ಈಗಾಗಲೇ ಬೇಸಿಗೆ ಶುರುವಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಂತೂ ತೀರ ಒಣಹವೆ. ಈ ಮಧ್ಯೆ ಮತ್ತೆ ಮುಂದಿನ ಐದು ದಿನಗಳವರೆಗೆ ದೇಶದ ಹಲವು ಭಾಗಗಳಲ್ಲಿ ಉಷ್ಣಅಲೆ (Heat Wave) ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯ ದೇಶದ ಉತ್ತರ ಮತ್ತು ಪಶ್ಚಿಮದ ಹಲವು ರಾಜ್ಯಗಳು ಪ್ರದೇಶಗಳಲ್ಲಿ ಬಿರುಬಿಸಿಲು ಶುರುವಾಗಿದ್ದು, ಸೌರಾಷ್ಟ್ರ-ಕಚ್ ಸೇರಿ ಇನ್ನೂ ಅನೇಕ ಪ್ರದೇಶಗಳಲ್ಲಿ ಮಾರ್ಚ್ 31ರವರೆಗೂ ಉಷ್ಣ ಗಾಳಿ ಇರಲಿದೆ ಎಂದು ಐಎಂಡಿ (IMD) ತಿಳಿಸಿದೆ.
ದೆಹಲಿಯಲ್ಲಿ ಮಾರ್ಚ್ 28ರಂದು ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ಗೆ ತಲುಪಬಹುದು. ರಾಷ್ಟ್ರರಾಜಧಾನಿಯಲ್ಲಿ ಶನಿವಾರ ಕನಿಷ್ಠ ತಾಪಮಾನ 20.1 ಡಿಗ್ರಿ ಸೆಲ್ಸಿಯಸ್ ಇತ್ತು. ಇದು ಈ ಸೀಸನ್ನ ಸರಾಸರಿ ತಾಪಮಾನಕ್ಕಿಂತ ಮೂರು ಪಟ್ಟು ಜಾಸ್ತಿ. ಹಾಗೇ, ಬೆಳಗ್ಗೆ 8.30ರ ವೇಳೆಗೆ ತೇವಾಂಶದ ಪ್ರಮಾಣ ಶೇ.56ರಷ್ಟಿತ್ತು ಎಂದೂ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಾರ್ಚ್ 31ರವರೆಗೆ ಜಮ್ಮು-ಕಾಶ್ಮೀರ, ಉತ್ತರಾಖಂಡ್, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಹರ್ಯಾಣದ ದಕ್ಷಿಣ ಭಾಗಗಳು ಸೇರಿ ಹಲವೆಡೆ ಉಷ್ಣ ಅಲೆ ಇರಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ಎಚ್ಚರಿಕೆ ನೀಡಿದೆ.
ಮಳೆ ಮುನ್ಸೂಚನೆ
ಈ ಮಧ್ಯೆ ಭಾರತದ ಈಶಾನ್ಯ ಮತ್ತು ದಕ್ಷಿಣ ಪರ್ಯಾಯ ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದಾಗಿಯೂ ಹವಾಮಾನ ತಜ್ಞರು ತಿಳಿಸಿದ್ದಾರೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ, ಪಶ್ಚಿಮ ಬಂಗಾಳ, ಸಿಕ್ಕಿಂ ಸೇರಿ ಹಲವೆಡೆ ಚದುರಿದ ಮಳೆಯಾಗಬಹುದು. ಅಲ್ಲಲ್ಲಿ ಗುಡುಗು-ಮಿಂಚು ಸಹಿತ ಜೋರಾದ ಮಳೆಯೂ ಬರಬಹುದು ಎಂದೂ ಹೇಳಿದೆ.
ಇದನ್ನೂ ಓದಿ: Nitish Kumar ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ ಪೊಲೀಸರ ವಶಕ್ಕೆ