ನವದೆಹಲಿ: ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಈ ವರ್ಷದ ಏಪ್ರಿಲ್ (April) ತಿಂಗಳಲ್ಲಿ ಕಳೆದ 122 ವರ್ಷಗಳಲ್ಲೇ ಅತ್ಯಂತ ಉಷ್ಣ ಅಲೆ (Heatwave) ಏರ್ಪಟ್ಟಿದೆ. 1 ಶತಮಾನದಲ್ಲೇ ಯಾವ ವರ್ಷವೂ ಏಪ್ರಿಲ್‌ನಲ್ಲಿ ಇಷ್ಟು ಗರಿಷ್ಠ ತಾಪಮಾನ ದಾಖಲಾಗಿರಲಿಲ್ಲ. ವಾಯುವ್ಯ ಭಾರತದಲ್ಲಿ ಈ ತಿಂಗಳು 35.9 ಡಿಗ್ರಿ ಸೆಲ್ಸಿಯಸ್ ಮತ್ತು ಮಧ್ಯ ಭಾರತದಲ್ಲಿ 37.78 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ, ದೇಶದ ವಾಯುವ್ಯ ಮತ್ತು ಪಶ್ಚಿಮ ಮಧ್ಯ ಭಾಗಗಳಾದ ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲಿ ಮೇ ತಿಂಗಳಿನಲ್ಲಿ ಬಿಸಿ ತಾಪಮಾನ ಮುಂದುವರಿಯಲಿದೆ ಎಂದು ಹೇಳಿದರು.
ದಕ್ಷಿಣ ಪೆನಿನ್ಸುಲರ್ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಭಾಗಗಳಲ್ಲಿ ಮೇ ತಿಂಗಳಲ್ಲಿ ರಾತ್ರಿಯ ವೇಳೆ ಅತಿಯಾದ ಉಷ್ಣಾಂಶ ಇರುತ್ತದೆ ಎಂದು ಮೊಹಾಪಾತ್ರ ಹೇಳಿದ್ದಾರೆ. ಏಪ್ರಿಲ್‌ನಲ್ಲಿ ಭಾರತದ ಸರಾಸರಿ ತಾಪಮಾನವು 35.05 ಡಿಗ್ರಿಗಳಾಗಿದ್ದು, ಇದು 122 ವರ್ಷಗಳಲ್ಲಿ ನಾಲ್ಕನೇ ಅತಿ ಹೆಚ್ಚು ತಾಪಮಾನವಾಗಿದೆ ಎಂದು ಅವರು ಹೇಳಿದರು.
ವಾಯುವ್ಯ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳು ಮತ್ತು ತೀವ್ರ ಆಗ್ನೇಯ ಪರ್ಯಾಯ ದ್ವೀಪವು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ನಿರೀಕ್ಷೆಯಿದೆ. ಮಾರ್ಚ್‌ನಲ್ಲಿ, ವಾಯುವ್ಯ ಭಾರತವು ಸುಮಾರು ಶೇ. 89ರಷ್ಟು ಮಳೆಯ ಕೊರತೆಯನ್ನು ದಾಖಲಿಸಿದೆ. ಆದರೆ ಈ ಕೊರತೆಯು ಏಪ್ರಿಲ್‌ನಲ್ಲಿ ಸುಮಾರು ಶೇ. 83ರಷ್ಟಿತ್ತು ಎಂದು ಮೊಹಾಪಾತ್ರ ಹೇಳಿದರು.
ಬಿಸಿ ಗಾಳಿಯಿಂದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ವಿದರ್ಭದಲ್ಲಿ ಹವಾಮಾನ ಇಲಾಖೆ ‘ಆರೆಂಜ್’ ಅಲರ್ಟ್ ನೀಡಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರ ಮತ್ತು ಪಶ್ಚಿಮ ರಾಜಸ್ಥಾನದ ವಿದರ್ಭವು ಕಳೆದ ಎರಡು ತಿಂಗಳಿನಿಂದ 40 ಡಿಗ್ರಿ ಸೆಲ್ಸಿಯಸ್‌ನಿಂದ 45 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಗರಿಷ್ಠ ತಾಪಮಾನವನ್ನು ಸತತವಾಗಿ ವರದಿ ಮಾಡಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನವು ಮುಂದಿನ 5 ದಿನಗಳಲ್ಲಿ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ ಮೇ 1ರವರೆಗೆ ಬಿಸಿ ಗಾಳಿಯನ್ನು ಅನುಭವಿಸುವ ಸಾಧ್ಯತೆಯಿದೆ. ಬಿಹಾರ, ಜಾರ್ಖಂಡ್, ಆಂತರಿಕ ಒಡಿಶಾ, ಛತ್ತೀಸ್‌ಗಢ ಮತ್ತು ಗಂಗಾನದಿ ಪಶ್ಚಿಮ ಬಂಗಾಳ, ತೆಲಂಗಾಣದಲ್ಲಿ ಇನ್ನೆರಡು ದಿನ ಬಿಸಿ ಗಾಳಿ ಉಂಟಾಗುವ ಸಾಧ್ಯತೆಯಿದೆ.
Published On - 6:29 pm, Sat, 30 April 22