ಕರ್ನಾಟಕದಲ್ಲಿ ತಾರಕಕ್ಕೆ ಏರಿರುವ ಹಿಜಾಬ್-ಕೇಸರಿಶಾಲು ವಿವಾದಕ್ಕೆ ರಾಷ್ಟ್ರಮಟ್ಟದ ನಾಯಕರಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕುಂದಾಪುರ ಕಾಲೇಜೊಂದರಲ್ಲಿ ಹಿಜಾಬ್ (Hijab) ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಈಗಾಗಲೇ ಒಮ್ಮೆ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಇಂದು ಮತ್ತೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಮರ ಮೇಲೆ ದ್ವೇಷ ಸಾಧಿಸುವುದು ಭಾರತದಲ್ಲಿ ಸಾಮಾನ್ಯವಾಗುತ್ತಿದೆ ಎಂದು ಹೇಳಿದ್ದಾರೆ.
ಇಂದು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಒಂದಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಜೈಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಆಗ ಅಲ್ಲೊಬ್ಬಳು ಮುಸ್ಲಿಂ ಹುಡುಗಿ ಬುರ್ಕಾ-ಹಿಜಾಬ್ ಧರಿಸಿ ಬಂದಿದ್ದಾಳೆ. ಆಕೆಯನ್ನು ನೋಡಿದ ವಿದ್ಯಾರ್ಥಿಗಳು ಮತ್ತಷ್ಟು ದೊಡ್ಡದಾಗಿ ಘೋಷಣೆ ಕೂಗಿದರು. ಅದಕ್ಕೆ ಪ್ರತಿಯಾಗಿ ಆ ವಿದ್ಯಾರ್ಥಿನಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದ್ದು, ಒಮರ್ ಅಬ್ದುಲ್ಲಾ ಕೂಡ ಅದನ್ನು ಶೇರ್ ಮಾಡಿಕೊಂಡಿದ್ದಾರೆ.
ಬಾಲಕಿ ಒಬ್ಬಳೇ ಹೋಗುತ್ತಿದ್ದಾಗ ಈ ವಿದ್ಯಾರ್ಥಿಗಳು ಅದೆಷ್ಟು ಆಕ್ರಮಣಕಾರಿಯಾಗಿ ಆಕೆಯನ್ನು ಟಾರ್ಗೆಟ್ ಮಾಡಿದ್ದಾರೆ. ಎಷ್ಟು ಧೈರ್ಯ ಇರಬೇಕು ಅವರಿಗೆ. ಭಾರತದಲ್ಲಿ ಈಗ ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುವುದು ಸಂಪೂರ್ಣವಾಗಿ ಸಾಮಾನ್ಯವಾಗಿಬಿಟ್ಟಿದೆ ಮತ್ತು ಅದು ಬಹಿರಂಗವಾಗಿ ನಡೆಯುತ್ತಿದೆ. ತನ್ನ ವೈವಿದ್ಯತೆಯನ್ನು ಸಂಭ್ರಮಿಸುವ ರಾಷ್ಟ್ರವಾಗಿ ಭಾರತ ಉಳಿದಿಲ್ಲ ಎಂದು ಒಮರ್ ಅಬ್ದುಲ್ಲಾ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ಕೂಡ ಹಿಜಾಬ್ ವಿವಾದದ ಬಗ್ಗೆ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು, ಪ್ರತಿ ವ್ಯಕ್ತಿಯೂ ತನಗಿಷ್ಟವಾದ ಉಡುಪು ಧರಿಸಲು ಸ್ವತಂತ್ರ. ಇನ್ನೊಬ್ಬರು ಅದನ್ನು ಇಷ್ಟಪಡಲಿ, ಬಿಡಲಿ ಅದು ಅವರ ಹಕ್ಕು ಆಗಿರುತ್ತದೆ. ಜನಪ್ರತಿನಿಧಿಗಳು ಕೇಸರಿ ಬಟ್ಟೆ ಧರಿಸುತ್ತಾರೆ ಎಂದಾದ ಮೇಲೆ ಈ ಹುಡುಗಿಯರು ಯಾಕೆ ಹಿಜಾಬ್ ಧರಿಸಬಾರದು. ಮುಸ್ಲಿಮರು ಎರಡನೇ ದರ್ಜೆ ನಾಗರಿಕರಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಕೇಸರಿ ಖಾವಿ ಧರಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಮತ್ತು ಬಿಜೆಪಿ ನಾಯಕಿ ಉಮಾಭಾರತಿ ಫೋಟೋವನ್ನೂ ಶೇರ್ ಮಾಡಿಕೊಂಡಿದ್ದರು. ಸದ್ಯ ಕರ್ನಾಟಕದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ನಾಳೆಯಿಂದ ಮೂರು ದಿನಗಳ ಕಾಲ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: H.R. Leelavathi: ‘ಥೂ, ಇವಳಿಗೆ ನಾಚಿಕೆ ಇಲ್ಲ ಮಾನ ಮರ್ಯಾದೆ ಇಲ್ಲ’ ಹೊರಗಿನವರು ಆಗ ಹೀಗೆಲ್ಲಾ ಪ್ರೋತ್ಸಾಹಿಸಿದರು
Published On - 6:27 pm, Tue, 8 February 22