
ಶ್ರೀನಗರ, ನವೆಂಬರ್ 16: ಶ್ರೀನಗರದ ಹೊರವಲಯದಲ್ಲಿರುವ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟ(Blast)ದಲ್ಲಿ ಮೃತಪಟ್ಟವರ 9 ಜನರ ಪೈಕಿ 57 ವರ್ಷದ ಟೈಲರ್ ಕೂಡ ಒಬ್ಬರು. ಹರಿಯಾಣದ ಫರಿದಾಬಾದ್‌ನಿಂದ ಇತ್ತೀಚೆಗೆ ವಶಪಡಿಸಿಕೊಂಡ ಸ್ಫೋಟಕಗಳ ದೊಡ್ಡ ಸಂಗ್ರಹದಿಂದ ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಮಾದರಿಗಳನ್ನು ಹೊರತೆಗೆಯುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ.
ಪ್ರತ್ಯೇಕ ಸ್ಫೋಟಕ ಪ್ಯಾಕೆಟ್‌ಗಳಿಗೆ ಚೀಲಗಳನ್ನು ಹೊಲಿಯಲು ಪೊಲೀಸರು ಮೊಹಮ್ಮದ್ ಶಫಿ ಪಾರೆ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ಅವರ ಸಂಬಂಧಿಕರು ಹೇಳಿದ್ದಾರೆ. ಬೆಳಗ್ಗೆ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದರು, ಮಧ್ಯೆ ಪ್ರಾರ್ಥನೆಗೆಂದು ಮನೆಗೆ ಬಂದಿದ್ದರು, ಅವರ ಮಗಳು ಅಪ್ಪಾ ಹೋಗಬೇಡಿ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ, ಬಳಿಕ ಅವರು ಮನೆಗೆ ಹಿಂದಿರುಗಲೇ ಇಲ್ಲ ಎಂದು ಸಂಬಂಧಿ ತಿಳಿಸಿದ್ದಾರೆ.
ರಾತ್ರಿ 9 ಗಂಟೆ ಸುಮಾರಿಗೆ ಅವರು ಊಟಕ್ಕೆ ಮನೆಗೆ ಹಿಂತಿರುಗಿದಾಗ, ಅವರ ಮಗಳು ಚಳಿಯಿಂದಾಗಿ ಮನೆಯಲ್ಲಿಯೇ ಇರಲು ಕೇಳಿಕೊಂಡಿದ್ದಳು. ಆದರೆ ಕೆಲಸ ಮುಗಿಸಲು ಪೊಲೀಸ್ ಠಾಣೆಗೆ ಹಿಂತಿರುಗಬೇಕೆಂದು ಅವರು ಹೇಳಿದರು. ನಾನು ಕೆಲಸ ಮುಗಿಸಿ ಬರುತ್ತೇನೆ ಎಂಬುದು ಅವರ ಕೊನೆಯ ಮಾತುಗಳಾಗಿತ್ತು. ಅವರನ್ನು ಮತ್ತೆಂದೂ ನೋಡುವುದಿಲ್ಲ ಎಂದು ಕುಟುಂಬಕ್ಕೆ ತಿಳಿದಿರಲಿಲ್ಲ.
ನಂತರ ರಾತ್ರಿಯಲ್ಲಿ ನಮಗೆ ಸ್ಫೋಟದ ಶಬ್ದ ಕೇಳಿಸಿತು. ನಾವು ಪೊಲೀಸ್ ಠಾಣೆಗೆ ಓಡಿ ಹೋದೆವು. ಇಡೀ ಪೊಲೀಸ್ ಠಾಣೆ ಅವಶೇಷಗಳ ರಾಶಿಯಾಗಿ ಮಾರ್ಪಟ್ಟಿತ್ತು, ದೇಹಗಳು ಛಿದ್ರವಾಗಿದ್ದವು ಎಂದು ಶೇಖ್ ಹೇಳಿದರು.
ಮತ್ತಷ್ಟು ಓದಿ: ಶ್ರೀನಗರ ನೌಗಾಮ್ ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: ಪೊಲೀಸರು ಸೇರಿ 9 ಮಂದಿ ಸಾವು, ದೆಹಲಿ ಸ್ಫೋಟ ಬೆನ್ನಲ್ಲೇ ಮತ್ತೊಂದು ಕೃತ್ಯ
ಶಫಿಯವರನ್ನು ಹುಡುಕುತ್ತಾ ಗಂಟೆಗಟ್ಟಲೆ ಕಳೆದರು ಮತ್ತು ಕೊನೆಗೆ ಆಸ್ಪತ್ರೆಯ ಒಂದು ಮೂಲೆಯಲ್ಲಿ ಅವನ ಶವವನ್ನು ಪತ್ತೆ ಮಾಡಿದ್ದರು. ಶಫಿಯವರಿಗೆ ಮೂವರು ಮಕ್ಕಳಿದ್ದು, ಕುಟುಂಬದ ಏಕೈಕ ಅವರು ಏಕೈಕ ಆಧಾರಸ್ತಂಭವಾಗಿದ್ದರು. ಶಫಿ ಪೊಲೀಸ್ ಪಡೆಯ ಸದಸ್ಯರಾಗಿದ್ದರೆ, ಅವರ ಕುಟುಂಬ ಈಗ ತಮ್ಮ ಆದಾಯದ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಮತ್ತೊಬ್ಬ ಸಂಬಂಧಿ ತಾರಿಕ್ ಅಹ್ಮದ್ ಶಾ ಹೇಳಿದ್ದಾರೆ.
ದುಃಖ ಮತ್ತು ಕೋಪದಲ್ಲಿರುವ ಕುಟುಂಬವರು, ತಮ್ಮ ಗತಿ ಬೇರೆ ಯಾರಿಗೂ ಬರುವುದು ಬೇಡ ಎಂದು ಹೇಳಿದ್ದು, ಪೊಲೀಸ್ ಠಾಣೆಯನ್ನು ವಸತಿ ಪ್ರದೇಶದಿಂದ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದೆ.
ನೌಗಮ್ ಸ್ಫೋಟದಲ್ಲಿ ಮೃತಪಟ್ಟ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮತ್ತು ತೀವ್ರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹೇಳಿದೆ.
ಶುಕ್ರವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಸ್ಫೋಟ ಸಂಭವಿಸಿದೆ. ಹೆಚ್ಚು ಅಸ್ಥಿರವಾದ ಸ್ಫೋಟಕಗಳನ್ನು ನಿರ್ವಹಿಸುವಾಗ ಪೊಲೀಸರು ಅತ್ಯಂತ ಎಚ್ಚರಿಕೆಯಿಂದ ನಡೆದುಕೊಂಡರೂ ಇದು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ