ಸಂಸತ್​ನಲ್ಲಿ ದೇವೇಗೌಡರ ಕೈ ಹಿಡಿದು ಕೂರಿಸಿ, ಆತಿಥ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ

| Updated By: ಸುಷ್ಮಾ ಚಕ್ರೆ

Updated on: Nov 30, 2021 | 5:12 PM

ತಮ್ಮ ಭೇಟಿಯ ಫೋಟೋಗಳನ್ನು ನರೇಂದ್ರ ಮೋದಿಯವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಂಸತ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಇಂದು ಭೇಟಿಯಾಗಿ ಬಹಳ ಸಂತೋಷವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ಸಂಸತ್​ನಲ್ಲಿ ದೇವೇಗೌಡರ ಕೈ ಹಿಡಿದು ಕೂರಿಸಿ, ಆತಿಥ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ
ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ- ಮಾಜಿ ಪ್ರಧಾನಿ ದೇವೇಗೌಡರ ಭೇಟಿ
Follow us on

ನವದೆಹಲಿ: 2 ದಿನಗಳಿಂದ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇಂದು ಸಂಸತ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (HD Deve Gowda) ಭೇಟಿಯಾಗಿ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿಯವರೇ ದೇವೇಗೌಡರ ಕೈ ಹಿಡಿದು, ಕುರ್ಚಿಯಲ್ಲಿ ಕೂರಿಸಿ, ನಗುತ್ತಾ ಮಾತನಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿವೆ. ಹಾಲಿ ಪ್ರಧಾನಿ ಮತ್ತು ಮಾಜಿ ಪ್ರಧಾನಿಗಳ ಆತ್ಮೀಯತೆಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿರುವ ಹೆಚ್​ಡಿ ದೇವೇಗೌಡರು ಸಂಸತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ತಮ್ಮ ಭೇಟಿಯ ಫೋಟೋಗಳನ್ನು ನರೇಂದ್ರ ಮೋದಿಯವರೇ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಂಸತ್​ನಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಇಂದು ಭೇಟಿಯಾಗಿ ಬಹಳ ಸಂತೋಷವಾಯಿತು ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆಯಿಂದ ಸಂಸತ್​ನಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಡಿಸೆಂಬರ್ 23ರವರೆಗೆ ನಡೆಯಲಿರುವ ಅಧಿವೇಶನದ ಕಲಾಪದಲ್ಲಿ ಕೃಷಿ ಕಾಯ್ದೆ, ಕ್ರಿಪ್ಟೋಕರೆನ್ಸಿ ಮುಂತಾದ ಅನೇಕ ವಿಷಯಗಳನ್ನು ಚರ್ಚಿಸಲಾಗಿದೆ. ಈ ಹಿಂದೆ ಏಪ್ರಿಲ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ರೈತರ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದರು. ಅದಕ್ಕೆ ಪೂರಕವಾಗಿ ಪ್ರಧಾನಿ ಮೋದಿ ಕೂಡ ಸ್ಪಂದಿಸಿದ್ದರು.

ನವ ದೆಹಲಿಯಲ್ಲಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದಲ್ಲಿ ಐಐಟಿ ಸ್ಥಾಪನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೆ. ನಾನೇ ಪ್ರಧಾನಿಯವರ ಭೇಟಿಗೆ ಕಾಲಾವಕಾಶ ಕೇಳಿದ್ದೆ. ಮೊದಲಿನಿಂದಲೂ ಪ್ರಧಾನಿ ನನ್ನ ಜೊತೆ ಆತ್ಮೀಯವಾಗೆ ನಡೆದುಕೊಂಡಿದ್ದಾರೆ. ಹಾಸನ ಕ್ಕೆ ಐ ಐ ಟಿ ಬೇಕು ಅಂತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ ಆದರೆ ಕೇಂದ್ರ ಶಿಕ್ಷಣ ಸಚಿವರು ಆಗುವುದಿಲ್ಲ ಎಂದಿದ್ದರು ಹಾಗಾಗಿ ಇವತ್ತು ಖುದ್ದು ಪ್ರಧಾನಿಗಳನ್ನು ಭೇಟಿಯಾಗಿ ವಿವರಿಸಿ ಮತ್ತೊಮ್ಮೆ ಮನವಿ ಮಾಡಿದೆ
ಸಚಿವೆ ಸ್ಮೃತಿ ಇರಾನಿ ಅವರ ಕಾಲದಿಂದಲೂ ಪತ್ರ ವ್ಯವಹಾರ ನಡೆಯುತ್ತಿದೆ. ಈ ಹಿಂದೆ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದೆ ಆದರೆ ಐಐಟಿ ಸ್ಥಾಪನೆ ಸಾಧ್ಯವಿಲ್ಲ ಎಂದು ಮರು ಪತ್ರ ಬರೆದಿದ್ದರು ಈ ಹಿನ್ನಲೆ ನೇರವಾಗಿ ಪ್ರಧಾನಿಗಳನ್ನ ಭೇಟಿ ಮಾಡಿ ಚರ್ಚಿಸಿದ್ದೇನೆ. ಐ ಐ ಟಿ ಯೋಜನೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಕರ್ನಾಟಕದಲ್ಲಿದ್ದಾಗ ಮಾಡಿದ ಯೋಜನೆಯಾಗಿದ್ದು, ಇಂದು ಮತ್ತೆ ಪ್ರಧಾನಿ ಮೋದಿಯವರ ಬಳಿ ಚರ್ಚೆ ಮಾಡಿದ್ದೇನೆ. ಮೋದಿ ಅವರು ಪ್ರಹ್ಲಾದ್ ಜೋಷಿಯವರ ಬಳಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದಿದ್ದಾರೆ.

 

ನನ್ನ ಆರೋಗ್ಯದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಭೇಟಿಯ ವೇಳೆ ಕೇಳಿದರು. ನನ್ನ ಮಂಡಿ ನೋವಿನ ಬಗ್ಗೆಯೂ ಅವರು ಕೇಳಿದರು. ತುಮಕೂರು ಮತ್ತು ಮಂಡ್ಯದಲ್ಲಿ ಪರಿಷತ್ ಚುನಾವಣೆಗೆ ಹೋಗಿ ನಾನು ಪ್ರಚಾರ ಮಾಡುತ್ತೆನೆ ಕುಮಾರಸ್ವಾಮಿ ಆರು ಕ್ಷೇತ್ರದಲ್ಲಿ ಹೋಗಿ ಪ್ರಚಾರ ಮಾಡುತ್ತಾರೆ. ಎಲ್ಲಾ ಕಡೆ ಅಭ್ಯರ್ಥಿಹಾಕಲು ನಮ್ಮ ಹತ್ತಿರ ಹಣವಿಲ್ಲ. ಹಾಗಾಗಿ, ಎಲ್ಲಾ ಕಡೆ ಅಭ್ಯರ್ಥಿಗಳನ್ನ ಹಾಕಿಲ್ಲ. ವಿಧಾನ ಪರಿಷತ್ ಚುನಾವಣೆ ವಿಚಾರ ರಾಜ್ಯದಲ್ಲಿ ಕುಮಾರಸ್ವಾಮಿ ಯಡಿಯೂರಪ್ಪ ತೀರ್ಮಾನ ಮಾಡ್ತಾರೆ ಗೊಂದಲವಾಗದಂತೆ ನಿರ್ಧಾರ ಮಾಡಿ‌ ಎಂದು ಹೇಳಿದ್ದೇನೆ. ಬಿಜೆಪಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡೋಣ. ಮುಂದಿನ ಚುನಾವಣೆಗೆ ಇದೇ ಮೈತ್ರಿ ಮುಂದುವರೆಯುವ ಚರ್ಚೆ ನಡೆದಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಮನಸ್ಸು ಇದೆ. ಅದೇ ಮನಸ್ಸು ಬೇರೆ ನಾಯಕರಿಗೆ ಇಲ್ಲ.ಖರ್ಗೆಯವರ ಮಾತು ಎಷ್ಟು ನಡೆಯುತ್ತೆ? ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಏನಿದೆಯೋ ಗೊತ್ತಿಲ್ಲ. ನಾವು ಮೇಲೆ ಬಿದ್ದು ಮೈತ್ರಿ ಮಾಡಿಕೊಳ್ಳಿ ಎಂದು ಹೇಳಲು ಆಗುವುದಿಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಕುಮಾರಸ್ವಾಮಿ ನಿರ್ಧಾರ ಮಾಡ್ತಾರೆ. 3 ಮತ್ತು 4ನೇ ತಾರೀಖಿನಂದು ತುಮಕೂರಿನಲ್ಲಿ ಪ್ರಚಾರ ಮಾಡುತ್ತೆನೆ 5 ಮತ್ತು 6ನೇ ತಾರೀಖಿನಂದು ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ. ಬಿಬಿಎಂಪಿ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೆವು. ಅವರು ಮೇಯರ್ ಆಗಿದ್ದರು, ನಾವು ಉಪ ಮೇಯರ್ ಆಗಿದ್ದೆವು ಅದೆಲ್ಲ ಮರೆತಿರಬಹುದು ಎಂದು ದೇವೇಗೌಡರು ಹೇಳಿದ್ದಾರೆ.

ತಮ್ಮ ಜೀವನಾಧಾರಿತ ಪುಸ್ತಕ ಬಿಡುಗಡೆ ವಿಚಾರವಾಗಿಯೂ ಮಾತನಾಡಿರುವ ದೇವೇಗೌಡರು, ಈಗಾಗಲೇ ಆನ್ ಲೈನ್ ಸಂಸ್ಥೆಗಳಾದ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್​ಗೆ 6 ಸಾವಿರ ಪುಸ್ತಕ ನೀಡಿದ್ದಾರೆ. ಪಬ್ಲಿಷರ್ ಪುಸ್ತಕ ಬಿಡುಗಡೆಗಾಗಿ ವ್ಯಕ್ತಿಯನ್ನ ಫೈನಲ್ ಮಾಡುತ್ತಿದ್ದಾರೆ. ಯಾವತ್ತು ಪುಸ್ತಕ ಅಧಿಕೃತವಾಗಿ ಬಿಡುಗಡೆ ಅಂತ ದಿನಾಂಕ ಫಿಕ್ಸ್ ಆಗಿಲ್ಲ ಎಂದಿದ್ದಾರೆ.

ಕೊರೋನಾದಿಂದ ಮಾರುಕಟ್ಟೆಯಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಇಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೋಟಗಾರಿಕೆ ಬೆಳೆಗಳು ತೀವ್ರ ಕುಸಿತವಾಗಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಒತ್ತಾಯಿಸಿದ್ದರು. ಟೊಮೆಟೊ, ಹೂವು, ತರಕಾರಿ ಹಾಗೂ ಹಣ್ಣು ಸೇರಿದಂತೆ ವಿವಿಧ ತೋಟಗಾರಿಕೆ ಉತ್ಪನಗಳ ಬೆಲೆ ಕುಸಿತವಾಗಿದೆ. ಯೋಗ್ಯ ಬೆಲೆ ಸಿಗದೆ ಕಂಗೆಟ್ಟ ರೈತರು ಹಣ್ಣು ತರಕಾರಿ ಸುರಿದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ನಗರ ಪ್ರದೇಶಗಳಿಂದ ಜನರು ಗ್ರಾಮೀಣ ಭಾಗಕ್ಕೆ ಮರು ವಲಸೆ ಬಂದಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮೇಲೆ ಒತ್ತಡ ಹೆಚ್ಚಾಗಿದೆ. ಅಲ್ಲದೆ, ನಿರುದ್ಯೋಗದ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯೂ ರೈತರ ನೆರವಿಗೆ ಬರುತ್ತಿಲ್ಲ. ಶೀಘ್ರವಾಗಿ ಹಾಳಾಗುವ ಹಣ್ಣು, ತರಕಾರಿ ದಾಸ್ತಾನು ಮಾಡಲು ಸೂಕ್ತ ಶೀಥಲ ಗೃಹಗಳ ವ್ಯವಸ್ಥೆಯೂ ಇಲ್ಲ. ಇಂತಹ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಹೆಚ್​ಡಿ ದೇವೇಗೌಡರು ಮನವಿ ಮಾಡಿದ್ದರು.

ಇದಾದ ಬಳಿಕ, ಈ ತಿಂಗಳ ಆರಂಭದಲ್ಲಿಯೂ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಹೆಚ್​ಡಿ ದೇವೇಗೌಡರು ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದರು. ಕೇದಾರನಾಥ ಕ್ಷೇತ್ರದಲ್ಲಿ ಆದಿ ಶಂಕರಾಚಾರ್ಯರ ಪುತ್ಥಳಿ ನಿರ್ಮಾಣ ಮಾಡುವ ಮೂಲಕ ಪ್ರಧಾನಿ ಮೋದಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ನಾನು ಕೂಡ ಕೇದಾರನಾಥಕ್ಕೆ ತೆರಳಿ ಶಂಕರಾಚಾರ್ಯರ ದರ್ಶನ ಪಡೆಯಬೇಕೆಂದು ದೇವೇಗೌಡರು ತಮ್ಮ ಇಚ್ಛೆಯನ್ನು ಪ್ರಕಟಿಸಿದ್ದರು.

ಇದನ್ನೂ ಓದಿ: ಚಳಿಗಾಲದ ಅಧಿವೇಶನಕ್ಕೂ ಮುನ್ನ ನಡೆದ  ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು; ವಿಪಕ್ಷಗಳಿಂದ ವಾಗ್ದಾಳಿ

ತೋಟಗಾರಿಕಾ ಬೆಳೆಗಾರರಿಗೆ ನೆರವಾಗುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

Published On - 2:22 pm, Tue, 30 November 21