H.R. Leelavathi: ‘ಥೂ, ಇವಳಿಗೆ ನಾಚಿಕೆ ಇಲ್ಲ ಮಾನ ಮರ್ಯಾದೆ ಇಲ್ಲ’ ಹೊರಗಿನವರು ಆಗ ಹೀಗೆಲ್ಲಾ ಪ್ರೋತ್ಸಾಹಿಸಿದರು

Culture : ‘ನಮಗೆಲ್ಲಾ ಒಂದು ರೀತಿಯ ಸಾಂಸ್ಕೃತಿಕ ಸಂಸ್ಕಾರ ಮನೆಯಲ್ಲೇ ದೊರೆತಿತ್ತು. ತೀರಾ ಹಾಡಿನ ಹುಚ್ಚಿನವಳಾದ ನನಗೆ ಶಾಲೆಗೆ ಹೋಗುವಾಗ ಪ್ರೈಮರಿ ಸ್ಕೂಲಿನಲ್ಲಿ, ಗೆಳತಿಯರೆಲ್ಲಾ ಹಾಡುವ ತಮಿಳು, ತೆಲುಗು, ಹಿಂದಿ, ಮರಾಠಿ ಹಾಡುಗಳನ್ನು ಕಲಿಯುವ ಆಸೆಯಿಂದ ಅವರಿಗೆ ಬೆಲ್ಲದ ಲಂಚ ಕೊಟ್ಟು ಕಲಿಯುತ್ತಿದ್ದೆ.’ ಎಚ್. ಆರ್. ಲೀಲಾವತಿ

H.R. Leelavathi: ‘ಥೂ, ಇವಳಿಗೆ ನಾಚಿಕೆ ಇಲ್ಲ ಮಾನ ಮರ್ಯಾದೆ ಇಲ್ಲ’ ಹೊರಗಿನವರು ಆಗ ಹೀಗೆಲ್ಲಾ ಪ್ರೋತ್ಸಾಹಿಸಿದರು
ಸುಗಮ ಸಂಗೀತ ಕಲಾವಿದೆ ಎಚ್. ಆರ್. ಲೀಲಾವತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Feb 08, 2022 | 6:33 PM

ಎಚ್. ಆರ್. ಲೀಲಾವತಿ | H.R. Leelavathi:  ನಾನು ಹುಟ್ಟಿದ್ದು ಸುಸಂಸ್ಕೃತ ಕುಲೀನ ಮನೆತನದಲ್ಲಿ. ನನ್ನ ತಂದೆ ಬಾಬೂರಾಮಣ್ಣನವರಿಗೆ ಹುಟ್ಟಿನಿಂದಲೂ ಸಂಗೀತದ ಖಯಾಲಿ. ಅವರು ಗಮಕ ವಾಚನ ಮಾಡುತ್ತಿದ್ದರು. ಆಕಾಶವಾಣಿಯಲ್ಲಿ ಕೂಡ ರಂಗಗೀತೆಗಳನ್ನು ಹಾಡುತ್ತಿದ್ದರು. ಬಿಎಂಶ್ರೀಯವರ ಪಟ್ಟ ಶಿಷ್ಯರಾಗಿದ್ದರು. ಅವರ ಇಂಗ್ಲೀಷ್​ ಕವನಗಳಿಗೆ ರಾಗ ಅಳವಡಿಸಿ ಹಾಡುತ್ತಿದ್ದರು. ನನ್ನ ತಾಯಿ ಜಯಲಕ್ಷ್ಮೀ ರಂಗಭೂಮಿ ಕಲಾವಿದ ಕೊಟ್ಟೂರಪ್ಪನವರ ಶಿಷ್ಯೆಯಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು. ಅವರಿಂದ ಗಝಲ್​ಗಳನ್ನೂ ಕಲಿತು ಹಾಡುತ್ತಿದ್ದರು. ನಾಗಪುರ, ವಿಜಯವಾಡಾದಿಂದ ಪ್ರಕಟವಾಗುತ್ತಿದ್ದ ಸ್ವರಸಮೇತದ ಹಿಂದೀ ಹಾಡುಗಳನ್ನು ಕಲಿತು ಹಾಡುತ್ತಿದ್ದರು. ಪ್ರತೀ ದಿನ ಸಂಜೆ ಹಾರ್ಮೋನಿಯಂ ನುಡಿಸಿ ಹಾಡುವಾಗ, ನಾನು, ನನ್ನ ಇಬ್ಬರು ಅಣ್ಣ ಮತ್ತು ತಮ್ಮ ಸುತ್ತಲೂ ಕುಳಿತುಕೊಳ್ಳುತ್ತಿದ್ದೆವು. ರಾತ್ರಿ ಹೊತ್ತು ದೇವರೆದುರು ಕೂರಿಸಿ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ನಮ್ಮ ಮನೆಯಲ್ಲಿ ಗ್ರಾಮೊಫೋನ್ ಇತ್ತು. ಅದರಲ್ಲಿ ಸೈಗಲ್, ಪಂಕಜ್ ಮಲ್ಲಿಕ್, ಗೋಹರ್​ಜಾನ್ ಇತ್ಯಾದಿ ಕಲಾವಿದರ ಹಾಡುಗಳನ್ನು ಕೇಳುತ್ತಿದ್ದೆ.

ಎಚ್. ಆರ್. ಲೀಲಾವತಿ, ಹಿರಿಯ ಸುಗಮ ಸಂಗೀತ ಕಲಾವಿದೆ, ಮೈಸೂರು

*

ನಮ್ಮ ತಂದೆ ಹಾಡುತ್ತಿದ್ದ ಭಾವಗೀತೆಗಳು, ರಂಗಗೀತೆಗಳನ್ನು ಚಿಕ್ಕಂದಿನಿಂದಲೇ ಕಲಿತಿದ್ದೆ. ನಮ್ಮ ಮನೆತುಂಬಾ ರಾಶಿಪುಸ್ತಕಗಳಿದ್ದವು. ನಮಗೆಲ್ಲಾ ಒಂದು ರೀತಿಯ ಸಾಂಸ್ಕೃತಿಕ ಸಂಸ್ಕಾರ ಮನೆಯಲ್ಲೇ ದೊರೆತಿತ್ತು. ತೀರಾ ಹಾಡಿನ ಹುಚ್ಚಿನವಳಾದ ನನಗೆ ಶಾಲೆಗೆ ಹೋಗುವಾಗ ಪ್ರೈಮರಿ ಸ್ಕೂಲಿನಲ್ಲಿ, ಗೆಳತಿಯರೆಲ್ಲಾ ಹಾಡುವ ತಮಿಳು, ತೆಲುಗು, ಹಿಂದಿ, ಮರಾಠಿ ಹಾಡುಗಳನ್ನು ಕಲಿಯುವ ಆಸೆಯಿಂದ ಅವರಿಗೆ ಬೆಲ್ಲದ ಲಂಚ ಕೊಟ್ಟು ಕಲಿಯುತ್ತಿದ್ದೆ.  ಚಿಕ್ಕಂದಿನಿಂದಲೂ ಎಲ್ಲ ಭಾಷೆಯ ಎಲ್ಲ ಪ್ರಕಾರಗಳೂ ನನಗಿಷ್ಟವೇ. ಈಗಲೂ ಪಾಶ್ಚಿಮಾತ್ಯ ಸಂಗೀತ ಪ್ರಕಾರಗಳನ್ನೂ ಕೇಳುತ್ತೇನೆ.

ರವೀಂದ್ರ ಸಂಗೀತವನ್ನು ಕಲಕತ್ತೆಗೆ ಹೋಗಿರುವವರೆಗೂ ನಾನು ಕೇಳಿರಲಿಲ್ಲ. ನನ್ನ ತಮ್ಮ ಅಲ್ಲಿ ಎಂಜಿನಿಯರ್ ಆಗಿದ್ದ. ಅವನಿಗೂ ಸಂಗೀತದ ಖಯಾಲಿ. ಸದಾ ಹಾಡುತ್ತಲೇ ಹಲವಾರು ವರ್ಷಗಳ ಕಾಲ ಅಲ್ಲಿಯೇ ಇದ್ದ. ರವೀಂದ್ರ ಗೀತೆಗಳನ್ನೂ ಹಾಡುತ್ತಿದ್ದ. ನನಗೆ ಎಲ್ಲ ಸ್ವರೂಪದ ಸಂಗೀತವು ಇಷ್ಟವಾಗಿದ್ದರಿಂದ ಆ ಸಂಗೀತವನ್ನೂ ಕಲಿಯಬೇಕು ಎನ್ನಿಸಿತು. ತಕ್ಷಣ ನನ್ನ ತಮ್ಮ ರಾಬಿನ್  ರೇ ಎಂಬ ಗುರುಗಳನ್ನು ಗೊತ್ತು ಮಾಡಿದ. ಅವರು ದಿನಾ ಮನೆಗೇ ಬಂದು ಕಲಿಸುತ್ತಿದ್ದರು. ನನ್ನ ತಮ್ಮ ಬೆಂಗಾಲಿಯಲ್ಲಿ ಸಾಹಿತ್ಯ ಬರೆದು ಕೊಡುತ್ತಿದ್ದೆ. ನಾನದನ್ನು ಕನ್ನಡದಲ್ಲಿ ಬರೆಯುತ್ತಿದ್ದೆ. ನಾನು ಬೆಂಗಾಲಿ ಕಲಿತರೂ ಬರೆಯುವುದು ನಿಧಾನವಾಗುತ್ತಿತ್ತು.

Musician HR Leelavthi‘s Birthday Special

ಕಾರ್ಯಕ್ರಮವೊಂದರಲ್ಲಿ ಎಚ್. ಆರ್. ಲೀಲಾವತಿ

ನಮ್ಮ ಮನೆಯಲ್ಲಿ ಈ ಎಲ್ಲದಕ್ಕೂ ತುಂಬಾ ಪ್ರೋತ್ಸಾಹವಿತ್ತಾದರೂ ಹೊರಗಿನ ಜನ ಮಾತ್ರ, ‘ಥೂ ಇವಳಿಗೆ ನಾಚಿಕೆ ಇಲ್ಲ ಮಾನ ಮರ್ಯಾದೆ ಇಲ್ಲ’ ಎಂದು ಆಡಿಕೊಳ್ಳುತ್ತಿದ್ದರು. ಆದರೂ ನಾನು ಈ ಕ್ಷೇತ್ರದಲ್ಲಿ ಮನೆಯವರ ಪ್ರೋತ್ಸಾಹದೊಂದಿಗೆ ಪಟ್ಟುಬಿಡದೆ ಬೆಳೆಯುತ್ತ ಹೋದೆ. ಆಕಾಶವಾಣಿ ಕಲಾವಿದೆಯಾದೆ. ಮೈಸೂರು ಬೆಂಗಳೂರು ಆಕಾಶವಾಣಿಯ ಮೂಲಕ ನೂರಾರು ರವೀಂದ್ರ ಗೀತೆಗಳನ್ನು ಹಾಡುಗಳನ್ನು ಹಾಡಿದೆ. ಸಾಕಷ್ಟು ವೇದಿಕೆಗಳಲ್ಲಿ ಹಾಡಿದೆ. ಬೆಂಗಾಲಿಯ ಭಾಷಾ ಮರ್ಯಾದೆಯನ್ನು ಅರಿತುಕೊಂಡು ಪದಗಳ ಉಚ್ಛಾರಣೆ ಮಾಡಬೇಕಾಗುತ್ತದೆ. ಅದು ಬಹಳ ಮುಖ್ಯ. ಅದೊಂದು ವಿಭಿನ್ನವಾದ ಸಂಗೀತ ಸ್ವರೂಪ. ಶಿಷ್ಯರಿಗೂ ಕಲಿಸಿದೆ.

ಇದನ್ನೂ ಓದಿ : H.R.Leelavathi Birthday : ರೇಡಿಯೋದಲ್ಲಿ ಹಾಡುತ್ತಿದ್ದ ಇವರನ್ನು ಭೇಟಿಯಾಗುತ್ತೇನೆ ಎಂದುಕೊಂಡಿರಲಿಲ್ಲ, ಧನ್ಯವಾದ ಫೇಸ್​ಬುಕ್! 

Published On - 6:24 pm, Tue, 8 February 22