ದ್ವೇಷ ರಾಜಕಾರಣ ಬಿಡಿ ಎಂದು ಪ್ರಧಾನಿ ಮೋದಿಗೆ ಪತ್ರ ಬರೆದ ಗುಂಪಿಗೆ ಕೌಂಟರ್ ಕೊಟ್ಟ ಇನ್ನೊಂದು ನಿವೃತ್ತರ ಗುಂಪು; ಪ್ರಧಾನಿ ಆಡಳಿತ ಹೊಗಳಿ ಪತ್ರ
ಇದೀಗ ಪತ್ರ ಬರೆದಿರುವ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ಸಶಸ್ತ್ರ ಪಡೆಗಳ ಹಿರಿಯ ಸಿಬ್ಬಂದಿ ತಮ್ಮನ್ನು ತಾವು, ದೇಶದ ಬಗ್ಗೆ ಕಳವಳ ಹೊಂದಿರುವ ನಾಗರಿಕರು ಎಂದು ಕರೆದುಕೊಂಡಿದ್ದಾರೆ.
ಬಿಜೆಪಿ ಸರ್ಕಾರದಿಂದ ದ್ವೇಷ ರಾಜಕಾರಣ ಮಾಡಲಾಗುತ್ತಿದೆ. ಮೌನ ಮತ್ತು ಜಾಣಕಿವುಡನ್ನು ಬಿಟ್ಟು ಕೂಡಲೇ ಈ ದ್ವೇಷ ರಾಜಕಾರಣ ನಿಲ್ಲಿಸಿ ಎಂದು ಕೆಲವೇ ದಿನಗಳ ಹಿಂದೆ ಸುಮಾರು 108 ಮಾಜಿ ಅಧಿಕಾರಿಗಳು (ನಾಗರಿಕ ಸೇವೆಯಲ್ಲಿ ಆಡಳಿತ ನಡೆಸಿ, ನಿವೃತ್ತರಾದವರು) ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದಿದ್ದರು. ಹಾಗೇ, ಈಗ ಮಾಜಿ ನ್ಯಾಯಾಧೀಶರು, ನಿವೃತ್ತ ಅಧಿಕಾರಶಾಹಿಗಳು ಮತ್ತು ಸಶಸ್ತ್ರ ಪಡೆಗಳಲ್ಲಿ ಕೆಲಸ ಮಾಡಿ ನಿವೃತ್ತರಾದವರೆಲ್ಲ ಸೇರಿ ಇನ್ನೊಂದು ಪತ್ರವನ್ನು ಪ್ರಧಾನಿ ಮೋದಿಗೆ ಬರೆದಿದ್ದಾರೆ. ಅಂದಹಾಗೇ, ಇವರೆಲ್ಲ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಹೊಗಳಿ ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ ಎಂದು ಮಾಜಿ ನ್ಯಾಯಾಧೀಶರು, 97 ನಿವೃತ್ತ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಯ 97 ನಿವೃತ್ತ ಸಿಬ್ಬಂದಿ ಸಹಿ ಹಾಕಿದ್ದಾರೆ. ಅಂದು ಪತ್ರ ಬರೆದ ಸಾಂವಿಧಾನಿಕ ನಡವಳಿಕೆ ಗುಂಪು (Constitutional Conduct Group) ಏನನ್ನು ಟೀಕಿಸಿತ್ತೋ, ಅದನ್ನೇ ಹೊಗಳಿ ಈ ಗುಂಪು ಪತ್ರದಲ್ಲಿ ಬರೆದಿದೆ. ಕಳೆದ ಕೆಲವು ದಿನಗಳ ಹಿಂದೆ ನಿವೃತ್ತರ ಗುಂಪೊಂದು ಪ್ರಧಾನಿಗೆ ಬರೆದ ಪತ್ರದಲ್ಲಿ ದ್ವೇಷ ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿದೆ. ಆದರ ಆ ಪತ್ರ ಸಾರ್ವಜನಿಕರಲ್ಲಿ ತಪ್ಪಾದ ಮತ್ತು ಕೆಟ್ಟ ಅಭಿಪ್ರಾಯವನ್ನು ಮೂಡಿಸುವಂತಿದೆ. ಅಷ್ಟೇ ಅಲ್ಲ, ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳೆಲ್ಲವನ್ನೂ ಮರೆಮಾಚುವಂತಿದೆ ಎಂದು ಈ ಗುಂಪು ತಮ್ಮ ಪತ್ರದಲ್ಲಿ ಹೇಳಿದೆ.
ಇದೀಗ ಪತ್ರ ಬರೆದಿರುವ ನಿವೃತ್ತ ನ್ಯಾಯಾಧೀಶರು, ಅಧಿಕಾರಿಗಳು, ಸಶಸ್ತ್ರ ಪಡೆಗಳ ಹಿರಿಯ ಸಿಬ್ಬಂದಿ ತಮ್ಮನ್ನು ತಾವು, ದೇಶದ ಬಗ್ಗೆ ಕಳವಳ ಹೊಂದಿರುವ ನಾಗರಿಕರು ಎಂದು ಕರೆದುಕೊಂಡಿದ್ದಾರೆ. ಹಾಗೇ, ಸಾಂವಿಧಾನಿಕ ನಡವಳಿಕೆ ಗುಂಪು ಪ್ರಧಾನಿ ಮೋದಿಯವರಿಗೆ ಬರೆದ ಪತ್ರದಲ್ಲಿ ಯಾವುದೇ ಉತ್ತೇಜನ ತುಂಬುವ, ಪ್ರೇರಣೆ ನೀಡುವ ಅಂಶಗಳೇ ಇಲ್ಲ ಎಂದೂ ಹೇಳಿದ್ದಾರೆ. ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಈ ದೇಶದ ಜನರು ಹೊಂದಿರುವ ಬಲವಾದ ನಂಬಿಕೆಯಿಂದ ಹತಾಶರಾಗಿರುವವರೆಲ್ಲ ಸೇರಿ ಈ ಪತ್ರ ಬರೆದಿದ್ದಾರೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಂವಿಧಾನಿಕ ನಡವಳಿಕೆ ಗುಂಪು ಬರೆದಿರುವ ಪತ್ರ ಪಕ್ಷಪಾತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆಯೂ ಕೆಟ್ಟ ಅಭಿಪ್ರಾಯ ಮೂಡಿಸುವಂತಿದೆ. ಅಷ್ಟೇ ಅಲ್ಲ, ತಮ್ಮಲ್ಲಿರುವ ಪೂರ್ವಾಗ್ರಹ, ತಪ್ಪು ತಿಳಿವಳಿಕೆಯನ್ನೇ ಜನರ ಮೇಲೆಯೂ ಹೇರುತ್ತಿದೆ. ಈ ಸರ್ಕಾರ ಮಾಡಿದ್ದೆಲ್ಲ ಕೆಟ್ಟ ಕೆಲಸವೇ ಎಂಬರ್ಥದಲ್ಲಿ ಅದು ಪತ್ರ ಬರೆದಿದೆ ಎಂಬ ಅಂಶಗಳನ್ನೂ ಇವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.