನ ಪ್ರದೇಶ (ಬಲಚಿತ್ರ)
Follow us on

4000 ವರ್ಷಗಳ ಹಿಂದೆ ಹರಪ್ಪ ನಾಗರಿಕತೆಯ ಕಾಲದಲ್ಲಿ ಜೀವಿಸಿದ್ದ ಜನರು ಹೆಚ್ಚು ಪ್ರೊಟೀನ್​ಯುಕ್ತ, ಬಹುಧಾನ್ಯಗಳಿಂದ ಮಾಡಿದ ಲಾಡುಗಳನ್ನು ಸೇವಿಸುತ್ತಿದ್ದರು ಎಂಬ ಸಂಗತಿ ಅಧ್ಯಯನವೊಂದರಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ. ರಾಜಸ್ಥಾನದಲ್ಲಿ ಉತ್ಖನನ ನಡೆದಾಗ ಪತ್ತೆಯಾದ ಪದಾರ್ಥಗಳ ವೈಜ್ಞಾನಿಕ ಅಧ್ಯಯನ ವೇಳೆ ಈ ಸಂಗತಿ ಗೊತ್ತಾಗಿದೆ. ಬೀರಬಲ್ ಸಾಹ್ನಿ ಇನ್​ಸ್ಟಿಟ್ಯೂಟ್ ಆಫ್ ಪಾಲಿಯೋಸೈನ್ಸಸ್ (ಬಿಎಸ್​ಐಪಿ), ಲಖನೌ ಮತ್ತು ಭಾರತೀಯ ಪುರಾತತ್ವ ಇಲಾಖೆ (ಎಎಸ್​ಐ) ಜಂಟಿಯಾಗಿ ಅಧ್ಯಯನ ನಡೆಸಿದ್ದವು. ಈಚೆಗೆ ಪ್ರಕಟಿಸಿದ ಜರ್ನಲ್ ಆಫ್ ಆರ್ಕಿಯಾಲಜಿಕಲ್ ಸೈನ್ಸ್: ರಿಪೋರ್ಟ್ಸ್ ಬೈ ಎಲ್ಸ್​ವಿರ್​ನಿಂದ ವರದಿಯಲ್ಲಿ ಈ ಅಂಶ ಗೊತ್ತಾಗಿದೆ.

2014ರಿಂದ 2017ರ ಮಧ್ಯೆ ಪಶ್ಚಿಮ ರಾಜಸ್ಥಾನದ ಬಿಂಜೋರ್​ನಲ್ಲಿ (ಪಾಕಿಸ್ತಾನ ಗಡಿ ಸಮೀಪ) ಹರಪ್ಪ ಪ್ರಾಚ್ಯವಸ್ತು ಪ್ರದೇಶದಲ್ಲಿ ಉತ್ಖನನ ನಡೆಯಿತು. 2017ನೇ ಇಸವಿಯಲ್ಲಿ ಇಂಥ ಕನಿಷ್ಠ 7 ಲಾಡುಗಳು ಪತ್ತೆಯಾಗಿದ್ದವು. ಬಿಎಸ್​ಐಪಿ ಹಿರಿಯ ವಿಜ್ಞಾನಿ ರಾಜೇಶ್ ಅಗ್ನಿಹೋತ್ರಿ ಮಾತನಾಡಿ, ಏಳು ಇದೇ ರೀತಿಯ ದೊಡ್ಡ ಗಾತ್ರದ ಕಂದು ಬಣ್ಣದ ಲಾಡುಗಳಿದ್ದು, ಎತ್ತಿನ ಚಿತ್ರಗಳಿವೆ. ಜತೆಗೆ ಕೈಯಿಂದ ಮಾಡಿದ ತಾಮ್ರದ ಆಯುಧ (ಕೊಡಲಿ ಆಕಾರದ ಸಲಕರಣೆ, ಮರವನ್ನು ಕತ್ತರಿಸುವುದಕ್ಕೆ, ವಿವಿಧ ರೂಪ ನೀಡುವುದಕ್ಕೆ ಬಳಸುವಂಥವು) ಪುರಾತತ್ವ ಇಲಾಖೆಯ ಉತ್ಖನನದ ವೇಳೆಯಲ್ಲಿ ರಾಜಸ್ಥಾನದ ಅನುಪ್​ಗಢ ಜಿಲ್ಲೆಯ ಹರಪ್ಪ ಪ್ರದೇಶದಲ್ಲಿ ಪತ್ತೆಯಾದವು ಎಂದಿದ್ದಾರೆ.

ಕ್ರಿಸ್ತಪೂರ್ವ 2600ಕ್ಕೆ ಸೇರಿದಂಥ ಲಾಡುಗಳು
ಈ ಲಾಡುಗಳು ಕ್ರಿಸ್ತಪೂರ್ವ 2600ಕ್ಕೆ ಸೇರಿದಂಥವು. ಅವುಗಳನ್ನು ತುಂಬ ಚೆನ್ನಾಗಿ ಸಂರಕ್ಷಿಸಿಡಲಾಗಿತ್ತು. ಗಟ್ಟಿಯಾದ ವಸ್ತು ಅದರ ರಕ್ಷಣೆಗಾಗಿ ರಚಿಸಿದಂತೆ ಇತ್ತು. ಅದು ಪುಡಿಯಾಗುವುದರಿಂದ ರಕ್ಷಣೆ ನೀಡಿತ್ತು. ಇವುಗಳು ಮಣ್ಣಿನ ಜತೆಗೆ ಸಂಪರ್ಕಕ್ಕೆ ಬಂದಿದ್ದರೂ ಅದರ ಆಂತರಿಕ ಸಾವಯವ ಅಂಶಗಳು ಮತ್ತು ಇತರ ಹಸಿರು ಅಂಶಗಳು ಸಂರಕ್ಷಣೆಯಾಗಿದ್ದವು. ಇವುಗಳ ಬಗ್ಗೆ ಮತ್ತೊಂದು ಆಸಕ್ತಿಕರ ಸಂಗತಿ ಅವರು ತಿಳಿಸಿರುವುದು ಏನೆಂದರೆ, ನೀರಿನ ಜತೆಗೆ ಇವುಗಳ ಸಂಪರ್ಕ ಬಂದಾಗ ನೇರಳೆ ಬಣ್ಣಕ್ಕೆ ತಿರುಗುತ್ತದೆ. ಅಂದಹಾಗೆ ವೈಜ್ಞಾನಿಕ ವಿಶ್ಲೇಷಣೆಗಾಗಿ ಎಎಸ್​ಐನಿಂದ ಲಾಡುಗಳ ಸ್ಯಾಂಪಲ್ ಅನ್ನು ಬಿಎಸ್​ಐಪಿಗೆ ಹಸ್ತಾಂತರಿಸಲಾಗಿದೆ.

ಘಗ್ಗರ್ ನದಿ ದಡದಲ್ಲಿ (ಈ ಹಿಂದೆ ಸರಸ್ವತಿ ನದಿ) ಉತ್ಖನನ ಮಾಡಿದಾಗ ಸಿಕ್ಕ ಈ ಲಾಡುಗಳು ಹಾಗೂ ಸಮೀಪದಲ್ಲಿ ಇದ್ದ ಕೊಡಲಿ ಆಕಾರದ ಸಲಕರಣೆ ಮತ್ತು ಅದರ ಮೇಲಿದ್ದ ಎತ್ತುಗಳ ಆಕಾರದಿಂದ ಇದು ಯಾವುದೋ ನಿಗೂಢ ವಿದ್ಯೆಗೆ ಸಂಬಂಧಿಸಿದ್ದು ಎಂದು ಮೊದಲಿಗೆ ನಾವಂದುಕೊಂಡೆವು. ಅವುಗಳ ಆಕಾರದ ಕಾರಣಕ್ಕೆ ಮನುಷ್ಯರೇ ಮಾಡಿದ್ದು ಎಂಬುದು ತಿಳಿಯುತ್ತಿತ್ತು. ಆ ನಂತರ ಅವುಗಳನ್ನು ಯಾವುದರಿಂದ ಮಾಡಿದ್ದು ಎಂದು ತಿಳಿದುಕೊಳ್ಳುವುದಕ್ಕೆ ಉತ್ತೇಜಿಸಿದವು. ಮೊದಲಿಗೆ ಇದು ಮಾಂಸಾಹಾರ ಎಂದುಕೊಂಡಿದ್ದೆವು ಎಂದು ಅಗ್ನಿಹೋತ್ರಿ ಹೇಳಿದ್ದಾರೆ.

ಬಾರ್ಲಿ, ಗೋಧಿ, ಕಡಲೆ ಮತ್ತು ಇತರ ಎಣ್ಣೆ ಬೀಜಗಳಿಂದ ಮಾಡಿದ ಲಾಡು
ಪ್ರಾಥಮಿಕವಾಗಿ ನಡೆಸಿದ ತನಿಖೆ ಪ್ರಕಾ ಬಿಎಸ್​ಐಪಿ ಹಿರಿಯ ವಿಜ್ಞಾನಿ ಅಂಜುಮ್ ಫಾರೂಕಿ ಹೇಳುವಂತೆ, ಈ ಲಾಡುವನ್ನು ಬಾರ್ಲಿ, ಗೋಧಿ, ಕಡಲೆ ಮತ್ತು ಇತರ ಎಣ್ಣೆ ಬೀಜಗಳಿಂದ ಮಾಡಲಾಗಿದೆ. ಸಿಂಧೂ ನಾಗರಿಕತೆಯ ಆರಂಭದ ಜನರು ಕೃಷಿಕರಾಗಿದ್ದರು. ಇನ್ನು ಈಗಿನ ಉಂಡೆಗಳು ಮುಖ್ಯವಾಗಿ ಸಸ್ಯಾಹಾರಿ. ಜತೆಗೆ ಹೆಚ್ಚಿನ ಪ್ರೊಟೀನ್ ಅಂಶಗಳನ್ನು ಒಳಗೊಂಡಿದೆ ಎಂದಿದ್ದಾರೆ. ಬೇಳೆಕಾಳುಗಳು, ಪಿಷ್ಟ ಮತ್ತು ಪ್ರೊಟೀನ್ ಇರುವುದು ಮೆಗ್ನಿಷಿಯಂ, ಕ್ಯಾಲ್ಷಿಯಂ ಮತ್ತು ಪೊಟ್ಯಾಷಿಯಂ ಜಾಸ್ತಿ ಇರುವುದನ್ನು ಈಗ ಕಂಡುಹಿಡಿದಿರುವುದರಿಂದ ಖಾತ್ರಿಪಡಿಸಿದೆ. “ಈ ಲಾಡುಗಳಲ್ಲಿ ಬೇಳೆಕಾಳು, ಧಾನ್ಯಗಳು, ಹೆಸರು ಕಾಳು ಹೆಚ್ಚಾಗಿರುವುದು ಕಂಡುಬರುತ್ತದೆ,” ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಉಂಡೆಗಳ ಪೂರ್ತಿ ಸಾವಯವ ರಾಸಾಯನಿಕ ವಿಶ್ಲೇಷಣೆಯನ್ನು ಬಿಎಸ್​ಐಪಿ ಮತ್ತು ಲಖನೌದ ರಾಷ್ಟ್ರೀಯ ಜೈವಿಕ ಸಂಶೋಧನಾ ಸಂಸ್ಥೆಯಲ್ಲಿ (NBRI) ಮಾಡಲಾಗಿದೆ. ಒಂಬತ್ತು ವಿಜ್ಞಾನಿಗಳು ಮತ್ತು ಎರಡು ಸಂಸ್ಥೆಗಳ ಪ್ರಾಚ್ಯಶಾಸ್ತ್ರಜ್ಞರ ಪ್ರಕಾರ, ಈ ಏಳು ಲಾಡುಗಳು ಮತ್ತು ಹರಪ್ಪ ಕಾಲದ ಸಲಕರಣೆಯು ಆಗಿನ ಜನರು ಮಾಡುತ್ತಿದ್ದ ವಿವಿಧ ಆಚರಣೆಗಳ ಬಗ್ಗೆ ತಿಳಿಸಿದರೆ, ತಕ್ಷಣ ಪೋಷಕಾಂಶಗಳು ದೊರೆಯಲಿ ಎಂಬ ಕಾರಣಕ್ಕೆ ಇವರು ಸೇವಿಸುತ್ತಿದ್ದ ಪೌಷ್ಟಿಕಾಂಶಯುಕ್ತ ಸಣ್ಣ ಲಾಡುಗಳು ಕಾಣಸಿಗುತ್ತವೆ. ಇನ್ನು ಎತ್ತಿನ ಗುರುತು ಮತ್ತು ಕೊಡಲಿ ಆಕಾರದ ಸಲಕರಣೆ ಅವುಗಳ ಪ್ರಾಮುಖ್ಯ ಅವರಿಗೆಷ್ಟಿತ್ತು ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.

ಹರಪ್ಪ ಜನರ ಆಚರಣೆ ತಿಳಿಸುವಂತಿದೆ
ಈ ಲಾಡುಗಳನ್ನು ತಯಾರಿಲು ಬಳಸುತ್ತಿದ್ದ ಆಹಾರ ಪದಾರ್ಥ ಯಾವುದು, ಹರಪ್ಪ ಜನರ ಕೃಷಿ ಪದ್ಧತಿ ಹೇಗಿತ್ತು ಎಂಬುದನ್ನು ಸೂಚಿಸುತ್ತದೆ. ಈಗ ಕಂಡುಬರುತ್ತಿರುವ ವೈಜ್ಞಾನಿಕ ಸಂಗತಿಗಳು ಭಾರತದ ಇತಿಹಾಸದಲ್ಲಿ ದಾಖಲಾಗದ ವೈಭವವನ್ನು ಬಯಲಿಗಿಡುತ್ತದೆ ಎಂದಿದ್ದಾರೆ ಅಗ್ನಿಹೋತ್ರಿ. ಅಷ್ಟೇ ಅಲ್ಲ, ಈ ಆಹಾರ ಪದಾರ್ಥಗಳ ಉಂಡೆ, ಎತ್ತುಗಳ ಚಿತ್ರಗಳು ಮತ್ತು ತಾಮ್ರದ ಸಲಕರಣೆಯು ಹರಪ್ಪ ಜನರು ಮಾಡಿಕೊಂಡಿದ್ದ ಆಚರಣೆಯನ್ನು ಸೂಚಿಸುತ್ತದೆ ಎಂದು ಅಭಿಪ್ರಾಯ ಮಾಡಲಾಗಿದೆ ಎಂಬುದನ್ನು ಒರಿಸ್ಸಾ ಪೋಸ್ಟ್​ನಲ್ಲಿ ವರದಿ ಮಾಡಲಾಗಿದೆ.

ಇದನ್ನೂ ಓದಿ: ಮೊಘಲ್ ಚಕ್ರವರ್ತಿ ಕಮ್ ಬಕ್ಷ್ ಕಾಲದ 10.9 ಗ್ರಾಂ ಚಿನ್ನದ ನಾಣ್ಯ ಹರಾಜಿಗೆ; ಮೂಲ ಬೆಲೆ 45ರಿಂದ 50 ಲಕ್ಷ!

Published On - 4:53 pm, Mon, 29 March 21